ಅಥಣಿ, ೨- ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೃಷ್ಣಾ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಸ್ಥಳಕ್ಕೆ ಬೆಳಗಾವಿ ಪೊಲೀಸ ವರಿಷ್ಠಾಧಿಕಾರಿಗಳು ಏಕಾಏಕಿ ದಾಳಿ ನಡೆಸಿ ಅಲ್ಲಿ ನಡೆಯುತ್ತಿದ್ದ ಭಾರಿ ಪ್ರಮಾಣದ ಅಕ್ರಮ ಮರಳು ಗಣಿಗಾರಿಕೆಗೆ ತಡೆ ಹಾಕಿದ್ದಾರೆ.
ಕೃಷ್ಣಾ ನದಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಕೆಲ ಪತ್ರಿಕೆಗಳು ಬರೆದಿದ್ದವು. ಅದರಂತೆ ಬೆಳಗಾವಿ ಎಸ್ ಪಿ ಸಂಜಯ ಪಾಟೀಲ ಅವರು ಪ್ರತಿ ಶನಿವಾರ ನಡೆಸಿಕೊಡುವ – ಫೋನ್ ಇನ್ – ಕಾರ್ಯಕ್ರಮಗಳಲ್ಲಿ ಸಹ ಈ ಕುರಿತು ಸಾಕಷ್ಟು ದೂರುಗಳು ಬಂದಿದ್ದವು. ಅವುಗಳ ಆಧಾರದ ಮೇಲೆ ರವಿವಾರ ಬೆಳ್ಳಂಬೆಳಿಗ್ಗೆ ಜಿಲ್ಲಾ ಪೊಲೀಸ ವರಿಷ್ಠ ಸಂಜಯ ಪಾಟೀಲ ಅವರು ಅಥಣಿಯ ಪೋಲೀಸರೊಂದಿಗೆ ಕೃಷ್ಣಾ ನದಿಗೆ ತೆರಳಿ ಅಕ್ರಮ ಮರಳುಗಾರಿಕೆಯನ್ನು ತಡೆದರು.
ದಾಳಿಯಲ್ಲಿ ಮರಳುಗಾರಿಕೆಯಲ್ಲಿ ತೊಡಗಿದ್ದ 24 ಟ್ರ್ಯಾಕ್ಟರ್, 4 ಜೆಸಿಬಿ ಮತ್ತು ಒಂದು ಟಿಪ್ಪರ್ ವಶಕ್ಕೆ ಪಡೆದಿದ್ದಾರೆ. ಕೃಷ್ಣಾ ನದಿಯಿಂದ ತೆಗೆದ ಮರಳನ್ನು ಪಕ್ಕದ ಬಾಗಲಕೋಟ ಮೂಲಕ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.