ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಪೊಲೀಸರಿಂದ ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರನ್ನು ಬಂಧಿಸಲಾಗಿದೆ. ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣ ಕುರಿತು ಕೋರ್ಟ ಸೆಪ್ಟೆಂಬರ 5ರವರೆಗೆ ಮುರುಘಾ ಶರಣರನ್ನು ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ.
ನ್ಯಾಯಾಧೀಶರು ಆದೇಶ ಮಾಡುತ್ತಿದ್ದಂತೆ ಕೋರ್ಟ ಕಟಕಟೆಯಲ್ಲಿ ನಿಂತಿದ್ದ ಸ್ವಾಮೀಜಿ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.
ಇಬ್ಬರು ಬಾಲಕಿಯರು ಮುರುಘಾ ಶ್ರೀಗಳ ವಿರುದ್ಧ ನಿರಂತರ ಅತ್ಯಾಚಾರ ನಡೆಸಿದ ಆರೋಪ ಮಾಡಿದ್ದರು. ಈ ಆರೋಪದಲ್ಲಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಅವರನ್ನು ಕಳೆದ ರಾತ್ರಿ ಬಂಧಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಎದೆಯಲ್ಲಿ ನೋವು ಕಾಣಿಸಿಕೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುರುಘಾ ಶ್ರೀಗಳನ್ನು ಶುಕ್ರವಾರ ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸುವಂತೆ ಸೂಚಿಸಿತ್ತು. ಹೀಗಾಗಿ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ ಕೋರ್ಟಗೆ ಹಾಜರುಪಡಿಸಿದ್ದರು.
ನ್ಯಾಯಾಲಯಕ್ಕೆ ಆಗಮಿಸಿದ ಮುರುಘಾ ಮಠದ ಡಾ.ಶಿವಮೂರ್ತಿ ಶಿವಮೂರ್ತಿ ಶಿವಶರಣರು ಆರಂಭದಲ್ಲಿ ಕಟಕಟೆಯಲ್ಲಿ ನಿಂತುಕೊಳ್ಳುವುದಕ್ಕೆ ಹಿಂದೇಟು ಹಾಕಿದರು. ಆಗ ನ್ಯಾಯಮೂರ್ತಿಗಳು ಕೋರ್ಟ ಕಟಕಟೆಯಲ್ಲಿ ನಿಂತುಕೊಳ್ಳುವಂತೆ ಸೂಚಿಸಿದರು.
ಕೋರ್ಟ ಕಟಕಟೆಯಲ್ಲಿ ನಿಂತುಕೊಂಡ ನಂತರ ಅವರ ವಿರುದ್ಧದ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರು ಪೊಲೀಸರ ಕೋರಿಕೆಯ ಮೇರೆಗೆ ಸೆಪ್ಟೆಂಬರ್ 5ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತು. ಈ ಆದೇಶ ಕೇಳಿದ ಮುರುಘಾ ಶ್ರೀಗಳು ಕಟಕಟೆಯಲ್ಲೇ ಗಳಗಳನೆ ಕಣ್ಣೀರಿಟ್ಟು ಕುಸಿದು ಬಿದ್ದರು ಎನ್ನಲಾಗಿದೆ.