ಬೆಳಗಾವಿ, 13: ಇಂದಿರಾ ಕ್ಯಾಂಟೀನಗೆ ತನ್ನ ಪಾಲನ್ನು ನೀಡಲು ನಿರಾಕರಿಸಿ, ಆಸ್ತಿ ತೆರಿಗೆಯನ್ನು ಪರಿಷ್ಕರಣೆ ಮಾಡದಿರುವುದಕ್ಕೆ ಮತ್ತು ಅಕ್ರಮ ನೇಮಕಾತಿ ಮಾಡಿದ್ದು ಸೇರಿದಂತೆ ಹಲವು ಕಾರಣಗಳಿಗಾಗಿ ಬೆಳಗಾವಿ ಮಹಾನಗರಪಾಲಿಕೆಯನ್ನು ಯಾಕೆ ಸುಪರಸೀಡ್ ಮಾಡಬಾರದೆಂದು ಕೇಳಿ ರಾಜ್ಯ ಸರ್ಕಾರ ನೋಟೀಸ್ ಜಾರಿ ಮಾಡಿದೆ.
ಪೌರಾಡಳಿತ ಇಲಾಖೆಯು 21-9-2023 ರಂದು ಬೆಳಗಾವಿ ಮಹಾಪೌರರಾದ ಶೋಭಾ ಸೋಮನಾಛೆ ಅವರ ಹೆಸರಿನಲ್ಲಿ ಪಾಲಿಕೆಯ ವಿಳಾಸಕ್ಕೆ ಪತ್ರ ಕಳುಹಿಸಿದೆ. ಆದರೆ ಈ ಪತ್ರ ತಮಗೆ ನಿನ್ನೆ ಗುರುವಾರವಷ್ಟೇ ದೊರೆತಿದೆ ಎಂದು ಮಹಾಪೌರರಾದ ಶೋಭಾ ಸೋಮನಾಚೆ ಸಮದರ್ಶಿಗೆ ತಿಳಿಸಿದ್ದಾರೆ.
ಮೊದಲಿನ ಕಾಂಗ್ರೆಸ್ ಸರಕಾರ ಪ್ರಾರಂಭಿಸಿದ್ದ ಇಂದಿರಾ ಕ್ಯಾಂಟೀನ್ ಗಳನ್ನು ಹಿಂದಿನ ಬಿಜೆಪಿ ಸರ್ಕಾರವು ಆರ್ಥಿಕ ಕೊರತೆ ಕಾರಣದ ನೆಪ ಹೇಳಿ ಬಂದ್ ಮಾಡಿತ್ತು. ಈಗಿನ ಕಾಂಗ್ರೆಸ್ ಸರಕಾರ ಅವುಗಳನ್ನು ಪುನಃ ಪ್ರಾರಂಭಿಸಿದೆ. ಈ ಯೋಜನೆಗೆ ಸ್ಥಳೀಯ ಸಂಸ್ಥೆಗಳು ತಮ್ಮ ಪಾಲು ಶೇ. 70 ರಷ್ಟು ಹಣ ನೀಡಬೇಕು. ಕಾಂಗ್ರೆಸ್ ಸರಕಾರದ ಈ ಆದೇಶವನ್ನು ಬಿಜೆಪಿ ವಶದಲ್ಲಿರುವ ಬೆಳಗಾವಿ ಮಹಾನಗರಪಾಲಿಕೆಯು ಪಾಲಿಸಲು ನಿರಾಕರಿಸಿ “ಸಾರ್ವಜನಿಕರಿಂದ ಸಂಗ್ರಹಿಸಿರುವ ಹಣವನ್ನು ಈ ತರಹದ ಯೋಜನೆಗಳಿಗೆ ಬಳಸುವುದು ಸೂಕ್ತವಲ್ಲ. ಹಾಗಾಗಿ ಪಾಲಿಕೆಯ ಸಾಮಾನ್ಯ ಸಭೆ ಇದನ್ನು ಬಹುಮತದಿಂದ ತಿರಸ್ಕರಿಸುತ್ತದೆ” ಎಂದು ಇತ್ತೀಚಿಗೆ ನಡೆದ ಸಾಮಾನ್ಯ ಸಭೆಯಲ್ಲಿ ಬಹುಮತದಿಂದ ತೀರ್ಮಾನಿಸಿ ಸಭೆಯ ನಡಾವಳಿಯನ್ನು ಸರಕಾರಕ್ಕೆ ಕಳುಹಿಸಿ ಕೊಟ್ಟಿತು.
ಸರಕಾರ ಪಾಲಿಕೆಯ ಆದಾಯ ವೃದ್ಧಿಗೆ ಅನುಕೂಲವಾಗುವಂತೆ 2021-22-ರಲ್ಲಿ ಆಸ್ತಿ ತೆರಿಗೆಯನ್ನು ಈಗಿರುವ ಶೇ 3ರಿಂದ ಶೇ 5ಕ್ಕೇರಿಸಲು ಸೂಚಿಸಿತ್ತು. ಅದಕ್ಕೂ ಪಾಲಿಕೆ ಸ್ಪಂದಿಸಿರಲಿಲ್ಲ. ಅಲ್ಲದೇ ಸರಕಾರದ ಅನುಮತಿ ಪಡೆಯದೇ 138 ಪೌರ ಕಾರ್ಮಿಕರನ್ನು ಅಕ್ರಮವಾಗಿ ನೇಮಕ ಮಾಡಿಕೊಂಡಿರುವುದನ್ನೂ ಸರಕಾರ ಪ್ರಶ್ನಿಸಿ ಪಾಲಿಕೆಯ ಆಡಳಿತ ಮಂಡಳಿಯನ್ನು ಯಾಕೆ ರದ್ದು ಮಾಡಬಾರದೆಂದು ಕಾರಣ ಕೇಳಿ ನೋಟೀಸ್ ನೀಡಿದೆ.
