ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಆಪ್ತ ಅದಾನಿ ಗುಂಪು ಖರೀದಿಸಿರುವ ದೇಶದ ಏಕೈಕ ನಂಬಿಗಸ್ಥ ಸುದ್ಧಿವಾಹಿನಿಯೆಂದೇ ಗುರುತಿಸಿಕೊಂಡಿದ್ದ ಎನ್ ಡಿಟಿವಿ ಕರ್ನಾಟಕದ ಚುನಾವಣೆ ಕುರಿತು ಮಾಡಿರುವ ಸರ್ವೇಯಲ್ಲಿ ಜನ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಅಧಿಕಾರ ನೀಡಲಿದ್ದಾರೆ ಎಂದು ಹೇಳಿದೆ. ಅಲ್ಲದೇ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರನ್ನೇ ಕರ್ನಾಟಕದ ಜನ ಆಯ್ಕೆ ಮಾಡಿದ್ದಾರೆ.
ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್ಡಿಎಸ್) ಸಹಭಾಗಿತ್ವದಲ್ಲಿ ಎನ್ಡಿಟಿವಿ ನಡೆಸಿರುವ ಸಮೀಕ್ಷೆ ಬಹಿರಂಗಪಡಿಸಿದ್ದು ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಮತ್ತು ಆನಂತರ ಯಾರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕೆಂದು ಜನರು ಬಯಸುತ್ತಿದ್ದಾರೆಂಬ ವಿಷಯದ ಕುರಿತು ಸಮೀಕ್ಷೆ ಬೆಳಕು ಚೆಲ್ಲಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರೇ ಮೊದಲ ಮತ್ತು ಅತ್ಯಂತ ಜನಪ್ರಿಯ ಆಯ್ಕೆಯಾಗಿದ್ದಾರೆ ಎಂಬ ಅಂಶ ಬಯಲಾಗಿದೆ. ಈಗಿನ ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತದ ಬಗ್ಗೆ ಬಸವಣ್ಣನ ನಾಡಿನ ಜನ ತಿರಸ್ಕರಿಸಿ ಎರಡನೇ ಸ್ಥಾನಕ್ಕೆ ನೂಕಿದ್ದಾರೆ. ಮೊದಲ ಮತ್ತು ಎರಡನೇ ಸ್ಥಾನದಲ್ಲಿ ಈ ಇಬ್ಬರು ಸ್ಥಾನ ಪಡೆದರೆ ಮೂರನೇ ಸ್ಥಾನದಲ್ಲಿ ಜೆಡಿಎಸ್ನ ಕುಮಾರಸ್ವಾಮಿ ಮೆಚ್ಚುಗೆ ಪಡೆದುಕೊಂಡಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಡಿಕೆ ಶಿವಕುಮಾರ ಇದ್ದಾರೆ. ಹಿರಿಯ ಮತದಾರರ ಮನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಬಗ್ಗೆಯೇ ಹೆಚ್ಚಿನ ಒಲವು ವ್ಯಕ್ತವಾಗಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ಶೇ. 40ರಷ್ಟು ಮಂದಿ ಸಿದ್ದರಾಮಯ್ಯ ಪರವಾಗಿದ್ದರೆ, ಶೇ. 22ರಷ್ಟು ಮಂದಿ ಮಾತ್ರ ಬೊಮ್ಮಾಯಿ ಎಂದಿದ್ದಾರೆ. ಎಚ್ಡಿ ಕುಮಾರಸ್ವಾಮಿ ಅವರಿಗೆ ಶೇ. 15, ಡಿಕೆ ಶಿವಕುಮಾರ ಅವರಿಗೆ ಶೇ. 4 ಮತ್ತು ಯಡಿಯೂರಪ್ಪ ಅವರಿಗೆ ಶೇ. 5ರಷ್ಟು ಮಂದಿ ತಮ್ಮ ಅಭಿಮತ ವ್ಯಕ್ತಪಡಿಸಿದ್ದಾರೆ.
