ಬೆಳಗಾವಿ, ೫- ಬೆಳಗಾವಿ ಕೋರ್ಟ ಆವರಣದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲಿ, ಹೆಗ್ಗಣ ಮತ್ತು ಸೊಳ್ಳೆಗಳ ಕಾಟ ವಿಪರೀತವಾಗಿ ಸಹಿಸಲಸಾಧ್ಯವಾಗಿದೆ. ಹಗಲಿನಲ್ಲೂ ಇವುಗಳ ಕಾರಣ ಸಿಬ್ಬಂದಿ ಹೈರಾಣಾಗಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಿರ್ವಹಿಸಲು ಆಗುತ್ತಿಲ್ಲ. ಸಿಬ್ಬಂದಿಯ ಆರೋಗ್ಯ ಮತ್ತು ಕೆಲಸದಲ್ಲಿ ದಕ್ಷತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಜಿಲ್ಲಾಡಳಿತ “ಇಲಿ, ಹೆಗ್ಗಣ ಹಿಡಿಯುವ ಮತ್ತು ಸೊಳ್ಳೆಗಳನ್ನು ನಿರ್ಮೂಲ ಮಾಡುವ” ಗುತ್ತಿಗೆ ನೀಡಲು ಟೆಂಡರ್ ನೋಟೀಸ್ ಜಾರಿ ಮಾಡಿದ ಅಪರೂಪದ ಸುದ್ದಿ ತಿಳಿದು ಬಂದಿದೆ.
ಕಳೆದ ಗುರುವಾರ ಟೆಂಡರ್ ನೋಟೀಸು ಹೊರಡಿಸಿರುವ ಜಿಲ್ಲಾಡಳಿತವು ಶೀಘ್ರ ಸಮಸ್ಯೆಗೆ ಪರಿಹಾರ ಕಂಡುಹಿಡಿಯ ಬೇಕಿರುವುದರಿಂದ ಕೇವಲ ನಾಲ್ಕು ದಿನಗಳಲ್ಲಿ ನೋಟೀಸಗೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ. ಈ ಅವಧಿ ಸೋಮವಾರ ದಿ. 7 ರಂದು ಕೊನೆಯಾಗಲಿದ್ದು ಯಶಸ್ವಿ ಗುತ್ತಿಗೆದಾರರು ಒಂದು ವರ್ಷದ ಅವಧಿಗೆ ಕೆಲಸ ಮಾಡಬೇಕಾಗುವುದು.
ಇತರ ಸರಕಾರಿ ಕಚೇರಿಗಳಿಗೆ ಹೋಲಿಸಿದರೆ ಜಿಲ್ಲಾಧಿಕಾರಿಗಳ ನೆಲಮಹಡಿ ಮತ್ತು ಎರಡು ಅಂತಸ್ತಿನ ಕಟ್ಟಡ ಉತ್ತಮವಾಗಿದೆ. 5-6 ಇತರ ಇಲಾಖೆಗಳ ಕಚೇರಿ ಹೊಂದಿರುವ ಈ ಕಚೇರಿ ಸಮುಚ್ಚಯ ಅವಶ್ಯವಿದ್ದಾಗೆಲ್ಲಾ ನವೀಕರಣಗೊಳ್ಳುತ್ತಿದೆ. ಆದರೆ ಸೊಳ್ಳೆಗಳ ಕಾಟ ವಿಪರೀತವಾಗಿರುವುದರಿಂದ ಸಿಬ್ಬಂದಿಗೆ ಕೆಲಸದ ಕುರಿತು ಹೆಚ್ಚು ಗಮನ ಕೊಡಲು ಆಗುತ್ತಿಲ್ಲ. ಅಲ್ಲದೇ ಅವುಗಳು ಕಚ್ಚುವುದರಿಂದ ಆರೋಗ್ಯ ಸಮಸ್ಯೆ ಆಗುತ್ತಿದೆ.
ಕಳೆದ ಎರಡು ದಶಕಗಳಿಂದ ಕಚೇರಿಯ ಸರ್ವ ಕೆಲಸವೂ ಗಣಕೀಕೃತ ಯಂತ್ರಗಳಲ್ಲೇ ಮಾಡಲಾಗುತ್ತಿದೆ. ಸಿಬ್ಬಂದಿ ರಾತ್ರಿಯೂ ಕಚೇರಿಯಲ್ಲಿದ್ದು ಕಾಗದದ ಎಲ್ಲ ದಾಖಲೆಗಳನ್ನು ಗಣಕಿಕೃತ ಯಂತ್ರಗಳಲ್ಲಿ ನಮೂದಿಸಿದ್ದಾರೆ. ಆದರೆ ಕಚೇರಿ ಸಮುಚ್ಚಯದಲ್ಲಿ ಇಲಿ, ಹೆಗ್ಗಣಗಳು ರಾತ್ರಿಯಲ್ಲಿ ಕಂಪ್ಯೂಟರಗಳ ವೈರ್, ಕೇಬಲ್ ಗಳನ್ನು ಕಡೆಯುವುದರಿಂದ ಕೆಲಸಕ್ಕೆ ವ್ಯತ್ಯಯ, ಅಡಚಣೆಯಾಗುತ್ತಿದೆ. ಕಂಪ್ಯೂಟರ್ ಇಂಜಿನೀಯರಗಳು ಬಂದು ತುಂಡಾದ ವೈರ್, ಕೇಬಲ್ ಪುನಃ ಜೋಡಿಸುವವರೆಗೆ ಕೆಲಸಕ್ಕೆ ವ್ಯತ್ಯಯವಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಇವುಗಳಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಈ ಗುತ್ತಿಗೆ ಕರೆಯಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ಆಸ್ತಿ, ವಿವಾಹ ಉಪ ನೋಂದಣಿ ಕಚೇರಿಯಿದ್ದು ತುಂಬಾ ಹಳೆಯದಾಗಿದೆ. ಸುಮಾರು 100 ವರ್ಷಗಳ ದಸ್ತಾವೇಜುಗಳನ್ನು ಕಟ್ಟಿ ಸಂಗ್ರಹಿಸಿಡಲಾಗಿದೆ. ಅವುಗಳ ಕಂಪ್ಯೂಟರ್ ನೋಂದಣಿ ಇನ್ನೂ ಆಗಬೇಕಿದೆ. ಈ ಕಚೇರಿಯಲ್ಲೂ ಇಲಿ, ಹೆಗ್ಗಣ, ಸೊಳ್ಳೆಗಳು ವಿಪರೀತವಾಗಿವೆ. ಜಿಲ್ಲಾಧಿಕಾರಿ ಕಚೇರಿ ಆವರಣ ಇಲಿ, ಹೆಗ್ಗಣಗಳ ಬೀಡಾಗಿದೆ.