ಬೆಳಗಾವಿ : ಇತ್ತೀಚಿಗೆ ವೈರಲ್ ಆದ ಮಠಾಧೀಷರ ಲೈಂಗಿಕ ಹಗರಣಗಳ ಕುರಿತು ಇಬ್ಬರು ಮಹಿಳೆಯರ ಮೊಬೈಲ್ ಫೋನ್ ಸಂಭಾಷಣೆಯಲ್ಲಿ ತಮ್ಮ ಹೆಸರನ್ನೂ ಪ್ರಸ್ತಾಪಿಸಿದಕ್ಕೆ ಬೈಲಹೊಂಗಲ ತಾಲೂಕಿನ ನೇಗಿನಹಾಳದ ಶ್ರೀ ಗುರು ಮಡಿವಾಳೇಶ್ವರ ಮಠದ ಬಸವಸಿದ್ದಲಿಂಗ ಸ್ವಾಮಿಗಳು ಭಾನುವಾರ ರಾತ್ರಿ ಮಠದ ತಮ್ಮ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮವಾರ ಮುಂಜಾನೆ ಸ್ವಾಮಿಗಳು ನಿತ್ಯದ ಸಮಯಕ್ಕೆ ಹೊರಗೆ ಬಾರದಿರುವದರಿಂದ ಅವರ ಸಹಾಯಕರು ಸ್ವಲ್ಪ ಹೊತ್ತು ಕಾಯ್ದು ನಂತರ ಇತರರಿಗೆ ತಿಳಿಸಿದರು. ನಂತರ ನೋಡಿದರೆ ಅವರು ಕೊನೆಯ ಸೀಲಿಂಗ್ ಗೆ ನೇಣು ಬಿಗಿದುಕೊಂಡು ಸಾವನಪ್ಪಿದ್ದರು.
ಬೆಳಗಾವಿ ತಾಲೂಕಿನ ಮನಗುಂಡಿ ಗ್ರಾಮದ ಸತ್ಯಕ್ಕ ಮತ್ತು ಗಂಗಾವತಿಯ ರುದ್ರಮ್ಮ ಎಂಬವರು ತಮ್ಮ ಮೊಬೈಲ್ ಫೋನ್ ಸಂಭಾಷಣೆಯಲ್ಲಿ ಮುರುಘಾಮಠ ಶ್ರೀ ಗಳ ಲೈಂಗಿಕ ಹಗರಣದ ಕುರಿತು ಮಾತನಾಡುತ್ತ “ಎಲ್ಲ ಮಠಾಧೀಷರೂ ಅಂತವರೇ, ಬೈಲಹೊಂಗಲಿನ ನೇಗಿನಹಾಳದ ಬಸವಸಿದ್ದಲಿಂಗ ಸ್ವಾಮಿಯೂ ಅವರಲ್ಲೊಬ್ಬ” ಎಂದಿದ್ದರು. ಅವರ ಈ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬೆಳಗಾವಿಯ ಮಠದಲ್ಲಿಯೇ ಅನೇಕ ವರ್ಷಗಳಿಂದ ತಾವು ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿರುವ ಮಹಿಳೆ ರಾಜ್ಯದ ಮಠಗಳಲ್ಲಿ ನಡೆಯುತ್ತಿದೆ ಎನ್ನಲಾದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ಪ್ರಸ್ತಾಪಿಸಿದ್ದರು.
ಇದರಿಂದ ನೊಂದುಕೊಂಡಿದ್ದ ಸ್ವಾಮಿಗಳು ಕಳೆದ ಶನಿವಾರ ದಿ 3 ರಂದು ಬೈಲಹೊಂಗಲ ಡಿಎಸ್ ಪಿ ಶಿವಾನಂದ ಅವರಿಗೆ ದೂರು ಸಲ್ಲಿಸಿದ್ದರು. ಅಲ್ಲದೇ ಭಾನುವಾರ ರಾತ್ರಿ ತಮ್ಮ ಭಕ್ತರೊಂದಿಗೆ ಮಾತನಾಡುತ್ತ ವಿಷಯ ಪ್ರಸ್ತಾಪಿಸಿ “ನೀವೆಲ್ಲ ಮಠಗಳನ್ನು ಸಂಶಯದಿಂದ ನೋಡುವಂತಾಗಿದೆ. ನನಗಂತೂ ಬದುಕುವದಕ್ಕಿಂತ ಸಾಯುವದೇ ಲೇಸೆಂದು ಅನಿಸುತ್ತಿದೆ” ಎಂದಿದ್ದರು ಎಂದು ಆಗ ಅವರ ಬಳಿಯಲ್ಲಿದ್ದ ಭಕ್ತರು ತಿಳಿಸಿದರು.
ಆತ್ಮಹತ್ಯೆ ಮಾಡಿಕೊಂಡಿರುವ 50 ವರುಷದ ಸ್ವಾಮಿಗಳು ಪೊಲೀಸರಿಗೆ ನೀಡಿರುವ ದೂರಿನಲ್ಲಿ ದೂರವಾಣಿಯಲ್ಲಿ ಸಂಭಾಷಣೆ ಮಾಡಿದ್ದ ಮಹಿಳೆಯರ ಹೆಸರು ಅವರ ಊರು ಪ್ರಸ್ತಾಪಿಸಿದನ್ನು ಗಮನಿಸಿದರೆ ಆ ಮಹಿಳೆಯರು ಅವರಿಗೆ ಪರಿಚಯಸ್ಥರಿದ್ದರೆಂದು ತಿಳಿದುಬಂದಿದೆ.
ವೈರಲ್ ಆಡಿಯೋ ಕುರಿತು ಸೂಕ್ತ ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೈಲಹೊಂಗಲ ಡಿವೈಎಸ್ಪಿ ಅವರಿಗೆ ಮಠದ ಆಡಳಿತ ಮಂಡಳಿ ದೂರು ನೀಡಿದೆ. ಬೈಲಹೊಂಗಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.