ಬೆಳಗಾವಿ : ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಆಶ್ರಮದ ಜೈನ ಮುನಿ ಕಾಮಕುಮಾರ ಮಹಾರಾಜರ ಹತ್ಯೆಗೆ ಮತ್ತೊಂದು ಪ್ರಮುಖ ಸಾಕ್ಷಿ ದೊರೆತಿದ್ದು ಮುನಿಗಳು ದಿನನಿತ್ಯ ಬರೆಯುತ್ತಿದ್ದ ಡೈರಿ (ದಿನಚರಿ) ಯನ್ನು ತನಿಖಾಧಿಕಾರಿಗಳು ಆಶ್ರಮದಿಂದ ವಶಕ್ಕೆ ಪಡೆದಿದ್ದಾರೆ.
ಇದಕ್ಕೂ ಮೊದಲು ಹಂತಕರು ಮುನಿಗಳು ಬರೆಯುತ್ತಿದ್ದ ದಿನಚರಿ ಪುಸ್ತಕವನ್ನು ತಾವು ಸುಟ್ಟು ಹಾಕಿರುವದಾಗಿ ತಿಳಿಸಿ ಸುಟ್ಟಿರುವ ಸ್ಥಳವನ್ನೂ ತೋರಿಸಿದ್ದರು. ಇದನ್ನು ನಂಬಿದ್ದ ಪೊಲೀಸರು ಸುಟ್ಟ ‘ದಿನಚರಿ’ ಯ ಬೂದಿಯನ್ನು ಸಂಗ್ರಹಿಸಿ ಬೆಂಗಳೂರಿನಲ್ಲಿರುವ ಫಾರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆದರೆ ಪರೀಕ್ಷಿಸಿದಾಗ “ಬೂದಿ ಡೈರಿಯದಲ್ಲ” ಎಂದು ವರದಿ ನೀಡಿದ್ದರು. ತನಿಖೆಯ ದಿಕ್ಕು ತಪ್ಪಿಸಲು ಸುಳ್ಳು ಮಾಹಿತಿ ನೀಡಿದ್ದ ಹಂತಕರನ್ನು ತಮ್ಮದೇ ‘ಭಾಷೆ’ ಯಲ್ಲಿ ವಿಚಾರಿಸಿಕೊಂಡ ಅವರು ಸುಟ್ಟದ್ದು ಡೈರಿಯಲ್ಲ, ಅದು ಆಶ್ರಮದಲ್ಲಿ ಮುನಿಗಳು ತಂಗುತ್ತಿದ್ದ ಕೋಣೆಯಲ್ಲೇ ಇದೆ ಎಂದು ಗೊತ್ತಾಗಿ ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಸಮದರ್ಶಿಗೆ ಮಾಹಿತಿ ನೀಡಿದ ತನಿಖೆಯ ಮುಖ್ಯಾಧಿಕಾರಿ, ಚಿಕೋಡಿ ಉಪ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ ಯಲಿಗಾರ ಅವರು, “ಮುನಿಗಳು ಬರೆಯುತ್ತಿದ್ದ ಡೈರಿಯಲ್ಲಿ ಆಶ್ರಮದಿಂದ ಸಾಲ ಪಡೆದವರ ಹೆಸರು, ದಿನಾಂಕ, ಪಡೆದ ಸಾಲ, ಅವರ ಫೋನ್ ನಂಬರ್, ಮನೆಉ ವಿಳಾಸ ಮುಂತಾದವುಗಳನ್ನು ನಮೂದಿಸಿದ್ದಾರೆ. ಹತ್ಯೆಯ ಪ್ರಮುಖ ಆರೋಪಿ ನಾರಾಯಣ ಮಾಳಿ ಕೂಡ 6 ಲಕ್ಷ ಸಾಲ ಪಡೆದುಕೊಂಡಿದ್ದಾನೆ” ಎಂದು ತಿಳಿಸಿದರು.
ಆರೋಪಿ ಮಾಳಿ ಮುನಿಗಳಿಗೆ ಆಪ್ತನಾಗಿದ್ದ, ಆಶ್ರಮಕ್ಕೆ ಬೇಕಾದಾಗ ಬಂದು ಹೋಗುತ್ತಿದ್ದ. ಮುನಿಗಳು ಕಟ್ಟಿಸುತ್ತಿದ್ದ ವಸತಿ ಶಾಲೆಗೆ ಮರಳು ಸಾಗಿಸುತ್ತಿದ್ದ. ರಾಯಬಾಗ ತಾಲ್ಲೂಕಿನ ಖಟಕಭಾವಿ ಗ್ರಾಮದವನಾದ ಈತ ಸರಬರಾಜು ಮಾಡುತ್ತಿದ್ದ ಮರಳನ್ನು ಕೃಷ್ಣ ನದಿಯಿಂದ ಅಕ್ರಮವಾಗಿ ತೆಗೆಯುತ್ತಿದ್ದ. ಇದು ಮುನಿಗಳಿಗೆ ಗೊತ್ತಿರಲಿಲ್ಲ. ತನ್ನ ಅಕ್ರಮ ಮರಳು ವ್ಯವಹಾರ ಸಾಂಗವಾಗಿ ನಡೆದಿದ್ದರಿಂದ ಅವನಿಗೆ ಒಂದು ಜೆಸಿಬಿ ತೆಗೆದುಕೊಂಡು ವ್ಯವಹಾರ ಇನ್ನಷ್ಟು ವೃದ್ಧಿಸುವ ಯೋಚನೆ ಬಂದಿದೆ. ಇದನ್ನು ಮುನಿಗಳಿಗೆ ತಿಳಿಸಿ ಅವರಿಂದ 6 ಲಕ್ಷ ಸಾಲ ಪಡೆದಿದ್ದ. ಪಡೆದ ಸಾಲ ಹಿಂದಿರುಗಿಸಲು ಮುನಿಗಳು ಒತ್ತಾಯಿಸುತ್ತಿದರಿಂದ ಕೂಪಿತನಾಗಿ ಅವರ ಹತ್ಯೆ ಮಾಡಲು ನಿರ್ಧಾರಿಸಿದ. ಇದಕ್ಕೆ ರಾಯಬಾಗ ತಾಲ್ಲೂಕಿನ ಹಸನಸಾಬ ಢಾಲಾಯತ ಎಂಬವನ ನೆರವು ಪಡೆದುಕೊಂಡಿದ್ದ.