ಬೆಳಗಾವಿ : (ಸಮದರ್ಶಿ ಸುದ್ದಿ) : ದೇಶದ ಹಲವು ರಾಜ್ಯಗಳಲ್ಲಿ ಮಹಿಳೆಯರ ಮೇಲೆ ಬಲಾತ್ಕಾರ ನಡೆಸಿ ಕೊಲೆಗಳನ್ನು ಮಾಡಿದ್ದ ವಿಕೃತ ಕಾಮಿ, ಸರಣಿ ಹಂತಕ ಉಮೇಶ ರೆಡ್ಡಿಯ ಮರಣದಂಡನೆಯನ್ನು ಸುಪ್ರೀಮ ಕೋರ್ಟ ಮಾರ್ಪಡಿಸಿ, 30 ವರ್ಷ ಜೀವಾವಧಿ ಶಿಕ್ಷೆ ವಿಧಿಸಿದೆ.
ಕರ್ನಾಟಕ ಹೈಕೋರ್ಟ ಉಮೇಶ ರೆಡ್ಡಿಗೆ ಮರಣದಂಡನೆ ಖಾಯಂಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಉಮೇಶ ರೆಡ್ಡಿ ಸುಪ್ರೀಮ ಕೋರ್ಟ ಮೆಟ್ಟಿಲೇರಿದ್ದ. ಈ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಉದಯ ಲಲಿತ್ ನೇತೃತ್ವದ ತ್ರಿಸದಸ್ಯ ಪೀಠವು ಐತಿಹಾಸಿಕ ಸುನಿಲ ಬಾತ್ರಾ ಪ್ರಕರಣವನ್ನು ಉಲ್ಲೇಖಿಸಿ ಈ ತೀರ್ಪನ್ನು ನೀಡಿದೆ. ಸಿಜೆಐ ಯು.ಯು. ಲಲಿತ, ನ್ಯಾ., ಎಸ್. ರವೀಂದ್ರ ಭಟ್, ನ್ಯಾ. ಪಿ.ಎಸ್. ನರಸಿಂಹ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿತ್ತು. “ಆತನನ್ನು ಈ ಹತ್ತು ವರ್ಷಗಳ ಕಾಲ ಏಕಾಂಗಿಯಾಗಿ ಜೈಲಿನಲ್ಲಿರಿಸಿರುವುದರಿಂದ ಮಾನಸಿಕ ಹಿಂಸೆಗೊಳಗಾಗಿರುವ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ” ಎಂದು ಪೀಠ ತಿಳಿಸಿದೆ.
ಅಪರಾಧಿಯ ಪರವಾಗಿ ಯಾವುದೇ ಅರ್ಜಿಯನ್ನು ಸಲ್ಲಿಸಿದರೆ ಅದನ್ನು 30 ವರ್ಷಗಳ ಶಿಕ್ಷೆ ಅನುಭವಿಸಿದ ಬಳಿಕವೇ ಪರಿಗಣಿಸಲಾಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಒಂದು ವೇಳೆ ಆ ಬಳಿಕವೂ ಯಾವುದೇ ಅರ್ಜಿ ಸಲ್ಲಿಕೆಯಾಗದಿದ್ದರೆ ಉಮೇಶ ರೆಡ್ಡಿ ಆಜೀವ ಶಿಕ್ಷೆಗೊಳಪಡುತ್ತಾನೆ ಎಂದು ಸುಪ್ರೀಮ ಕೋರ್ಟ ಹೇಳಿದೆ.
ಅಪರಾಧಿಯನ್ನು 2011ರ ನವೆಂಬರ 6ರಿಂದ ಇಲ್ಲಿಯ ವರೆಗೆ ಏಕಾಂತ ಬಂಧನದಲ್ಲಿ ಇರಿಸಲಾಗಿತ್ತು ಎಂಬ ಬೆಳಗಾವಿ ಜೈಲಿನ ವೈದ್ಯಾಧಿಕಾರಿ ಸಲ್ಲಿಸಿದ್ದ ಪತ್ರವನ್ನು ಪರಿಗಣಿಸಿ ಸುಪ್ರೀಮ ಕೋರ್ಟ ಈ ತೀರ್ಪು ನೀಡಿದೆ.