18ರಿಂದ 25ವರ್ಷ ಒಳಗಿನ ಮತದಾರರಲ್ಲಿ ಸಿದ್ದರಾಮಯ್ಯ ಪರ ಶೇ. 40 ಒಲವು ಸೃಷ್ಟಿಯಾದರೆ, ಬೊಮ್ಮಾಯಿ ಪರ ಕೇವಲ ಶೇ. 28 ರಷ್ಟಿದೆ. ಅದೇ ರೀತಿ 56 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರ ಪ್ರಕಾರ ಶೇ. 44 ವೋಟು ಸಿದ್ದರಾಮಯ್ಯಗಿದ್ದರೆ, ಶೇ. 22ರಷ್ಟು ಬೊಮ್ಮಾಯಿ ಪರವಾಗಿದೆ. ಈ ಮೂಲಕ 56 ವರ್ಷ ಮೇಲ್ಪಟ್ಟವರು ಸಮೀಕ್ಷೆಯಲ್ಲಿ ಸಿದ್ದರಾಮಯ್ಯ ಆಡಳಿತ ಬೇಕು ಅಂದಿದ್ದಾರೆ.
ಇದು ವ್ಯಕ್ತಗತ ಲೆಕ್ಕಾಚಾರವಾದರೆ, ಇನ್ನು ಕೆಲವರು ವ್ಯಕ್ತಿ ಬದಲು ಪಕ್ಷ ನೋಡಿ ನಾವು ವೋಟ್ ಮಾಡುತ್ತೇವೆ ಎಂದೂ ಹೇಳಿಕೊಂಡಿದ್ದಾರೆ. ಶೇ. 56ರಷ್ಟು ಮಂದಿ ನಾವು ಪಕ್ಷ ನೋಡಿ ಮತ ಹಾಕುತ್ತೇವೆ ಎಂದರೆ, ಶೇ. 38ರಷ್ಟು ಮಂದಿ ನಾವು ಅಭ್ಯರ್ಥಿ ನೋಡಿ ಮತ ಹಾಕುತ್ತೇವೆ ಎಂದಿದ್ದಾರೆ. ಇನ್ನುಳಿದ ಶೇ.4 ರಷ್ಟು ಮಂದಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಗಮನಿಸಿ ಮತಚಲಾಯಿಸುತ್ತಾರೆ ಎಂದು ಸರ್ವೇ ತಿಳಿಸಿದೆ.
ಬಿಜೆಪಿಗಿಂತ ಕಾಂಗ್ರೆಸ್ ಉತ್ತಮವಾಗಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಪ್ರತಿಕ್ರಿಯಿಸಿದವರು ಹೆಚ್ಚಿನವರು ಬಿಜೆಪಿ ಸರ್ಕಾರವನ್ನು `ಭ್ರಷ್ಟ’ ಎಂದು ಅಭಿಪ್ರಾಯಪಟ್ಟಿದ್ದಾರೆ. 59% ಮಂದಿ ಬಿಜೆಪಿಯನ್ನು ಭ್ರಷ್ಟ ಎಂದರೆ 35% ಜನರು ಕಾಂಗ್ರೆಸ್ ಪಕ್ಷವನ್ನು ಭ್ರಷ್ಟವೆಂದು ಟೀಕಿಸಿದ್ದಾರೆ. 3% ಜನರು ಜೆಡಿಎಸ್ ಪಕ್ಷವನ್ನು ಭ್ರಷ್ಟವೆಂದು ಪರಿಗಣಿಸಿದ್ದಾರೆ.
