ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಉಬ್ರಾಣಿ ಹೋಬಳಿಯಲ್ಲಿ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ ಮೃತ ದೇಹವನ್ನು ಕಾಡಿನಲ್ಲಿ ಹೂತಿಟ್ಟಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ತಾಲ್ಲೂಕಿನ ಐಗೂರು ಗ್ರಾಮದ ಲೋಕೇಶಪ್ಪ ಅವರ ಪುತ್ರಿ ರಶ್ಮಿ(21) ಕೊಲೆಯಾದವರು. ಉಬ್ರಾಣಿ ಹೋಬಳಿಯ ಗಂಗಗೊಂಡನಹಳ್ಳಿ ಗ್ರಾಮದ ಮೋಹನ್ ಕುಮಾರ್(25) ಕೊಲೆ ಆರೋಪಿ. ಒಂದೂವರೆ ತಿಂಗಳ ಹಿಂದೆ ಕೊಲೆ ನಡೆದಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
7 ತಿಂಗಳ ಹಿಂದೆ ಚಂದ್ರಕಲಾ, ಮೋಹನ ಕುಮಾರ ಮದುವೆಯಾಗಿದ್ದು, ಚಂದ್ರಕಲಾ ಗರ್ಭಿಣಿಯಾಗಿದ್ದರು. ಪತ್ನಿಯ ಶೀಲ ಶಂಕಿಸಿ ಮೋಹನ ಕುಮಾರ ಜಗಳವಾಡುತ್ತಿದ್ದ. ವರದಕ್ಷಿಣೆಗಾಗಿ ಪೀಡಿಸುತ್ತಿದ್ದ. ರಶ್ಮಿ ಪೋಷಕರಿಗೆ ಈ ವಿಷಯ ತಿಳಿಸಿದ್ದರು. ಬಳಿಕ ಹಿರಿಯರು ರಾಜೀ ಪಂಚಾಯಿತಿ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸಿದ್ದರು.
ಒಂದೂವರೆ ತಿಂಗಳ ಹಿಂದೆ ದಂಪತಿಯ ನಡುವೆ ಆರಂಭವಾದ ಜಗಳ ವಿರೂಪಕ್ಕೆ ತಿರುಗಿ, ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಮೋಹನ ಕುಮಾರ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಹುಣಸಘಟ್ಟ ಕಾಡಿನಲ್ಲಿ ಗುಂಡಿ ತೆಗೆದು ಮೃತ ದೇಹ ಹೂತಿಟ್ಟಿದ್ದಾನೆ. ನಂತರ ಪತ್ನಿಯು ಹಣ, ಒಡವೆ ತೆಗೆದುಕೊಂಡು ಕಾಣೆಯಾಗಿದ್ದಾಳೆ ಎಂದು ಪೋಷಕರಿಗೆ ಹೇಳಿದ್ದಾನೆ.
ಆಗ ಆಕೆಯ ಪೋಷಕರು ಚನ್ನಗಿರಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಅಜ್ಜಂಪುರ ತಹಶೀಲ್ದಾರ ಸಮ್ಮುಖದಲ್ಲಿ ಸೋಮವಾರ ಕಾಡಿನಲ್ಲಿ ಹೂತಿಟ್ಟಿದ್ದ ಶವ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.