ಬೆಳಗಾವಿ ಹಿಂಡಲಗಾ ಜೈಲ್ ಮುಖ್ಯಾಧಿಕಾರಿ ಕೃಷ್ಣಕುಮಾರ ಅವರು “ಉಮೇಶ ರೆಡ್ಡಿ ಕುರಿತು ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪು ಗೊತ್ತಾಗಿದೆ. ಆದರೆ ಅದರ ಪ್ರತಿ ರಾಜ್ಯದ ಬಂದೀಖಾನೆ ಇಲಾಖೆಗೆ ತಲುಪಿಲ್ಲ. ಕೋರ್ಟ ತೀರ್ಪಿನ ಕುರಿತು ಆತನಿಗೆ ಮೌಖಿಕವಾಗಿ ತಿಳಿಸಲಾಗಿದೆ. ಆದರೆ ಆತ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಆತ ಮಾನಸಿಕವಾಗಿ ಮತ್ತು ದೈಹಿಕವಾಗಿ ಕ್ಷೇಮವಾಗಿದ್ದಾನೆ” ಎಂದು ಸಮದರ್ಶಿಗೆ ತಿಳಿಸಿದರು.
ಪೊಲೀಸ್ ಆಗಿದ್ದ, ಉಮೇಶ ರೆಡ್ಡಿ ಬರೋಬ್ಬರಿ 18 ಕೊಲೆ, ಕನಿಷ್ಠ 20 ಅತ್ಯಾಚಾರದ ಆರೋಪ ಹೊತ್ತಿದ್ದಾನೆ. 9 ಪ್ರಕರಣಗಳಲ್ಲಿ ಈತ ಶಿಕ್ಷೆಗೆ ಗುರಿಯಾಗಿದ್ದಾನೆ. ಈತನ ಕೃತ್ಯಗಳು ಕರ್ನಾಟಕವಲ್ಲದೇ ಮಹಾರಾಷ್ಟ್ರ, ಗುಜರಾತ್ನಲ್ಲೂ ಬೆಳಕಿಗೆ ಬಂದಿದ್ದವು.
ಇಪ್ಪತ್ತು ವರ್ಷಗಳ ಸುದೀರ್ಘ ಕಾಲ ಪೊಲೀಸರಿಂದ ಬಚಾವಾಗಿದ್ದ ಉಮೇಶ ರೆಡ್ಡಿ ಪ್ರಕರಣಗಳು ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದ್ದವು. 1969ರಲ್ಲಿ ಚಿತ್ರದುರ್ಗದಲ್ಲಿ ಜನಿಸಿದ್ದ ಉಮೇಶ ರೆಡ್ಡಿ ಮೊದಲು ಸಿಆರ್ಪಿಎಫ್ಗೆ ಸೇರಿದ್ದ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕನಾಗಿ ಸೇವೆಗೆ ನಿಯೋಜನೆಗೊಂಡಿದ್ದಾಗ ಕಮಾಂಡರ್ ಮನೆಯಲ್ಲಿ ಡ್ಯೂಟಿಯಲ್ಲಿದ್ದಾಗ ಅವರ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಸೇನೆಯಿಂದ ಹೊರಬಿದ್ದಿದ್ದ. ಬಳಿಕ ಅದೇಗೋ ಚಿತ್ರದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸೇರಿ ಅಪಘಾತ ಪ್ರಕರಣವೊಂದರಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ಇದು ಸಣ್ಣ ಅಪರಾಧ ಎಂದು ಆತನನ್ನು ಬಿಡಲಾಗಿತ್ತು.
