ಬೆಳಗಾವಿ : ಹೆಚ್ಚೆಂದರೆ ಅರ್ಧ ಗಂಟೆ ಮಾತ್ರ ಬದುಕಬಹುದೆಂದು ವೈದ್ಯರು ಘೋಷಿಸಿದ್ದ ಏಳು ವರ್ಷದ ಮಗು ಪವಾಡ ಎಂಬಂತೆ ಈಗ ಚೇತರಿಸಿಕೊಳ್ಳುತ್ತಿದೆ.
ಏಳು ವರುಷದ ತಮ್ಮ ಮಗು ಹೆಚ್ಚೆಂದರೆ ಅರ್ಧ ಗಂಟೆ ಮಾತ್ರ ಬದುಕಬಹುದೆಂದು ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿರುವ ಪ್ರಖ್ಯಾತ ಆಸ್ಪತ್ರೆ ತಿಳಿಸಿದ ನಂತರ ಬೇರೆ ದಾರಿ ಕಾಣದೇ ತಕ್ಷಣ ಮಗುವನ್ನು ಕಾರೊಂದರಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಹೊರವಲಯದ ಬೆಟ್ಟದ ಮೇಲಿರುವ “ಮಿರಾಕ್ಯೂಲಸ್ ಕ್ರಾಸ್” ಗೆ ತೆಗೆದುಕೊಂಡು ಬಂದು ಯೇಸು ಶಿಲುಬೆಯ ಕೆಳಗೆ ಇಟ್ಟು “ನಮ್ಮ ಮಗನನ್ನು ಬದುಕಿಸು ದೇವರೇ” ಎಂದು ಪ್ರಾರ್ಥಿಸಿ ಮಗುವನ್ನು ಅಲ್ಲಿಯೇ ಬಿಟ್ಟು ಸ್ವಲ್ಪ ದೂರ ಹೋಗಿ ನಿಂತ ಉತ್ತರ ಕನ್ನಡ (ಕಾರವಾರ) ಜಿಲ್ಲೆಯ ದಂಪತಿಗಳ ಮಗು ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ಮಗುವಿನ ತಾಯಿ ನಮ್ಮ ಪ್ರತಿನಿಧಿಗೆ ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಂಬಡಗಾ ಗ್ರಾಮದ ಮಾಧವಿ-ಕೃಷ್ಣಾ ಸಾತ್ರಾವಿ ದಂಪತಿಗಳ ಒಬ್ಬನೇ ಗಂಡು ಮಗು ಶೈಲೇಶ. ಈತನಿಗೆ 13 ವರುಷದ ಕೆಳಗಿನ ನಾಲ್ಕು ಅಕ್ಕಂದಿರಿದ್ದಾರೆ. ತಂದೆ ಸಾಂದರ್ಭಿಕ ಕೆಲಸಗಾರ. ದಿನದ ಕೂಲಿಯಂತೆ ದೊರೆತ ಯಾವುದೇ ಕೆಲಸ ಮಾಡುವವರು, ತಾಯಿ ಮಾಧವಿ ಗೃಹಿಣಿ.
ಅಂಬಡಗಾದ ಸರಕಾರಿ ಕನ್ನಡ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದ ಶೈಲೇಶನಿಗೆ ಕಳೆದ ಮಾರ್ಚ ತಿಂಗಳಲ್ಲಿ ವಿಪರೀತ ಜ್ವರ ಬಂದು ತಲೆಗೇರಿ (ಮಿದುಳಿಗೆ) ದೇಹದ ಎಡಭಾಗವನ್ನು ನಿಷ್ಕ್ರೀಯಗೊಳಿಸಿತು. ಮಿದುಳು ನಿಷ್ಕ್ರೀಯಗೊಂಡು ನರಗಳು ಹಾನಿಗೀಡಾಗಿ ದೇಹ ಮರುಗಟ್ಟಿ ಹೋಗಿತ್ತು. ಮೇಲಿನ ಮತ್ತು ಕೆಳಗಿನ ಹಲ್ಲುಗಳನ್ನು ಗಟ್ಟಿಯಾಗಿ ಹಿಡಿದಿದ್ದರಿಂದ ಎರಡೂ ಭಾಗದ ಮುಂದಿನ ಹಲ್ಲುಗಳು ಬಿದ್ದು ಹೋದವು.
