ರಾಮನಗರ: ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಯಾವುದೇ ಸಿದ್ಧಾಂತ, ವೈಚಾರಿಕತೆ ಇಲ್ಲ. ಬಿಜೆಪಿಯವರು ನನ್ನನ್ನು ಪ್ರಧಾನಿ ಅಥವಾ ರಾಷ್ಟ್ರಪತಿ ಮಾಡ್ತೀವಿ ಎಂದರೂ ನಾನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸೇರುವುದಿಲ್ಲ. ನನ್ನ ಹೆಣವೂ ಅವರೊಂದಿಗೆ ಹೋಗುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಜೆಡಿಎಸ್ ಸೇರಿದಂತೆ ಹಲವು ಪಕ್ಷಗಳು ಅಧಿಕಾರಕ್ಕಾಗಿ ಬಿಜೆಪಿಯೊಂದಿಗೆ ಕೈಜೋಡಿಸುತ್ತವೆ. ಜೆಡಿಎಸ್‌ಗೆ ಯಾವುದೇ ಸಿದ್ಧಾಂತ ಅಥವಾ ಅರ್ಹತೆ ಇಲ್ಲ. ಅಧಿಕಾರಕ್ಕಾಗಿ ಯಾರೊಂದಿಗೆ ಬೇಕಾದರೂ ಅವರು ಕೈಜೋಡಿಸುತ್ತಾರೆ ಎಂದು ಅವರು ಟೀಕಿಸಿದರು.
‘ನಾನು ಹಿಂದೂ ವಿರೋಧಿ ಎಂದು ಬಿಜೆಪಿ ಹೇಳುತ್ತಿದೆ. ಸಿ.ಟಿ.ರವಿ ನನ್ನನ್ನು ಸಿದ್ದರಾಮುಲ್ಲಾ ಖಾನ್ ಎನ್ನುತ್ತಿದ್ದಾರೆ. ಆದರೆ ಗಾಂಧೀಜಿ ನಿಜವಾದ ಹಿಂದುವಾಗಿದ್ದರು. ಅಂಥ ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಆರಾಧಿಸುವವರನ್ನು ಹಿಂದೂಗಳು ಎನ್ನಲು ಆದೀತೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಇಂಥವರೊಂದಿಗೆ ಕೈಜೋಡಿಸಿದವರಿಗೆ ಘನತೆ ಇರಲು ಸಾಧ್ಯವೇ ಎಂದು ಜೆಡಿಎಸ್ ವಿರುದ್ಧ ಹರಿಹಾಯ್ದರು.
ಎಲ್ಲರಿಗೂ ಆಹಾರ ಭದ್ರತೆಯನ್ನು ನಮ್ಮ ಕಾಂಗ್ರೆಸ್ ಸರ್ಕಾರ ನೀಡಿದೆ. ಬಿಜೆಪಿಗೆ ಈ ಕೆಲಸ ಮಾಡಲು ಸಾಧ್ಯವಾಗಿಲ್ಲ. ನಾನು ಅನ್ನಭಾಗ್ಯ ಯೋಜನೆ ಜಾರಿಮಾಡಿದೆ. ಬಸವಜಯಂತಿಯಂದು ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಸಮಯದಲ್ಲಿ ಆಹಾರ ಭದ್ರತೆ ಯೋಜನೆಗೆ ಸಹಿ ಹಾಕಿದೆ. ರೈತರು ಮತ್ತು ಪಶುಪಾಲಕರಿಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ತಾವು ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳ ಕುರಿತು ಅವರು ಪ್ರಸ್ತಾಪಿಸಿದರು.
ಮೊದಲು ತಿಂಗಳಿಗೆ 7 ಕೆಜಿ ಅಕ್ಕಿ ಸಿಗುತ್ತಿತ್ತು. ಆದರೆ ಈಗ ಬಿಜೆಪಿ ಇದನ್ನು 5 ಕೆಜಿಗೆ ಇಳಿಸಿದೆ. ಮುಂದೆ ನಾವು ಅಧಿಕಾರಕ್ಕೆ ಬಂದಾಗ ತಿಂಗಳಿಗೆ 10 ಕೆಜಿ ಅಕ್ಕಿ, ಗೃಹಿಣಿಯರಿಗೆ 2,000 ರೂಪಾಯಿ ವೇತನ ಕೊಡುತ್ತೇವೆ ಎಂದು ಮತ್ತೊಮ್ಮೆ ಘೋಷಿಸಿದರು.