ಬಿಜೆಪಿ ವಶದಲ್ಲಿರುವ ಪಾಲಿಕೆ ಕಾಂಗ್ರೆಸ್ ನ ಪ್ರಖ್ಯಾತವಾದ ಇಂದಿರಾ ಕ್ಯಾಂಟೀನ್ ಯೋಜನೆಗೆ ಯಾಕೆ ಹಣವೊದಗಿಸಬೇಕು, ಜನರಿಗೆ ಹೊರೆಯಾಗುವಂತೆ ಆಸ್ತಿ ತೆರಿಗೆಯನ್ನು ಹೆಚ್ಚಿಸುವುದು ಸೂಕ್ತವಲ್ಲವೆಂದು ಇತ್ತೀಚಿಗೆ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಪಾಲಿಕೆಗೆ ಚುನಾವಣೆ ನಡೆದು ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ದೊರೆಯುವ ಮೊದಲು ಬೆಳಗಾವಿಯ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳ ಶಾಸಕರಾದ ಅನಿಲ ಬೆನಕೆ ಮತ್ತು ಅಭಯ ಪಾಟೀಲ ಪಾಲಿಕೆಯನ್ನು ನಿಯಂತ್ರಿಸುತ್ತಿದ್ದಾರೆನ್ನಲಾಗಿದ್ದು ಆಗ ಹಲವಾರು ಭ್ರಷ್ಟಾಚಾರ ನಡೆದ ಕುರಿತು ಆರೋಪಗಳಿವೆ. ಆಡಳಿತ ಮಂಡಳಿ ಅಧಿಕಾರ ಪಡೆದ ನಂತರ ಆರೋಗ್ಯ ಸ್ಥಾಯಿ ಸಮಿತಿ ಪಾಲಿಕೆಯ ಸ್ವಚ್ಛತಾ ಕಾಮಗಾರಿಗೆ 138 ಜನರನ್ನು ಪೌರ ಕಾರ್ಮಿಕರೆಂದು ನೇಮಕ ಮಾಡಿಕೊಂಡಿದೆ. ಅದರ ನಿರ್ಣಯಕ್ಕೆ ಸಮಿತಿಯ ಸರ್ವ ಸದಸ್ಯರೂ ಸೇರಿದಂತೆ ಮಹಾಪೌರಾರಾದ ಶೋಭಾ ಕೂಡ ಸಹಿ ಮಾಡಿದ್ದಾರೆ. ಆದರೆ ಈ ನೇಮಕಾತಿಗೆ ಸರಕಾರದಿಂದ ಅನುಮತಿಯನ್ನೇ ಪಡೆದಿಲ್ಲ. ಅನುಮತಿಯಿಲ್ಲದೇ 6 ತಿಂಗಳ ಹಿಂದೆ ಅಕ್ರಮವಾಗಿ ನೇಮಕಗೊಂಡ ಈ ಪೌರ ಕಾರ್ಮಿಕರಿಗೆ ಸರಕಾರ ಸಂಬಳ ಮಂಜೂರು ಮಾಡಿಲ್ಲ. ಹಾಗಾಗಿ ಈ ಪೌರ ಕಾರ್ಮಿಕರೆಲ್ಲ ಕಳೆದ ಎರಡು ತಿಂಗಳಿಂದ ಸಂಬಳಕ್ಕಾಗಿ ಮುಷ್ಕರ ನಡೆಸುತ್ತಿದ್ದಾರೆ.
ಕಾರಣ ಕೇಳಿ ನೋಟೀಸ್ ನೀಡಿರುವ ಪೌರಾಡಳಿತ ಇಲಾಖೆ ಇಷ್ಟು ದಿನದಲ್ಲಿ ಉತ್ತರಿಸಬೇಕೆಂದು ಸೂಚಿಸಿಲ್ಲ.
2005 ರಲ್ಲಿ ರಾಜ್ಯ ವಿರೋಧಿ ನಿರ್ಣಯವನ್ನು ಬಹುಮತದಿಂದ ಪಾಸ್ ಮಾಡಿದ್ದರಿಂದ ಬೆಳಗಾವಿ ಮಹಾನಗರ ಪಾಲಿಕೆಯನ್ನು ಮುಖ್ಯಮಂತ್ರಿ ದಿ. ಎನ್ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರವು ಎರಡು ಬಾರಿ ಸುಪರಸೀಡ್ ಮಾಡಿತ್ತು. ಆಗಿನ ಮಹಾಪೌರಗಿದ್ದ ವಿಜಯ ಮೋರೆ ನೇತೃತ್ವದ ಮಹಾರಾಷ್ಟ್ರ ಏಕೀಕರಣ ಸಮಿತಿಯು ಕರ್ನಾಟಕದ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ, ಭಾಲ್ಕಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ನಿರ್ಣಯ ಕೈಗೊಂಡು ಸರಕಾರಕ್ಕೆ ನಿರ್ಣಯದ ಪ್ರತಿಯನ್ನು ರವಾನಿಸಿತ್ತು. ಆಗ ಸರಕಾರ ಬೆಳಗಾವಿ ಪಾಲಿಕೆಯನ್ನು ರದ್ದು ಪಡಿಸಿತ್ತು.