ಸಮದರ್ಶಿ ವಿಶೇಷ
ಬೆಳಗಾವಿ : ಮಹಿಳೆಯರಿಗೆ ರಾಜ್ಯದ ಬಸ್ ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಬಸ್ ಗಳೆಲ್ಲ ಮಹಿಳೆಯರಿಂದಲೇ ತುಂಬಿರುತ್ತಿದ್ದು ಪುರುಷ ಪ್ರಯಾಣಿಕರು ಅದರಲ್ಲೂ ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಇದರ ಪ್ರತಿಕೂಲ ಪರಿಣಾಮ ಆಗುತ್ತಿದೆ.
ಬಸ್ ಗಳು ನಿಗದಿತ ಸಮಯಕ್ಕೆ ಆಗಮಿಸಿದರೂ ಬಸ್ಸಿನಲ್ಲಿ ಸ್ಥಳವಿಲ್ಲದೇ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆ, ಕಾಲೇಜುಗಳಿಗೆ ತಲುಪಲು ಆಗುತ್ತಿಲ್ಲ. ಹಾಗಾಗಿ ದಿನದ ಮೊದಲ ಕೆಲ ಪಿರಿಯಡ್ ಗಳಿಗೆ ಹಾಜರಾಗಲು ಆಗುತ್ತಿಲ್ಲ, ಕೆಲವೊಮ್ಮೆ ಇಡೀ ದಿನ ಗೈರಾಗಿರಬೇಕಾಗುತ್ತದೆ.
ಸರಕಾರದ ಶಕ್ತಿ ಯೋಜನೆ ಜೂನ್ 11ರಿಂದ ಆರಂಭವಾದಾಗಿನಿಂದ ಬಸ್ ಗಳು ಮಹಿಳೆಯರಿಂದಲೇ ತುಂಬಿರುತ್ತವೆ. ಸ್ಥಳ ದೊರೆಯದ ಕಾರಣ ಪುರುಷರಿಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ದೇಶದಲ್ಲೇ ಮೊದಲನೇ ಬಾರಿಗೆ “ಪುರುಷರಿಗೂ ಮೀಸಲಾತಿ”ಯನ್ನು ರಾಜ್ಯ ಸರಕಾರ ನೀಡಿದೆ. ಪ್ರತಿ ಬಸ್ಸಿನಲ್ಲಿ ಪುರುಷರಿಗಾಗಿ ಶೇ. 50% ಸ್ಥಾನಗಳನ್ನು ಮೀಸಲಾಗಿಟ್ಟಿದೆ. ಆದರೆ ಈ ಆದೇಶ ಪಾಲನೆಯಾಗುತ್ತಿಲ್ಲ. ಆದೇಶ ಪಾಲಿಸಲು ಬಸ್ ನಿರ್ವಾಹಕರು ಅಸಹಾಯಕರಾಗಿದ್ದಾರೆ. ಮಹಿಳಾ ಪ್ರಯಾಣಿಕರನ್ನು ನಿಯಂತ್ರಿಸಲು ವಿಶೇಷವಾಗಿ ಪೊಲೀಸರನ್ನು, ಮಹಿಳಾ ಗೃಹ ರಕ್ಷಕ ದಳದವರನ್ನು ನಿಯೋಜಿಸಿದರೂ ಪ್ರಯೋಜನವಾಗುತ್ತಿಲ್ಲ.
ಮಹಿಳೆಯರಿಂದ ತುಂಬಿ ಬರುವ ಬಸ್ ಗಳಲ್ಲಿ ಸ್ಥಳ ದೊರೆಯದೇ ಇರುವುದರಿಂದ ವಿದ್ಯಾರ್ಥಿಗಳು ಒಂದೆರಡು ಕ್ಲಾಸ್ ತಪ್ಪಿಸಿಕೊಳ್ಳುತ್ತಿರುವುದರಿಂದ ಅವರ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತಿದೆ. ಅವರ ಹಾಜರಾತಿಯ ಮೇಲೂ ಪರಿಣಾಮವಾಗುತ್ತಿದೆ. ಹಾಗಾಗಿ ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ವಿದ್ಯಾರ್ಥಿನಿಯರೂ ಸೇರಿದಂತೆ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ಕೂಡ ಮಾಡಿದ್ದಾರೆ. ಅಲ್ಲದೇ ಸರಕಾರಕ್ಕೆ ಹೆಚ್ಚುವರಿ ಬಸ್ ಬಿಡಲೂ ವಿನಂತಿಸಿಕೊಂಡಿದ್ದಾರೆ.
ಬೆಳಗಾವಿ ಸೇರಿದಂತೆ ಹಲವಾರು ಪಟ್ಟಣಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ತೆರಳಲು ಸರಕಾರಿ ಬಸ್ ಗಳನ್ನೇ ಅವಲಂಬಿಸಿದ್ದಾರೆ. ಪ್ರತಿದಿನ ವಿದ್ಯಾರ್ಥಿನಿಯರು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಹತ್ತಿರದ ಪಟ್ಟಣಗಳಿಗೆ ವ್ಯಾಸಂಗಕ್ಕೆ ಆಗಮಿಸುತ್ತಾರೆ. ಅದರಂತೆ ಗೋಕಾಕ ತಾಲ್ಲೂಕಿನ ಕಲ್ಲೊಳ್ಳಿ ಗ್ರಾಮದ ವಿದ್ಯಾರ್ಥಿಗಳು ಗೋಕಾಕ ಪಟ್ಟಣದ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದು ರಿಯಾಯಿತಿ ದರದ ಪಾಸ್ ಹೊಂದಿಯೂ ಬಸ್ ಗಳಲ್ಲಿ ಪ್ರಯಾಣಕ್ಕೆ ಅವಕಾಶ ದೊರೆಯದ್ದರಿಂದ ವಿಶೇಷ ಬೇಡಿಕೆಯನ್ನು ಮುಂದಿಟ್ಟಿದ್ದು ತಮಗೆ ಬಸ್ ಒಳಗೆ ಸ್ಥಳವಿಲ್ಲದಿದ್ದರೂ ಪರವಾಗಿಲ್ಲ, ಬಸ್ ಮೇಲಾದರೂ ಪ್ರಯಾಣಕ್ಕೆ ಸರಕಾರ ಅವಕಾಶ ಮಾಡಿಕೊಡಬೇಕು. ಈ ಕುರಿತು ರಾಜ್ಯ ಸಾರಿಗೆ ಮತ್ತು ಪೊಲೀಸ್ ಇಲಾಖೆಗೆ ಸೂಚಿಸಬೇಕು. ಇದರಿಂದ ತಾವು ಸಕಾಲಕ್ಕೆ ಶಾಲಾ, ಕಾಲೇಜುಗಳಿಗೆ ತೆರಳಲು ಆಸ್ಪದವಾಗಲಿದೆ ಎಂದು ಸಮದರ್ಶಿಗೆ ತಿಳಿಸಿದ್ದಾರೆ.
