ಹೊಸದಿಲ್ಲಿ, 11: ಚುನಾವಣಾ ಬಾಂಡ್ ಗಳ ವಿವರಗಳನ್ನು ಬಹಿರಂಗಪಡಿಸಲು ಜೂನ್ 30ರ ವರೆಗೆ ಅಂದರೆ ಚುನಾವಣಾ ಮುಗಿಯುವ ವರೆಗೆ ಸಮಯ ಕೋರಿ ಎಸ್ಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಮ ಕೋರ್ಟ ಸೋಮವಾರ ವಜಾಗೊಳಿಸಿದ್ದು ನಾಳೆಯೇ ಮಾಹಿತಿಯನ್ನು ಬಹಿರಂಗ ಪಡಿಸುವಂತೆ ಕೋರ್ಟ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಭಾರತೀಯ ಚುನಾವಣಾ ಆಯೋಗಕ್ಕೆ ಮಾರ್ಚ್ 15ರೊಳಗೆ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ವಿವರಗಳನ್ನು ಪ್ರಕಟಿಸಬೇಕು ಎಂದು ಹೇಳಿದೆ.
ಈ ಹಿಂದೆ ವಿಚಾರಣೆ ವೇಳೆ ಎಸ್ಬಿಐ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ, ಮಾಹಿತಿ ನೀಡಲು ಜೂನ್ 30ರವರೆಗೆ ಕಾಲಾವಕಾಶ ಕೋರಿದ್ದರು. ಬಾಂಡ್‌ಗಳ ಖರೀದಿಯ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಾಲಯವು ಎಸ್ಬಿಐಗೆ ಸೂಚಿಸಿದೆ.
ರಾಜಕೀಯ ಪಕ್ಷಗಳ ವಿವರಗಳು ಮತ್ತು ಪಕ್ಷಗಳು ಸ್ವೀಕರಿಸಿದ ಬಾಂಡ್‌ಗಳ ಸಂಖ್ಯೆಯನ್ನು ಸಹ ನೀಡಬೇಕು. 5 ವರ್ಷದಲ್ಲಿ 22 ಸಾವಿರಕ್ಕೂ ಅಧಿಕ ಚುನಾವಣಾ ಬಾಂಡ್ ಗಳನ್ನು ಬಿಡುಗಡೆ ಮಾಡಲಾಗಿದ್ದು, ಚುನಾವಣಾ ಬಾಂಡ್‌ಗಳ ಕುರಿತ ಮಾಹಿತಿ ನೀಡಿಕೆಗಾಗಿ ನೀಡಿರುವ ಗಡುವನ್ನು ಮಾರ್ಚ 6 ರಿಂದ ಜೂನ್ 30 ರವರೆಗೆ ವಿಸ್ತರಿಸಿ ಎಂದು ಸುಪ್ರೀಮ ಕೋರ್ಟಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮನವಿ ಮಾಡಿತ್ತು. ಕೇವಲ 3-4 ದಿನಗಳಲ್ಲಿ ನೀಡಬಹುದಾದ ವಿವರವನ್ನು ಜೂನ್ 30ರ ವರೆಗೆ ಅಂದರೆ ಲೋಕಸಭೆ ಚುನಾವಣೆ ಮುಗಿದ ನಂತರ ನೀಡುವುದಾಗಿ ಸುಪ್ರೀಮ ಕೋರ್ಟಗೆ ತಿಳಿಸಿದ್ದ ಎಸ್ ಬಿಐ ಮನವಿ ಬಗ್ಗೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಕಳೆದ ಐದು ವರ್ಷಗಳಲ್ಲಿ 22,217 ಚುನಾವಣಾ ಬಾಂಡ್ ಗಳನ್ನು ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಸಲುವಾಗಿ ಬಳಸಲಾಗಿದೆ ಎಂಬ ಅಂಶವನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಬಹಿರಂಗಪಡಿಸಿತ್ತು.