ಸಮದರ್ಶಿಯೊಂದಿಗೆ ಮಾತನಾಡಿದ ಶೈಲೇಶನ ತಾಯಿ ಮಾಧವಿ ಅವರು, “ಮಾರ್ಚ ತಿಂಗಳಿನಲ್ಲಿ ಒಂದು ದಿನ ಶಾಲೆಯಿಂದ ಮರಳಿದ ತಮ್ಮ ಮಗ ತೀವ್ರ ಜ್ವರದಿಂದ ಬಳಲಿದ. ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಪಡೆದು ಅವರ ಸೂಚನೆಯ ಮೇರೆಗೆ ಮೊದಲು ಹುಬ್ಬಳ್ಳಿಯ ಆಸ್ಪತ್ರೆಗೆ ನಂತರ ಧಾರವಾಡ ಸಮೀಪದ ಪ್ರಖ್ಯಾತ ಆಸ್ಪತ್ರೆಗೆ ಸೇರಿಸಲಾಯಿತು. ಮೊದಲು ಆರೋಗ್ಯವಾಗಿದ್ದ ಮಗನು ಆಸ್ಪತ್ರೆ ಸೇರಿದ ನಂತರ ಆತನ ಆರೋಗ್ಯ ವಿಕೋಪಕ್ಕೆ ಹೋಯಿತು. ಮಗು ದೇಹ ಚಲನೆಯನ್ನು ಕಳೆದುಕೊಂಡಿತು. ಮಗುವಿನ ಚಿಕಿತ್ಸೆಗೆ ಮೂರು ತಿಂಗಳಲ್ಲಿ ಸುಮಾರು 13 ಲಕ್ಷ ರೂಪಾಯಿ ವೆಚ್ಚ ಮಾಡಿದ್ದೇವು. ಆದರೆ ಪ್ರಯೋಜನವಾಗಲಿಲ್ಲ.
ಜುಲೈ ತಿಂಗಳಿನ ಎರಡನೇ ವಾರದಲ್ಲಿ ಕೋಮಾವಸ್ಥೆಯಲ್ಲಿದ್ದ ತಮ್ಮ ಮಗುವಿನ ಕುರಿತು “ನಿಮ್ಮ ಮಗು ಇನ್ನು ಬದುಕುವ ಸಾಧ್ಯತೆಯಿಲ್ಲ. ಹೆಚ್ಚೆಂದರೆ ಅರ್ಧ ಗಂಟೆ ಮಾತ್ರ ಬದುಕಿರಬಲ್ಲ. ಮನೆಗೆ ಕರೆದುಕೊಂಡು ಹೋಗಿರಿ” ಎಂದು ಹೇಳಿದರು.
ದಿಕ್ಕು ತೋಚದಂತಾಗಿದ್ದ ನಮಗೆ ಖಾನಾಪುರ ತಾಲೂಕಿನ ನಂದಗಡ ಬೆಟ್ಟದ ಮೇಲಿರುವ ಯೇಸುವಿನ “ಮಿರ್ಯಾಕಲಸ್ ಕ್ರಾಸ್” ಗೆ ಮಗುವನ್ನು ತೆಗೆದುಕೊಂಡು ಹೋಗಿರಿ, ನಿಮ್ಮ ಮಗು ಬದುಕುತ್ತೆ ಎಂದು ಹಲವರು ಸಲಹೆ ನೀಡಿದ್ದರು. ಅಲ್ಲಿ ಅನೇಕ ಪವಾಡಗಳು ನಡೆದಿವೆ ಎಂದು ಜನ ಹೇಳುತ್ತಾರೆ. ಬೇರೆ ದಾರಿಯೇ ಕಾಣದಾಗಿದ್ದ ಆ ಸಮಯದಲ್ಲಿ ಒಂದು ಖಾಸಗಿ ಕಾರ್ ಬಾಡಿಗೆ ಪಡೆದ ನಾವು ನೇರವಾಗಿ ಮಿರ್ಯಾಕಲ್ ಏಸು ಪ್ರತಿಮೆಯ ಕ್ರಾಸ್ ಬಳಿಗೆ ಹೋಗಿ ಯೇಸುವಿನ ಶಿಲುಬೆಯ ಕೆಳಗೆ ಮಗುವನ್ನು ಇಟ್ಟು ನಾನು ಮತ್ತು ನನ್ನ ಪತಿ “ನಮ್ಮ ಮಗುವನ್ನು ಬದುಕಿಸು ದೇವರೇ” ಎಂದಷ್ಟೇ ಪ್ರಾರ್ಥನೆ ಮಾಡಿ ಸ್ವಲ್ಪ ದೂರದಲ್ಲಿ ನಿಂತು ಕೊಂಡೆವು. ಸುಮಾರು 15 ನಿಮಿಷಗಳ ನಂತರ ಹೋಗಿ ನೋಡಿದರೆ ತೀರಾ ಬೆಳ್ಳಗಾಗಿದ್ದ ಕಣ್ಣುಗಳಲ್ಲಿ ಹೊಳಪು ಕಂಡು ಬಂದಿತ್ತು. ನರಗಳು ಕಂಡು ಬಂದವು. ಬಳಿಕ ಮಗುವನ್ನು ಎತ್ತಿಕೊಂಡು ಬೆಟ್ಟದ ಬದಿಯಲ್ಲಿರುವ ಚರ್ಚಗೆ ತೆಗೆದುಕೊಂಡು ಹೋಗಿ ಅಲ್ಲಿನ ಫಾದರ್ ಬಳಿ ಮಗುವಿನ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿಸಿಕೊಂಡ ಬಂದ ನಂತರ ಏನು ಮಾಡಬೇಕೆಂದು ತೋಚದೇ ಅಲ್ಲಿಯೇ ಕುಳಿತ್ತಿದ್ದೇವು. ನೂರಾರು ಮೆಟ್ಟಲುಗಳಿರುವ ಬೆಟ್ಟದ ಮೇಲಿರುವ ಶಿಲುಬೆ ತಲುಪಲು ಕೊನೆಯ ಐದು ಮೆಟ್ಟಲುಗಳನ್ನು ತಾವು ಮೊಣಕಾಲುಗಳ ಮೇಲೆ ನಡೆದು ಸೇರಿದುದಾಗಿ ಆಕೆ ತಿಳಿಸಿದರು.