ನಂತರ ಈತ ತನ್ನ ಅಪರಾಧ ಕೃತ್ಯ ಆರಂಭಿಸಿದ್ದ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಪುರುಷರು ಮನೆಯಲ್ಲಿ ಇಲ್ಲದ ಸಮಯದಲ್ಲಿ ನೀರು ಕೇಳುವ ನೆಪದಲ್ಲಿ ಮನೆ ಪ್ರವೇಶಿಸಿ ಮಹಿಳೆಯರಿಗೆ ಚಾಕು ತೋರಿಸಿ ಅತ್ಯಾಚಾರ ನಡೆಸಿ, ನಂತರ ಅವರನ್ನು ಹತ್ಯೆಗೈದು ಚಿನ್ನಗಳೊಂದಿಗೆ ಪರಾರಿಯಾಗುತ್ತಿದ್ದ. ಕೊಂದ ನಂತರ ಮಹಿಳೆಯರ ಒಳ ಉಡುಪುಗಳನ್ನು ಒಯ್ಯುತ್ತಿದ್ದ.
ಆಗ ಆತನಿಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಮ ಕೋರ್ಟ ಎತ್ತಿಹಿಡಿದಿತ್ತು. ಈ ಸಂದರ್ಭದಲ್ಲಿ ಉಮೇಶ ರೆಡ್ಡಿ ಕ್ಷಮಾದಾನ ನೀಡುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದ. 12 ಮೇ 2013ರಂದು ಆತನ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದರು.
ಉಮೇಶ ರೆಡ್ಡಿ 10 ವರ್ಷಗಳಿಂದ ಒಂಟಿಯಾಗಿ ಜೈಲಿನಲ್ಲಿದ್ದ. ಹೀಗಾಗಿ ರೆಡ್ಡಿ ಮಾನಸಿಕ ಯಾತನೆ ಅನುಭವಿಸಿದ್ದು, ಶಿಕ್ಷೆಯನ್ನು ಜೀವಾವಧಿಯಾಗಿ ಮಾರ್ಪಾಡು ಮಾಡುವಂತೆ ಆತನ ಪರ ವಕೀಲ ಬಿ.ಎನ್. ಜಗದೀಶ ಅವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಪೀಠವು ಗಲ್ಲು ಶಿಕ್ಷೆ ಕಾಯಂಗೊಳಿಸಿತ್ತು. ಆದರೆ ಸುಪ್ರೀಮ ಕೋರ್ಟಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ನೀಡಿತ್ತು ಹಾಗೂ ಅಲ್ಲಿಯ ತನಕ ಗಲ್ಲಿಗೇರಿಸಬಾರದು ಎಂಬ ಮನವಿ ಒಪ್ಪಿಕೊಂಡಿತ್ತು.
ನಂತರ ಉಮೇಶ ರೆಡ್ಡಿ ಸುಪ್ರೀಮ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದ.
ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಉದಯ ಲಲಿತ ನೇತೃತ್ವದ ತ್ರಿಸದಸ್ಯ ಪೀಠವು ಏಕಾಂಗಿತನದ ಪರಿಣಾಮವು ನಿಸ್ಸಂಶಯವಾಗಿ ಸ್ಪಷ್ಟವಾಗಿದೆ ಮತ್ತು ವೈದ್ಯಕೀಯ ವೃತ್ತಿಪರರ ಪತ್ರ ಮತ್ತು ಜೈಲಿನ ಸಂವಹನದಿಂದ ಸ್ಪಷ್ಟವಾಗುತ್ತದೆ ಎಂದು ಪೀಠವು ಗಮನಿಸಿದೆ. ಏಕಾಂತದ ಸೆರೆವಾಸವು ಅವನ ಯೋಗಕ್ಷೇಮದ ಮೇಲೆ ಕೆಟ್ಟ ಪರಿಣಾಮಗಳನ್ನು ತೋರಿಸಿದೆ ಎಂದು ಅದು ಗಮನಿಸಿದೆ.
ಈಗ ಸುಪ್ರೀಮ ಕೋರ್ಟಿನ ತೀರ್ಪು ನೀಡಿದ್ದು ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡು ಮಾಡಲಾಗಿದೆ.