ಹೊಸದಿಲ್ಲಿ, ೩೧- ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಮಾಡಿರುವ ಲೈಂಗಿಕ ಕಿರುಕುಳದ ಆರೋಪದ ವಿಚಾರವಾಗಿ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ಕೇಂದ್ರದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಪೋಕ್ಸೊ ಕಾಯ್ದೆ ಮತ್ತು ತಕ್ಷಣದ ಬಂಧನವು ಬಿಜೆಪಿ ಹೊರತುಪಡಿಸಿ ದೇಶದ ಇತರ ಎಲ್ಲಾ ಆರೋಪಿಗಳಿಗೆ ಮಾತ್ರ ಅನ್ವಯಿಸುತ್ತದೆಯೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ. “ಪೋಕ್ಸೊ ಅರ್ಜಿ ಮತ್ತು 164 ಹೇಳಿಕೆಗಳ ನಂತರ ತಕ್ಷಣದ ಬಂಧನವು ಬ್ರಿಜ್ ಭೂಷಣ್ ಹೊರತುಪಡಿಸಿ ಎಲ್ಲಾ ಆರೋಪಿಗಳಿಗೆ ಅನ್ವಯಿಸುತ್ತದೆಯೇ? ಏಕೆಂದರೆ ಅವರು: 1) ಬಿಜೆಪಿಗೆ ಸೇರಿದವರು 2) ಅವರಿಗೆ ಐಕಾನಿಕ್ ಮಹಿಳಾ ಕುಸ್ತಿಪಟುಗಳು ಬೇಕಾಗಿಲ್ಲ; ಮತಗಳು ಮಾತ್ರ ಮುಖ್ಯ 3) ಸರ್ಕಾರಕ್ಕೆ ಕಾಳಜಿ ಇಲ್ಲ. ಇದು ನನ್ನ ಹೊಸ ಭಾರತವೇ?” ಎಂದು ಕೇಳಿದ್ದಾರೆ.
ಒಲಿಂಪಿಕ್ ಪದಕ ವಿಜೇತ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಮತ್ತು ಸಾಕ್ಷಿ ಮಲಿಕ್ ಮತ್ತು ವಿನೇಶ ಫೋಗಟ್ ಅವರು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಮುಖ್ಯಸ್ಥ ಹಾಗು ಬಿಜೆಪಿ ಸಂಸದ ಬ್ರಿಜ್ ಭೂಷಣ ಶರಣ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ ಮತ್ತು ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಕಳೆದ ತಿಂಗಳು ದೆಹಲಿ ಪೊಲೀಸರಿಗೆ ಸುಪ್ರೀಮ ಕೋರ್ಟ ನೋಟಿಸ್ ನೀಡಿದ ಬಳಿಕ ಮಾತ್ರ ಸಿಂಗ್ ವಿರುದ್ಧ ಎರಡು ಎಫ್ಐಆರ್ಗಳನ್ನು ದಾಖಲಿಸಲಾಗಿದೆ.
ಮೊದಲ ಎಫ್ಐಆರ್ ಅಪ್ರಾಪ್ತ ಕ್ರೀಡಾಪಟುವಿನ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದ್ದು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್ಗಳ ಜೊತೆಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿಯಲ್ಲಿ ಪ್ರಕರಣ ನೋಂದಾಯಿಸಲಾಗಿದೆ. ಎರಡನೆಯದನ್ನು ವಯಸ್ಕರ ದೂರುಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಮೇ 28ರಂದು ಜಂತರ್ ಮಂತರ್ ಬಳಿಯ ತಮ್ಮ ಪ್ರತಿಭಟನಾ ಸ್ಥಳದಿಂದ ಹೊಸ ಸಂಸತ್ ಭವನದ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸುತ್ತಿದ್ದಾಗ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ತಡೆದು ಬಂಧಿಸಿದರು. ವಿಶ್ವ ಚಾಂಪಿಯನ್ಶಿಪ್ಗಳ ಕಂಚಿನ ವಿಜೇತ ವಿನೇಶ ಫೋಗಟ್ ಮತ್ತು ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಜೊತೆಗೆ ಸಾಕ್ಷಿ ಮಲಿಕ್ ಅವರನ್ನು ಬಂಧಿಸಿ ನಂತರ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆಗಾಗಿ ಕುಸ್ತಿಪಟುಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.