ಹೊಸದಿಲ್ಲಿ, ಮಾರ್ಚ ೨೯- ಕರ್ನಾಟಕ ವಿಧಾನಸಭೆಯ ಚುನಾವಣೆ ಮೇ ೧೦ ರಂದು ಒಂದು ಹಂತದ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ಘೋಷಿಸಿದ್ದಾರೆ.
ದೆಹಲಿಯಲ್ಲಿ ಬುಧವಾರ ಬೆಳಿಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಅವರು ೨೨೪ ಸ್ಥಾನಗಳಿಗೆ ಚುನಾವಣೆಗಳು ನಡೆಯಲಿದ್ದು ಮುಕ್ತ, ನ್ಯಾಯಸಮ್ಮತ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಮೇ ೧೩ ರಂದು ಫಲಿತಾಂಶ ಪ್ರಕಟಗೊಳ್ಳಲಿದ್ದು ಇಂದಿನಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ.
ಎಪ್ರಿಲ್ ೧೩ ರಂದು ಅಧಿಸೂಚನೆ ಪ್ರಕಟಗೊಳ್ಳಲಿದೆ. ನಾಮಪತ್ರ ಸಲ್ಲಿಕೆಗೆ ಎಪ್ರಿಲ್ ೨೦ ಕೊನೆ ದಿನವಾಗಿದ್ದು ಎಪ್ರಿಲ್ ೨೧ ನಾಮಪತ್ರ ಪರಿಶೀಲನೆ ನಡೆಸಲಾಗುವುದು. ಎಪ್ರಿಲ್ ೨೪ ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ.
ರಾಜ್ಯದಲ್ಲಿ 5.22 ಕೋಟಿ ಮತದಾರರರಿದ್ದು, 2,62,42,561 ಪುರುಷ ಮತದಾರರು, 2,59,26,319 ಮಹಿಳಾ ಮತದಾರರು ಇದ್ದಾರೆ. 80 ವರ್ಷಮೇಲ್ಪಟ್ಟ 12,15,763 ಮತದಾರರಿದ್ದು 5,55,073 ಮತದಾರರು ಅಂಗವಿಕಲರಿದ್ದಾರೆ ಮತ್ತು 4,699 ತೃತೀಯ ಲಿಂಗಿ ಮತದಾರರು ಇದ್ದಾರೆ. 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಬಾರಿ 9,17,241 ಯುವಕರು ಮೊದಲ ಬಾರಿ ಮತ ಚಲಾಯಿಸಲಿದ್ದಾರೆ.
ರಾಜ್ಯದ ಒಟ್ಟು 52,282 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು 24,063 ನಗರ ಪ್ರದೇಶದಲ್ಲಿ, 34,219 ಗ್ರಾಮೀಣ ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗುತ್ತದೆ. 12 ಸಾವಿರ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ.
ವಿಶೇಷವಾಗಿ ಯುವ ಸಿಬ್ಬಂದಿ ಮಾತ್ರ ನಿರ್ವಹಿಸುವ 224 ಪ್ರತ್ಯೇಕ ಮತಗಟ್ಟೆ, ಮಹಿಳೆ ನಿರ್ವಹಿಸುವ 1320 ಮತಗಟ್ಟೆಗಳು ಇರುತ್ತವೆ. ಸರಾಸರಿ 883 ಮತದಾರರಿಗೊಂದು ಮತಗಟ್ಟೆ ನಿರ್ಮಾಣ ಮಾಡಲಾಗುತ್ತದೆ.