ಬೆಳಗಾವಿ : ಕಳೆದ ಮಳೆಗಾಲದಲ್ಲಿ ರಾಜ್ಯ ಭಾರಿ ಪ್ರವಾಹ ಸ್ಥಿತಿ ಎದುರಿಸಿತು, ಬೆಂಗಳೂರಿನ ರಸ್ತೆಗಳಲ್ಲಿ ಜನರು ದೋಣಿಗಳಲ್ಲಿ ಸಂಚರಿಸಿದರು. ಜನ ಆಶ್ರಯ, ಆಹಾರವಿಲ್ಲದೇ ಬಳಲಿದರು, ಆಗ ನೆರವಿಗೆ ಬಾರದ ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಈಗ ರಾಜ್ಯದ ನೆನಪು ಮಾಡಿಕೊಂಡು ಬರುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಧಾರವಾಡ ಮಾಜಿ ಶಾಸಕ ವಿನಯ ಕುಲಕರ್ಣಿ ಅವರ ಹುಟ್ಟುಹಬ್ಬದ ನಿಮಿತ್ತ ಜಿಲ್ಲೆಯ ಕಿತ್ತೂರಿನಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಗಾವಿಗೆ ಬಂದಿದ್ದ ಅವರು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ, ರಾಜ್ಯದಲ್ಲೂ ಇದೇ ಪಕ್ಷ ಅಧಿಕಾರಕ್ಕೆ ಬಂದರೆ ಬಂಪರ್ ಅಭಿವೃದ್ಧಿ ಹೊಂದಬಹುದೆಂದು ಜನರನ್ನು ನಂಬಿಸಲು ವಿಫಲವಾದ ಅದು ತನ್ನ ಹಳೆ ವಾಮಮಾರ್ಗ ಪದ್ಧತಿ ಬಳಸಿ ಬೇರೆ ಪಕ್ಷಗಳ ಶಾಸಕರನ್ನು ಖರೀದಿಸಿ ಕರ್ನಾಟಕದಲ್ಲಿ ಸರಕಾರ ರಚಿಸಿದೆ ಎಂದು ಅವರು ಹೇಳಿದರು.
ಡಬಲ್ ಇಂಜಿನ್ ಸರಕಾರದಿಂದ ರಾಜ್ಯಕ್ಕೆ ಒಳ್ಳೆಯದಾಗಲಿದೆ ಎಂದು ಹೇಳಿದ್ದ ಬಿಜೆಪಿಯವರು ರಾಜ್ಯ ಎಷ್ಟು, ಎಲ್ಲಿ ಅಭಿವೃದ್ಧಿಯಾಗಿದೆ ಎಂದು ಜನರಿಗೆ ತೋರಿಸಿಕೊಡಲಿ ಎಂದು ಅವರು ಹೇಳಿದರು.
ರಾಜ್ಯ ಬಿಜೆಪಿ ಸರಕಾರದ 40% ಕಮಿಷನ್ ಈಗ ದೇಶದಲ್ಲಿ ಲೋಕಪ್ರಿಯವಾಗಿ ಜನಜನಿತವಾಗುತ್ತಿದೆ. ದೇಶದ ಪ್ರತಿ ರಾಜ್ಯದಲ್ಲೂ ಈ ಕುರಿತು ಚರ್ಚೆಯಾಗುತ್ತಿವೆ. ಆದರೆ “ನಾ ಖಾವೊಂಗಾ, ನಾ ಖಾನೆ ದೂಂಗಾ” ಎಂದಿದ್ದ ಪ್ರಧಾನಿ ಮೋದಿ ಗುತ್ತಿಗೆದಾರರೊಬ್ಬರಿಂದ 40% ಕಮಿಷನ್ ಕೇಳಿ ಸಚಿವ ಸ್ಥಾನದಿಂದ ವಜಾಗೊಂಡಿರುವ ಈಶ್ವರಪ್ಪನವರ ಕುರಿತು ಯಾಕೆ ಈ ವರೆಗೂ ಪ್ರತಿಕ್ರಿಯಿಸಿಲ್ಲವೆಂದು ಪ್ರಶ್ನಿಸಿದರು.
ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಮಧ್ಯೆ ಸಂಬಂಧ ಹದಗೆಟ್ಟಿದೆ ಎಂದು ಬಿಜೆಪಿ ಚುನಾವಣೆ ಹಿನ್ನಲೆಯಲ್ಲಿ ಅಪಪ್ರಚಾರ ಮಾಡುತ್ತಿದೆ, ಆದರೆ ವಾಸ್ತವವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮಧ್ಯೆ ಸಂಬಂಧ ಕೆಟ್ಟುಹೋಗಿದೆ. ತಮ್ಮನ್ನು ಚುನಾವಣೆಗೆ ಮಾತ್ರ ಬಳಸಿಕೊಂಡು ನಂತರ ಕೈ ಬಿಡುವ ಕುರಿತು ಯಡಿಯೂರಪ್ಪನವರಿಗೆ ಗೊತ್ತಾಗಿದೆ ಎಂದರು.
ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ರಾಜ್ಯ ಬಿಜೆಪಿಯ ಯಾವೊಬ್ಬ ನಾಯಕನೂ ತಾನೂ ಗೆದ್ದು 3-4 ಇತರೆ ಶಾಸಕರನ್ನೂ ಗೆಲ್ಲಿಸಿಕೊಂಡು ಬರುವ ತಾಕತ್ತು ಹೊಂದಿಲ್ಲ, ಹಾಗಾಗಿ ಯಡಿಯೂರಪ್ಪರಿಲ್ಲದೇ ಬಿಜೆಪಿಗೆ ಗತಿಯಿಲ್ಲ ಎಂದು ತಿಳಿಸಿದ ಸಿದ್ದರಾಮಯ್ಯ, ಮುಂದಿನ ಸರಕಾರ ಕಾಂಗ್ರೆಸ್ಸದ್ದು ಎಂದು ಸಿದ್ದರಾಮಯ್ಯ ಹೇಳಿದರು.