ಕೊಡಗು : ಎಸ್.ಎಸ್.ಎಲ್.ಸಿ ಪಾಸ್ ಆಗಿ ಸಂಭ್ರಮದಲ್ಲಿದ್ದ ವಿದ್ಯಾರ್ಥಿನಿಯ ರುಂಡ ಕತ್ತರಿಸಿ ಹತ್ಯೆಗೈದಿದ್ದ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಊರಿಗೆ ಖುಷಿತಂದಿದ್ದ ವಿದ್ಯಾರ್ಥಿನಿ ಮೀನಾಳನ್ನು ಪ್ರಕಾಶ ಅಲಿಯಾಸ್ ಓಂಕಾರಪ್ಪ ಎಂಬಾತ ಕುತ್ತಿಗೆ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಸೋರ್ಲಬ್ಬಿ ಗ್ರಾಮದಲ್ಲಿ ನಿನ್ನೆ ನಡೆದಿತ್ತು.
ಪ್ರಕರಣ ಸಂಬಂಧ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಇದೀಗ ಆರೋಪಿಯಾದ ಪ್ರಕಾಶ ಅಲಿಯಾಸ್ ಓಂಕಾರಪ್ಪ ಸೂರ್ಲಬ್ಬಿ ಗ್ರಾಮದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿದ್ಯಾರ್ಥಿನಿ ಮೀನಾಳ ಮನೆಯಿಂದ ಮೂರು ಕಿ.ಮೀ ದೂರದಲ್ಲಿ ಆರೋಪಿಯ ಶವ ನೇಣುಬಿಗಿದ ಸ್ಥಿತಿಯಲ್ಲಿ ಪೊಲೀಸರಿಗೆ ಪತ್ತೆಯಾಗಿದೆ.
ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕಗಳಿಸಿದ್ದ ಖುಷಿಯಲ್ಲಿದ್ದ ಮೀನಾಳ ನಿಶ್ಚಿತಾರ್ಥ ನಿನ್ನೆ ಮೇ 9ರಂದು ಪ್ರಕಾಶನ ಜೊತೆ ನಿಶ್ಚಯವಾಗಿತ್ತು. ಅಪ್ರಾಪ್ತ ಬಾಲಕಿಯ ನಿಶ್ಚಿತಾರ್ಥ ನಡೆಯುತ್ತಿರುವ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಸ್ಥಳಕ್ಕೆ ಬಂದ ಪೊಲೀಸರು ನಿಶ್ಚಿತಾರ್ಥ ನಿಲ್ಲಿಸಿದ್ದರು. ಬಳಿಕ ಎರಡೂ ಕುಟುಂಬದವರು ತಮ್ಮ ತಮ್ಮ ಮನೆಗೆ ವಾಪಸ್ ಆಗಿದ್ದರು. ಆರೋಪಿ ಓಂಕಾರಪ್ಪ ಕೂಡ ಮನೆಗೆ ತೆರಳಿದ್ದ. ಆದರೆ ಆನಂತರ ವಿದ್ಯಾರ್ಥಿನಿ ಮೀನಾಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಚ್ಚಿನಿಂದ ಆಕೆಯ ರುಂಡ ಕತ್ತರಿಸಿ ಕೊಲೆಗೈದು ಪರಾರಿಯಾಗಿದ್ದ.
ಕೊಲೆ ನಡೆದ ಜಾಗದಲ್ಲಿಯೇ ಕೃತ್ಯಕ್ಕೆ ಬಳಸಿದ್ದ ಮಚ್ಚು ಪತ್ತೆಯಾಗಿತ್ತು. ಪೊಲೀಸರು ಆರೋಪಿ ಬಂಧನಕ್ಕಾಗಿ ಶೋಧ ನಡೆಸಿದ್ದರು. ಆದರೆ ಈಗ ಮೀನಾಳ ಮನೆಯಿಂದ ಮೂರು ಕಿ.ಮೀ ದೂರದಲ್ಲಿ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.