ಬೆಂಗಳೂರು: ಪ್ರೇಯಸಿ ಜೊತೆ ಗೋವಾಗೆ ಮಜಾ ಮಾಡುವುದಕ್ಕೋಸ್ಕರ ಯುವಕನೊಬ್ಬ ಮನೆಯಲ್ಲಿದ್ದ ಬಂಗಾರ ಕಳ್ಳತನ ಮಾಡಿ ಸಿಕ್ಕಿಬಿದ್ದ ಘಟನೆ ಬೆಂಗಳೂರಿನ ಆಡುಗೋಡಿಯಲ್ಲಿ ನಡೆದಿದೆ.
ಯುವತಿಯೊಬ್ಬಳನ್ನು ಇರ್ಫಾನ್ ಎಂಬ ಯುವಕ ಪ್ರೀತಿಸುತ್ತಿದ್ದ. ಆಕೆಯೊಂದಿಗೆ ಗೋವಾಗೆ ಹೋಗುವ ಕನಸು ಕೂಡ ಕಾಣುತ್ತಿದ್ದ. ಅದರಂತೆ ವರ್ಷಾಂತ್ಯದ ವೇಳೆ ಗೋವಾಕ್ಕೆ ಹೋಗುವ ಪ್ಲಾನ್ ಇಬ್ಬರೂ ಹಾಕಿಕೊಂಡಿದ್ದರು. ಗೋವಾಕ್ಕೆ ಹೋಗಿ ಮಜಾ ಮಾಡುವುದು ಸುಲಭವಲ್ಲ, ಇರ್ಫಾನ್ ಬಳಿ ಹಣವಿಲ್ಲ. ಇದಕ್ಕಾಗಿ ತನ್ನ ಮನೆಯವರು ಕಷ್ಟಪಟ್ಟು ಮಾಡಿಟ್ಟಿದ್ದ ಚಿನ್ನವನ್ನೇ ಲಪಟಾಯಿಸಿದ್ದಾನೆ.
ಕೆಲಸ ಮಾಡದೇ ಅಣ್ಣ, ಅತ್ತಿಗೆ ಹಾಗೂ ಅಮ್ಮನ ಜೊತೆಯಲ್ಲೇ ಇರುವ ಇರ್ಫಾನ್ಗೆ ತನ್ನ ಪ್ರೇಯಸಿಯನ್ನು ಗೋವಾಗೆ ಕರೆದುಕೊಂಡು ಹೊಗಲು ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆಯಲ್ಲಿ ಮನೆಯಲ್ಲಿದ್ದ 103 ಗ್ರಾಂ ಚಿನ್ನ ಕದ್ದಿದ್ದಾನೆ. ಇದನ್ನು ಮಾರಿ ಬಂದ ಹಣದಲ್ಲಿ ಪ್ರೇಯಸಿಯ ಜೊತೆ ಗೋವಾ ಟ್ರಿಪ್ ಹೋಗಿದ್ದಾನೆ.
ಮನೆಯಲ್ಲಿ ಬಂಗಾರ ಕಳುವಾಗಿದೆ ಎಂದು ಇರ್ಫಾನ್ ಸಹೋದರ ಆಡುಗೋಡಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಳ್ಳತನವಾದ ಬಗ್ಗೆ ಕುಟುಂಬದವರು ಚಿಂತೆಗೀಡಾಗಿದ್ದರೆ ಮನೆಯ ಮಗ ಗೋವಾಗೆ ಜಾಲಿ ಟ್ರಿಪ್ನಲ್ಲಿದ್ದನು. ಇದರಿಂದ ಸಹಜವಾಗಿ ಅನುಮಾನಗೊಂಡು ಆಡುಗೋಡಿ ಪೊಲೀಸರು ಸಂಶಯದ ಮೇಲೆ ಇರ್ಫಾನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರೇಯಸಿಯೊಂದಿಗೆ ಗೋವಾ ಟ್ರಿಪ್ ಹೋಗಲು ಹಣದ ಅವಶ್ಯಕತೆ ಇತ್ತು. ಅದಕ್ಕಾಗಿ ಒಡವೆ ಕದ್ದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಹೊಸ ವರ್ಷಾಚರಣೆಗೆ ತನ್ನ ಪ್ರೇಯಸಿ ಜೊತೆ ಪ್ರವಾಸಕ್ಕೆ ಹೋಗಲು ತಾನೇ ಚಿನ್ನ ಕದ್ದು ಮಾರಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಸದ್ಯ ಇರ್ಫಾನ್ ಜೈಲು ಪಾಲಾಗಿದ್ದಾನೆ.