ಒಂದು ಅವಧಿಯನ್ನೂ ಪೂರ್ಣಗೊಳಿಸದೆ, ನಾಲ್ಕು ಬಾರಿ ಮುಖ್ಯಮಂತ್ರಿಯಾಗಿರುವ ಬಿಜೆಪಿಯ ಬಿಎಸ್ ಯಡಿಯೂರಪ್ಪ ಅವರು 5 ನೇ ಸ್ಥಾನದಲ್ಲಿದ್ದು ಕಡಿಮೆ ಸ್ಥಾನ ಪಡೆದಿದ್ದಾರೆ. ಮತ ಚಲಾಯಿಸುವಾಗ ಪಕ್ಷ ಮತ್ತು ಅಭ್ಯರ್ಥಿಯಷ್ಟೇ ಅಲ್ಲ, ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಮತದಾರರು ಗಮನಿಸುತ್ತಾರೆಯೇ ಎಂಬುದರ ಕುರಿತೂ ಸಮೀಕ್ಷೆ ಅವಲೋಕಿಸಿರುವುದಾಗಿ ಎನ್.ಡಿ.ಟಿ.ವಿ ವರದಿ ಪ್ರಕಟಿಸಿದೆ.
ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ಪಕ್ಷಕ್ಕೆ ಪ್ರಾಮುಖ್ಯತೆಯನ್ನು ನೀಡಿದ್ದಾರೆ. 56% ಮಂದಿ ಪಕ್ಷಕ್ಕೆ ಮತ್ತು 38% ಜನರು ಅಭ್ಯರ್ಥಿಗೆ ಒಲುವು ತೋರಿದ್ದಾರೆ. ಶೇ.4ರಷ್ಟು ಮಂದಿ ಮಾತ್ರ ಮುಖ್ಯಮಂತ್ರಿ ಯಾರೆಂದು ನೋಡಿ ಮತ ಹಾಕುವುದಾಗಿ ಹೇಳಿದ್ದಾರೆಂದು ವರದಿ ತಿಳಿಸಿದೆ.
ಕಾಂಗ್ರೆಸ್ ಅಥವಾ ಜೆಡಿಎಸ್ ಅನ್ನು ಬೆಂಬಲಿಸುವ ಮತದಾರರು ಹೆಚ್ಚಾಗಿ ಪಕ್ಷವನ್ನು ಪ್ರಮುಖ ಅಂಶವೆಂದು ಪರಿಗಣಿಸಿದ್ದಾರೆ. ಆದರೆ ಬಿಜೆಪಿ ಮತದಾರರು ಈ ವಿಚಾರವಾಗಿ ಭಿನ್ನಾಭಿಪ್ರಾಯ ಹೊಂದಿದ್ದಾರೆ.
ಮತದಾರರ ಗ್ರಹಿಕೆಗೆ ಬಂದಾಗ ಬಿಜೆಪಿಗಿಂತ ಕಾಂಗ್ರೆಸ್ ಉತ್ತಮವಾಗಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಪ್ರತಿಕ್ರಿಯಿಸಿದವರು ಹೆಚ್ಚಿನವರು ಬಿಜೆಪಿ ಸರ್ಕಾರವನ್ನು `ಭ್ರಷ್ಟ’ ಎಂದು ಅಭಿಪ್ರಾಯಪಟ್ಟಿದ್ದಾರೆ. 59% ಮಂದಿ ಬಿಜೆಪಿಯನ್ನು ಭ್ರಷ್ಟ ಎಂದರೆ 35% ಜನರು ಕಾಂಗ್ರೆಸ್ ಪಕ್ಷವನ್ನು ಭ್ರಷ್ಟವೆಂದು ಟೀಕಿಸಿದ್ದಾರೆ. 3% ಜನರು ಜೆಡಿಎಸ್ ಪಕ್ಷವನ್ನು ಭ್ರಷ್ಟವೆಂದು ಪರಿಗಣಿಸಿದ್ದಾರೆ.
ಕುಟುಂಬ ರಾಜಕಾರಣದಲ್ಲೂ ಬಿಜೆಪಿಯೇ ಮುಂದಿದೆ ಎಂದು 59% ಮಂದಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ 30%, ಜೆಡಿಎಸ್ 8% ಸ್ವಜನಪಕ್ಷಪಾತ ಮಾಡಿರುವುದಾಗಿ ಜನರು ಅಭಿಪ್ರಾಯ ತಾಳಿದ್ದಾರೆ. ಗುಂಪುಗಾರಿಕೆಯಲ್ಲೂ ಬಿಜೆಪಿ (55%) ಪಕ್ಷವು, ಕಾಂಗ್ರೆಸ್ (30%), ಜೆಡಿಎಸ್ (12) ಪಕ್ಷಗಳಿಗಿಂತ ಮುಂದಿದೆ ಎಂದು ಸಮೀಕ್ಷೆ ತಿಳಿಸಿದೆ.
