ಹಾಸನ: 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗುತ್ತಿದ್ದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.
ಕೂಲಿ ಕೆಲಸಕ್ಕೆಂದು ಬಂದಿದ್ದ ಪೋಷಕರ ಜೊತೆ ಇದ್ದ ಬಾಲಕಿ ಮೇಲೆ ಎಸ್ಟೇಟ ಮಾಲೀಕ ಹಾಗೂ ಆತನ ಸಂಬಂಧಿಗಳು ಸಾಮೂಹಿಕ ಅತ್ಯಾಚಾರ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಬಾಲಕಿ ತುಂಬು ಗರ್ಭಿಣಿಯಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಪೋಷಕರ ದೂರಿನ ಮೇರೆಗೆ ಪೊಲೀಸರು ಮನೆ ಮಾಲೀಕ ಹಾಗೂ ಆತನ ಸಂಬಂಧಿಕರನ್ನು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಬಾಲಕಿ ರಕ್ಷಣೆ ಕೋರಿ ಹಾಗೂ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮಕ್ಕಳ ರಕ್ಷಣಾ ಸಮಿತಿ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.
ಬಾಲಕಿ ಕುಟುಂಬ ಕೆಲಸ ಮಾಡುತ್ತಿದ್ದ ಕಾಫಿ ಎಸ್ಟೇಟ್ ಮಾಲೀಕ ಸೇರಿದಂತೆ ಮೂವರು ಆಕೆಯ ಪೋಷಕರು ಹೊರಗೆ ಹೋದಾಗ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ ಹೇಳಿದ್ದಾರೆ.
ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸರು ಅದೇ ಗ್ರಾಮದ ಸ್ವಾಗತ, ಸುದರ್ಶನ ಹಾಗೂ ಪಾಪಣ್ಣ ಎಂಬುವರನ್ನು ಬಂಧಿಸಿದ್ದಾರೆ. ಘಟನೆಯ ನಂತರ ಬಾಲಕಿ ತನ್ನ ಪೋಷಕರಿಗೆ ಹೆದರಿ ವಿಷಯವನ್ನು ಬಹಿರಂಗಪಡಿಸಿಲ್ಲ. ಅಲ್ಲದೇ ದುಷ್ಕರ್ಮಿಗಳು ಸಂತ್ರಸ್ತೆ ಬಾಲಕಿಗೆ ಈ ವಿಷಯ ಬಹಿರಂಗಪಡಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಬಾಲಕಿ ಕಳೆದೆರಡು ವರ್ಷಗಳ ಹಿಂದೆ ಬೇರೆ ಜಿಲ್ಲೆಯಿಂದ ಉದ್ಯೋಗ ಅರಸಿ ವಲಸೆ ಬಂದಿದ್ದ ಕೂಲಿ ಕಾರ್ಮಿಕರ ಕುಟುಂಬದ ಹುಡುಗಿ. ತನ್ನ ದೇಹದಲ್ಲಿ ತೀವ್ರ ಬದಲಾವಣೆಯಾದ ನಂತರ ಘಟನೆಯ ಬಗ್ಗೆ ಬಾಲಕಿ ಪೋಷಕರಿಗೆ ನಡೆದ ಘಟನೆ ಬಗ್ಗೆ ತಿಳಿಸಿದ್ದಾಳೆ. ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಎಂಟು ತಿಂಗಳ ಗರ್ಭಿಣಿಯಾಗಿರುವ ಬಾಲಕಿಗೆ ಮಕ್ಕಳ ಕಲ್ಯಾಣ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದ್ದು, ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಎಸ್ ಪಿ ತಿಳಿಸಿದ್ದಾರೆ.