ಮೈಸೂರು: ಮುಂದಿನ ಚುನಾವಣೆಯಲ್ಲಿ ತಾವು ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ಒತ್ತಾಯ ಬಂದಿದೆ. ಆದರೆ ನಾನು ಕೋಲಾರ, ಬಾದಾಮಿ, ವರುಣ ಕ್ಷೇತ್ರಗಳನ್ನು ಶಾರ್ಟ್ ಲಿಸ್ಟ್ ಮಾಡಿದ್ದೇನೆ.
ಅದರಲ್ಲಿ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವೆ. ಎಲ್ಲಿ ಸ್ಪರ್ಧೆ ಮಾಡುತ್ತೇನೆ ಎಂಬುದನ್ನು ಚುನಾವಣೆ ಘೋಷಣೆಯ ನಂತರ ಹೈಕಮಾಂಡ್ ತೀರ್ಮಾನ ಮಾಡಿದ ನಂತರ ನಿರ್ಧರಿಸುತ್ತೇನೆ ಎಂದರು.
ಸೋಲಿನ ಭಯದಿಂದ ಕ್ಷೇತ್ರಗಳ ಸರ್ವೇ ಮಾಡಿಸುತ್ತಿದ್ದಾರೆ ಎಂಬ ಟೀಕೆಗೆ ಪ್ರತಿಕ್ರಿಯಿಸಿ, ಸರ್ವೇ ಮಾಡಿಸಿದರೆ ತಪ್ಪೇನು.. ನರೇಂದ್ರ ಮೋದಿಯವರು ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಹಾಗಾದರೆ ಅವರು ಸರ್ವೇ ಮಾಡಿಸಿರಲಿಲ್ಲವಾ..ನಾವು ರಾಜ್ಯವ್ಯಾಪಿ ಪ್ರವಾಸ ಮಾಡುತ್ತೇವೆ. ಆದ್ದರಿಂದ ಸುರಕ್ಷಿತ ಕ್ಷೇತ್ರಕ್ಕಾಗಿ ಸರ್ವೇ ಮಾಡಿಸುತ್ತಾರೆ. ಆದರೆ ಈಗ ನಾನಾಗಲಿ ಅಥವಾ ನಮ್ಮ ಪಕ್ಷವಾಗಲಿ ಸರ್ವೇ ಮಾಡಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.