ಬೆಂಗಳೂರು: ಪಿಎಫ್ಐ ನಿಷೇಧ ಕುರಿತು ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರು, ಆರ್ ಎಸ್ ಎಸ್ ಕೂಡ ನಿಷೇಧಿಸಬೇಕು ಎಂದು ಹೇಳಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ‘ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಂಡರೆ ನಮ್ಮ ವಿರೋಧ ಇಲ್ಲ. ಯಾವುದೇ ಸಂಘಟನೆಯಾದರೂ ನಿಷೇಧಿಸಬೇಕು. ಆರ್ಎಸ್ ಎಸ್ ಸಹ ಸಮಾಜದ ಶಾಂತಿ ಹಾಳು ಮಾಡುತ್ತಿದ್ದಾರೆ. ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
‘ಯಾರು ಸಮಾಜದ ಕಂಟಕರಾಗಿರುತ್ತಾರೋ ಅವರ ವಿರುದ್ಧ ಕ್ರಮ ತೆಗೆದುಕೊಂಡರೆ ನಮ್ಮ ಅಭ್ಯಂತರವಿಲ್ಲ. ಶಾಂತಿ ಹಾಳು ಮಾಡುತ್ತಿದ್ದವರ ಮೇಲೆ ಕ್ರಮ ಜರುಗಿಸಲಿ. ನಾನು ಆಗಲೂ ಹೇಳುತ್ತಿದ್ದೆ. ಈಗಲೂ ಹೇಳುತ್ತಿದ್ದೇನೆ. ದ್ವೇಷದ ರಾಜಕಾರಣ ಮಾಡಿದರೆ ಕ್ರಮ ಜರುಗಿಸಲಿ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಟ್ವೀಟ್ ಕೂಡ ಮಾಡಿರುವ ಅವರು, ‘ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವ ಸಂಸ್ಥೆಗಳು ಹಿಂದು, ಮುಸ್ಲಿಮ್ ಯಾರದ್ದೇ ಆಗಿರಲಿ ಮುಲಾಜಿಲ್ಲದೇ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಹೇಳುತ್ತಲೇ ಬಂದಿದ್ದನ್ನು ಪುನರುಚ್ಚರಿಸುತ್ತೇನೆ. ಜಾತಿ, ಧರ್ಮಗಳ ಆಧಾರದ ಪಕ್ಷಪಾತ, ಪೂರ್ವಗ್ರಹಗಳಿಂದ ಸರ್ಕಾರ ವರ್ತಿಸಬಾರದು ಎನ್ನುವುದಷ್ಟೇ ನನ್ನ ಸಲಹೆ ಎಂದು ಟ್ವೀಟ್ ಮಾಡಿದ್ದಾರೆ.
‘ನುಡಿದಂತೆ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದ್ದೇವೆ’ ಎಂಬ ಬಿಜೆಪಿ ಟ್ವೀಟ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ‘ಪಿಎಫ್ಐ ಜೊತೆಗೆ ಒಂದೇ ನಾಣ್ಯದ ಇನ್ನೊಂದು ಮುಖ ಆಗಿರುವ ಆರ್ ಎಸ್ ಎಸ್ ವಿರುದ್ಧ ಬಿಜೆಪಿ ಯಾವಾಗ ಕ್ರಮ ಕೈಗೊಳುತ್ತದೆ? ಎಂದು ಪ್ರಶ್ನಿಸಿದ್ದಾರೆ.
ಎಲ್ಲ ರೀತಿಯ ಕೋಮುವಾದ ಮತ್ತು ದ್ವೇಷ ಸಮಾಜದ ರಚನೆಗೆ ಹಾನಿಕಾರಕ. ಅದನ್ನು ನಿಗ್ರಹಿಸುವ ಕೆಲಸ ಆಗಬೇಕು’ ಎಂದು ಅವರು ಆಗ್ರಹಿಸಿದ್ದಾರೆ.