ಕಾಂಗ್ರೆಸ್ ಪಕ್ಷವೇ ಅಭಿವೃದ್ಧಿ ವಿಚಾರದಲ್ಲಿ ಒಳ್ಳೆಯ ಕೆಲಸ ಮಾಡಿದೆ ಎಂದು ಹೆಚ್ಚಿನ ಮಂದಿ ಒಲುವು ತೋರಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್ 47%, ಬಿಜೆಪಿ 34%, ಜೆಡಿಎಸ್ 14% ಜನರ ಬೆಂಬಲ ಪಡೆದಿವೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವನ್ನು ನಿಭಾಯಿಸುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಾನ ರೇಟಿಂಗ್ (40%) ಪಡೆದಿವೆ. ಜೆಡಿಎಸ್ ಮೂರನೇ (14%) ಸ್ಥಾನ ಗಳಿಸಿದೆ.
ವಿವಿಧ ಜಾತಿಗಳು ಮತ್ತು ಸಮುದಾಯಗಳು ಹೇಗೆ ಮತ ಚಲಾಯಿಸುವ ಸಾಧ್ಯತೆಯಿದೆ ಎಂಬುದನ್ನು ತಿಳಿಯಲು ಎನ್.ಡಿ.ಟಿ.ವಿ. ಸಮೀಕ್ಷೆಯು ಪ್ರಯತ್ನಿಸಿದ್ದು ಒಕ್ಕಲಿಗರಲ್ಲಿ ಶೇ.34% ಮಂದಿ ಕಾಂಗ್ರೆಸ್ಸಿಗೂ, 36% ಜನರು ಜೆಡಿ(ಎಸ್) ಪಕ್ಷಕ್ಕೂ ಹಂಚಿ ಹೋಗಿದ್ದರೆ, 67% ಲಿಂಗಾಯತರು ಬಿಜೆಪಿಯೊಂದಿಗೆ ದೃಢವಾಗಿ ಉಳಿದಿದ್ದಾರೆ. ಮುಸ್ಲಿಮರಲ್ಲಿ 59% ಮಂದಿ ಕಾಂಗ್ರೆಸ್ಗೆ ಮತ ಹಾಕಲು ನಿರ್ಧರಿಸಿದ್ದಾರೆ.
ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಬಲವಾಗಿ ಇರುವುದನ್ನು ಸಮೀಕ್ಷೆ ಬಹಿರಂಗಪಡಿಸಿದೆ. ಬಡವರು, ಕೆಳ ಮಧ್ಯಮ ವರ್ಗದವರು ಮತ್ತು ಗ್ರಾಮೀಣ ಮತದಾರರಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಬೇಸರವಿರುವುದನ್ನು ಸಮೀಕ್ಷೆಯ ಅಂಕಿ-ಅಂಶಗಳು ಎತ್ತಿ ಹಿಡಿದಿವೆ.
ಬಡ ಮತದಾರರು ಹೆಚ್ಚಿನದಾಗಿ ಕಾಂಗ್ರೆಸ್ ಬೇಕು ಅಂದಿದ್ದಾರೆ. 50 ಬಡವರು ಕಾಂಗ್ರೆಸ್ಸಿನೊಂದಿಗೆ ನಿಂತರೆ, 23% ಬಡವರು ಬಿಜೆಪಿಗೆ ಸಮ್ಮತಿ ಸೂಚಿಸಿದ್ದಾರೆ. ಶ್ರೀಮಂತರಲ್ಲಿ 46% ಜನರು ಬಿಜೆಪಿಗೆ ಜೈ ಎಂದರೆ, 31% ಶ್ರೀಮಂತರು ಕಾಂಗ್ರೆಸ್ಸಿನತ್ತ ಹೊರಳಿದ್ದಾರೆ.