ಬೆಳಗಾವಿ, ೧: ತಮ್ಮ ಪ್ರವೇಶಕ್ಕೆ ನಿಷೇಧವಿದ್ದರೂ ಬೆಳಗಾವಿಗೆ ಆಗಮಿಸಲು ಯತ್ನಿಸಿದ್ದ ಮಹಾರಾಷ್ಟ್ರದ ಸುಮಾರು 50 ಶಿವಸೇನೆಯ ಕಾರ್ಯಕರ್ತರನ್ನು ಕರ್ನಾಟಕ ಪೊಲೀಸರು ರಾಜ್ಯದ ನಿಪ್ಪಾಣಿ ಗಡಿಯಲ್ಲಿ ತಡೆದು ಮಹಾರಾಷ್ಟ್ರದ ಪೊಲೀಸರಿಗೆ ಹಸ್ತಾಂತರಿಸಿದರು.
ರಾಜ್ಯೋತ್ಸವದ ಹಿನ್ನಲೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ‘ಕರಾಳ ದಿನ’ ಆಚರಣೆಗೆ ನೀಡಿದ್ದ ಕರೆಗೆ ಸ್ಪಂದಿಸಿ ಕೊಲ್ಹಾಪುರ ಉದ್ದವ ಠಾಕ್ರೆ ಬಣದ ಶಿವಸೇನೆಯ ಸುಮಾರು 50 ಕಾರ್ಯಕರ್ತರು ಕಾಗಲ್ ತಾಲೂಕಿನವರೆಗೂ ವಾಹನಗಳಲ್ಲಿ ಬಂದು ಅಲ್ಲಿಂದ ನಿಪ್ಪಾಣಿಯ ಬಳಿಯ ಕೊಗನೊಳ್ಳಿ ಗಡಿಯವರೆಗೂ ಪಾದಯಾತ್ರೆಯಲ್ಲಿ ಬಂದು ಕರ್ನಾಟಕ ಪ್ರವೇಶಿಸಲು ಯತ್ನಿಸಿದರು. ಆದರೆ ಕೊಗನೋಳ್ಳಿ ಚೆಕ್ ಪೋಸ್ಟನಲ್ಲಿದ್ದ ನಿಪ್ಪಾಣಿ ಪೊಲೀಸರು ಅವರನ್ನು ತಡೆದರು. ಇದನ್ನು ಪ್ರತಿಭಟಿಸಿ ಪುಣೆ-ಬೆಂಗಳೂರು ರಾಷ್ಟೀಯ ಹೆದ್ದಾರಿಯ ಮೇಲೆಯೇ ಕುಳಿತು ಎಂಇಎಸ್ ಸಾಂಪ್ರದಾಯಿಕ ಘೋಷಣೆಯಾದ ಬೆಳಗಾವಿ, ನಿಪ್ಪಾಣಿ, ಖಾನಾಪುರ, ಕಾರವಾರ, ಬೀದರ, ಭಾಲ್ಕಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಲೇಬೇಕೆಂದು ಘೋಷಣೆ ಮಾಡಿದರು.
ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಕೊಲ್ಹಾಪುರ ಪೊಲೀಸರು ಅವರನ್ನು ವಶಕ್ಕೆ ಪಡೆದು ಹಿಂದಕ್ಕೆ ಕರೆದುಕೊಂಡು ಹೋದರು.