ಬೆಳಗಾವಿ, 13; ಬೆಳಗಾವಿಯ ಖ್ಯಾತ ಹೊಟೇಲ್ ಉದ್ಯಮಿ, ಪ್ರತಿಷ್ಠಿತ ಶಭರಿ ಮತ್ತು ಹರ್ಷಾ ಹೊಟೇಲ್ ಮಾಲೀಕರಾದ ಸುರೇಶ ಗಣಪಯ್ಯ ನಾಯರಿ ಅವರು ಅನಾರೋಗ್ಯದ ಕಾರಣ ಸೋಮವಾರ ರಾತ್ರಿ ಹಠಾತ್ ನಿಧನರಾದರು. ಅವರಿಗೆ 52 ವರ್ಷ ವಯಸ್ಸಾಗಿತ್ತು.
ರಾಮತೀರ್ಥ ನಗರ ನಿವಾಸಿಯಾಗಿದ್ದ ಅವರನ್ನು ಕೆಲ ದಿನಗಳ ಹಿಂದೆಯಷ್ಟೇ ಅನಾರೋಗ್ಯದ ಕಾರಣ ಬೆಳಗಾವಿಯ ಕೆಎಲ್ ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೋಮವಾರ ಸಂಜೆ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದರಿಂದ ವಿಮಾನದ ಮೂಲಕ ಬೆಂಗಳೂರಿಗೆ ಸಾಗಿಸಲು ನಿರ್ಧರಿಸಲಾಗಿತ್ತಾದರೂ ಅದೆಲ್ಲ ಕೂಡಿ ಬರದೇ ರಾತ್ರಿ 9.30ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ದಿವಂಗತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದವರಾದ ಸುರೇಶ ನಾಯರಿ ಅವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಮುಗಿಸಿ, 1987ರಲ್ಲಿ ಅಣ್ಣನೊಂದಿಗೆ ಬೆಳಗಾವಿಯಲ್ಲಿ ಪಾನ್ ಅಂಗಡಿ ಹಾಗೂ ಟೀ ಸ್ಟಾಲಿನಲ್ಲಿ ಕೆಲಸ ಆರಂಭಿಸಿದ್ದರು. 1991ರಲ್ಲಿ ಸ್ವಂತ ಉದ್ಯಮವನ್ನು ಕೆಎಲ್ ಇ ಆಸ್ಪತ್ರೆಯ ಹತ್ತಿರ ಅವರು ಪ್ರಾರಂಭಿಸಿ, ನಂತರ ಅಟೋ ನಗರದಲ್ಲಿ 2001ರಲ್ಲಿ ಹರ್ಷಾ ವೆಜ್ ಫ್ಯಾಮಿಲಿ ರೆಸ್ಟೊರೆಂಟ್, 2013ರಲ್ಲಿ ರಾಮದೇವ ಹೊಟೇಲ್ ಪಕ್ಕದಲ್ಲಿ ಶಬರಿ ಹೊಟೇಲ್, 2019ರಲ್ಲಿ ಶಿವಬಸವ ನಗರದ ಕೆಪಿಟಿಸಿಎಲ್ ಸಭಾಭವನ ಎದುರು ಶ್ರೀ ಸಾಯಿ ಶಭರಿ ಹೊಟೇಲ್ ಹೀಗೆ ಉದ್ಯಮ ಬೆಳೆಸುತ್ತ ಸಾಗಿದ್ದ ಅವರು ಇದೇ 2023, ಮೇ 25ರಂದು ಆಟೋ ನಗರದಲ್ಲಿ ಮೊದಲಿದ್ದ ಹರ್ಷಾ ಹೊಟೇಲ್ ನವೀಕರಿಸಿ ಅತ್ಯಾಧುನಿಕ ಸೌಲಭ್ಯವುಳ್ಳ, ಹೊಸ ವಿನ್ಯಾಸದೊಂದಿಗೆ ಯಶಸ್ವಿಯಾಗಿ ಹೊಟೇಲ್ ನಡೆಸುತ್ತಿದ್ದರು.
ಅನೇಕ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು, ಗುರು ವಿವೇಕಾನಂದ ಸೊಸೈಟಿ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.
ದಿವಂಗತರ ಅಂತ್ಯಕ್ರಿಯೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದಲ್ಲಿ ನ. 14ರಂದು ಸಂಜೆ 4 ಗಂಟೆಗೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.