ಮೊದಲಿನಿಂದಲೂ ಉತ್ತರ ಕರ್ನಾಟಕದ ಜನ ಸಾಹಸಕ್ಕೆ ಹೆಸರಾದವರು. ಬಸ್, ಟೆಂಪೋಗಳಲ್ಲಿ ಕುಳಿತುಕೊಳ್ಳಲು ಸ್ಥಳವಿದ್ದರೂ ವಾಹನಗಳ ಮೇಲೆ ಹತ್ತಿ ಟಾಪ್ ಮೇಲೆ ಪ್ರಯಾಣ ಮಾಡುವುದಕ್ಕೆ ಆದ್ಯತೆ ನೀಡುತ್ತಾರೆ. ಅದೆಲ್ಲ ಈ ಭಾಗದಲ್ಲಿ ಸಾಮಾನ್ಯ. ಹಾಗಾಗಿ ಸರಕಾರ ಹೆಚ್ಚುವರಿ ಬಸ್ ನೀಡದ್ದಕ್ಕೆ ಮತ್ತು ತಮ್ಮ ವಿದ್ಯಾಭ್ಯಾಸಕ್ಕೆ ಬಸ್ ಗಳಿಂದ ತೊಂದರೆಯಾಗಿರುವುದರಿಂದ ಸರಕಾರ ಮತ್ತು ಸಾರ್ವಜನಿಕರ ಗಮನ ಸೆಳೆಯಲು ಈ ವ್ಯಂಗ್ಯಭರಿತ ಬೇಡಿಕೆ ಇಟ್ಟಿದ್ದಾರೆ.
ಈ ಕುರಿತು ಸಮದರ್ಶಿಗೆ ಪ್ರತಿಕ್ರಿಯಿಸಿರುವ ಬೆಳಗಾವಿ ವಿಭಾಗದ ಹೆಚ್ಚುವರಿ ನಿಯಂತ್ರಣಾಧಿಕಾರಿ ಗಣೇಶ ರಾಠೋಡ ಅವರು –“ಬಸ್ ತುಂಬಿದ್ದರೂ ಪ್ರತಿ ನಿಲ್ದಾಣದಲ್ಲಿ ಬಸ್ ನಿಲ್ಲಿಸಬೇಕು, ವಿದ್ಯಾರ್ಥಿಗಳು ಕೈ ತೋರಿಸಿದರೆ ಬಸ್ ನಿಲ್ಲಿಸಿ ಅವರನ್ನು ಕರೆದುಕೊಂಡು ಹೋಗಬೇಕೆಂಬ ಆದೇಶವನ್ನು ನಿರ್ವಾಹಕರಿಗೆ ನೀಡಲಾಗಿದೆ. ಆದರೆ, ಪ್ರಯಾಣಿಕರಿಂದ ಅದರಲ್ಲೂ ಮಹಿಳೆಯರೇ ಹೆಚ್ಚಾಗಿರುವ ಬಸ್ ನಲ್ಲಿ ಸ್ಥಳವಿರದ ಕಾರಣ ವಿದ್ಯಾರ್ಥಿಗಳಿಗೆ ಕಷ್ಟ ಆಗುತ್ತಿದೆ. ಹೆಚ್ಚು ಬಸ್ ಒದಗಿಸಲು ಸರಕಾರಕ್ಕೆ ಬೇಡಿಕೆ ಕಳುಹಿಸಲಾಗಿದೆ. ಹೆಚ್ಚುವರಿ ಬಸ್ ಗಳು ಬಂದ ನಂತರ ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುಕೂಲವಾಗಬಹುದು” ಎಂದು ತಿಳಿಸಿದರು.
“ಬಸ್ ಟಾಪ್ ಮೇಲೆ ಕುಳಿತುಕೊಳ್ಳುತ್ತೇವೆ” ಎಂಬ ವಿದ್ಯಾರ್ಥಿಗಳ ಇಂಥ ಕಾನೂನುಬಾಹಿರ ಬೇಡಿಕೆಯನ್ನು ಯಾವ ಸರಕಾರವೂ ಒಪ್ಪಲು ಸಾಧ್ಯವಿಲ್ಲ. ಸರಕಾರ ಹೆಚ್ಚುವರಿ ಬಸ್ ಒದಗಿಸಿದ ನಂತರ ಅವರ ಸಮಸ್ಯೆ ಬಗೆಹರಿಯಲಿದೆ ಎಂದು ನಿಯಂತ್ರಣಾಧಿಕಾರಿ ರಾಠೋಡ ತಿಳಿಸಿದರು.