ಬೆಳಗಾವಿ : ಬಿಜೆಪಿಯಿಂದ ಚುನಾವಣೆಯಲ್ಲಿ ಸ್ಪರ್ದಿಸಲು ಟಿಕೆಟ್ ದೊರೆಯದೇ ಕಾಂಗ್ರೆಸ್ ಸೇರಿ ತಮ್ಮದೇ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಶೀಘ್ರದಲ್ಲಿ ಸ್ಥಾಪನೆಯಾಗಲಿರುವ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗುವ ಸಾಧ್ಯತೆಗಳಿವೆ.
ಆರ್ ಎಸ್ ಎಸ್ ಮೂಲದವರಾದ ಶೆಟ್ಟರ್ ಸುಮಾರು ಮೂವತ್ತು ವರುಷಗಳಿಂದ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳಸಿದವರಲ್ಲಿ ಪ್ರಮುಖರು. ಆದರೆ, ಪಕ್ಷವನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಬೇಕೆಂದು ಪಕ್ಷದ ರಾಷ್ಟೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ ಮತ್ತು ಕೇಂದ್ರ ಸಚಿವ, ಹುಬ್ಬಳ್ಳಿಯ ಸಂಸದ ಪ್ರಲಾದ ಜೋಶಿ ಅವರು ಬಿಜೆಪಿ ಮುಖಂಡರಾದ ಲಕ್ಷ್ಮಣ ಸವದಿ ಮತ್ತು ಜಗದೀಶ ಶೆಟ್ಟರ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಲಿಲ್ಲ. ಹಾಗಾಗಿ ಕಾಂಗ್ರೆಸ್ ಖುದ್ದಾಗಿ ಅವರನ್ನು ಸಂಪರ್ಕಿಸಿ ಪಕ್ಷಕ್ಕೆ ಸೇರಿಸಿಕೊಂಡು ಅವರ ಕ್ಷೇತ್ರಗಳಿಂದಲೇ ಸ್ಪರ್ಧಿಸಲು ಟಿಕೆಟ್ ನೀಡಿತ್ತು.
ಸವದಿ ಅಥಣಿ ಕ್ಷೇತ್ರದಿಂದ 50,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿಯ ಮಹೇಶ ಕುಮಟೊಳ್ಳಿ ಅವರನ್ನು ಸೋಲಿಸಿದರೆ, ಶೆಟ್ಟರ್ ಅವರು ಸುಮಾರು 30,000 ಮತಗಳಿಂದ ಬಿಜೆಪಿಯ ಮಹೇಶ ಟೆಂಗಿನಕಾಯಿ ಅವರಿಗೆ ಸೋತರು.
ಸವದಿ ಸರಕಾರದಲ್ಲಿ ಸಚಿವರಾಗುವುದು ನಿಶ್ಚಿತ ಎನ್ನಲಾಗುತ್ತಿದ್ದು “ಆದರೆ ಸೋತು ತಮ್ಮ ರಾಜಕೀಯವೇ ಕೊನೆಯಾಯಿತು. ಆ ಕಡೆ ಬಿಜೆಪಿಯೂ ಇಲ್ಲ, ಇತ್ತ ಕಾಂಗ್ರೆಸ್ ನಿಂದ ಸ್ಪರ್ಧಿಸಿದರೂ ಸೋಲು ಎಂದು ನಿರಾಶರಾಗಿರುವ ಶೆಟ್ಟರ್ ಅವರ ಕೈ ಬಿಡದಿರಲು ಕಾಂಗ್ರೆಸ್ ನಿರ್ಧರಿಸಿದೆ. ಮುಖ್ಯಮಂತ್ರಿ ಮತ್ತು ಹಲವು ಸಲ ಸಚಿವರಾಗಿದ್ದ ಅವರಿಗೆ ಕಾಂಗ್ರೆಸ್ ಸಚಿವ ಸ್ಥಾನ ನೀಡಿ ನಂತರ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಿದೆ ಎನ್ನಲಾಗುತ್ತಿದೆ.
ತನ್ನ ಈ ಯೋಜನೆಯನ್ನು ಕಾಂಗ್ರೆಸ್ ಪಕ್ಷ ಶೆಟ್ಟರ್ ಅವರಲ್ಲಿ ಪ್ರಸ್ತಾಪಿಸಿದ್ದು ಆದರೆ ಶೆಟ್ಟರ್ ಅವರು ತಮ್ಮ ಅಭಿಪ್ರಾಯವನ್ನು ಇನ್ನೂ ಸ್ಪಷ್ಟ ಪಡಿಸಿಲ್ಲ.
ಭಾರತದ ಯಾವುದೇ ಪ್ರಜೆಯನ್ನು ರಾಷ್ಟ್ರಪತಿ ಹುದ್ದೆ ಹೊರತು ಪಡಿಸಿ ಯಾವುದೇ ಹುದ್ದೆಯಲ್ಲಿ ಸ್ಥಾಪಿಸಬಹುದು. ಹಾಗೆ ನೇಮಿಸಲ್ಪಟ್ಟವರು ಆರು ತಿಂಗಳಲ್ಲಿ ತಾವು ನೇಮಿಸಲ್ಪಟ್ಟದ್ದು ರಾಜ್ಯದಲ್ಲಿಯಾಗಿದ್ಜರೆ ವಿಧಾನ ಪರಿಷತ್ ಅಥವಾ ವಿಧಾನಸಭೆಗೆ ಆರಿಸಿ ಕಳಿಸಬೇಕು. ಕೇಂದ್ರ ಸರಕಾರವಾಗಿದ್ದರೆ ಲೋಕಸಭೆ ಇಲ್ಲವೇ ರಾಜ್ಯಸಭೆಗೆ ಆಯ್ಕೆಯಾಗಬೇಕು. ಹಾಗಾದರೆ ಮಾತ್ರ ಅವರು ತಮ್ಮ ಸ್ಥಾನದಲ್ಲಿ ಮುಂದುವರೆಯಲು ಸಾಧ್ಯ.