ಸ್ವಲ್ಪ ಹೊತ್ತಿನಲ್ಲಿ ಬೆಳಗಾವಿಯ ಸಮಾಜ ಸೇವಕರಾದ ಸಂಜಯ ಧರೇಕರ ಅವರು ದೇವರಂತೆ ಅಂಬ್ಯುಲೆನ್ಸ ತೆಗೆದುಕೊಂಡು ಬಂದು ನಮ್ಮ ಮನವೊಲಿಸಿ ಬೆಳಗಾವಿಯ ಯೆಸ್ ಆಸ್ಪತ್ರೆಗೆ ಸೇರಿಸಿದರು. ಆಸ್ಪತ್ರೆಗೆ ಸೇರಿಸಲು ತಮ್ಮಲ್ಲಿ ಏನೂ ಇಲ್ಲವೆಂದರೂ ಮಗುವನ್ನು ಇಲ್ಲಿಗೆ ಸೇರಿಸಿ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಅಲ್ಲದೇ ಮಗುವನ್ನು ನೋಡಿಕೊಳ್ಳಲು ನಮಗೆ ಇರಲು ಒಂದು ಕೋಣೆಯನ್ನೂ ಕೊಟ್ಟಿದ್ದಾರೆ ಎಂದರು.
“ಬದುಕಿದರೆ ಹೆಚ್ಚೆಂದರೆ ಕೇವಲ ಅರ್ಧ ಗಂಟೆ ಮಾತ್ರ” ಎಂದು ವೈದ್ಯರು ಹೇಳಿದ್ದರು. ನಮ್ಮ ಮಗು ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದೆ. ಆದಷ್ಟು ಬೇಗನೇ ಗುಣವಾಗುವ ವಿಶ್ವಾಸ ತಮಗಿದೆ ಎಂದು ತಿಳಿಸಿದ ಮಾಧವಿ ಅವರು, ತಮ್ಮ ಗ್ರಾಮವಾದ ಅಂಬಡಗಾದಲ್ಲಿ ಯೇಸುವಿಗೆ ನಡೆದುಕೊಳ್ಳುತ್ತಾರೆ. ನಂದಗಡಗೆ ಹೋಗಿ ಅಲ್ಲಿನ ಯೇಸು ಶಿಲುಬೆಗೆ ಹೋಗಿ ಪ್ರಾರ್ಥಿಸಿ ನಿಮ್ಮ ಉದ್ದೇಶ ಈಡೇರುತ್ತೆ ಎಂದು ಹೇಳಿದ್ದನ್ನು ಪಾಲಿಸಿದ್ದೇವೆ. ಮಗು ಬದುಕುವ ವಿಶ್ವಾಸವಿದೆ ಎಂದು ತಿಳಿಸಿದರು.
ಮಗುವನ್ನು ಆಸ್ಪತ್ರೆಗೆ ಸಾಗಿಸಿ ಉಚಿತ ಚಿಕಿತ್ಸೆ ದೊರೆಯಲು ನೆರವಾದ ಸಂಜಯ ಅವರು, ಮಗುವನ್ನು ಶಿಲುಬೆಯ ಕೆಳಗಿಟ್ಟು ಪ್ರಾರ್ಥಿಸಿದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದನ್ನು ಗಮನಿಸಿ ತಕ್ಷಣ ಬಂದು ಆಸ್ಪತ್ರೆಗೆ ಸೇರಿಸಿ, ನಂತರ ಬೆಳಗಾವಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಉಚಿತ ಚಿಕಿತ್ಸೆ ದೊರೆಯುವಂತೆ ಮಾಡಿರುವದಾಗಿ ತಿಳಿಸಿದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಎಸ್ ಕೆ ಪಾಟೀಲ ಅವರು, ಹುಬ್ಬಳ್ಳಿ ಧಾರವಾಡ ಆಸ್ಪತ್ರೆಗಳಲ್ಲಿ ನೀಡಿದ ಚಿಕಿತ್ಸೆ ಸರಿಯಾಗಿದೆ. ತೀವ್ರ ಜ್ವರವು ಮಗುವಿನ ಮೆದುಳನ್ನು
ಘಾಸಿ ಮಾಡಿದೆ, ಮೆದುಳಿನ ನರಗಳು ಡ್ಯಾಮೇಜ್ ಆಗಿವೆ. ಅದರ ಪರಿಣಾಮ ದೇಹದ ಎಡಭಾಗ ಪಾರ್ಶ್ವವಾಯುಗೆ ತುತ್ತಾಗಿತ್ತು. ಅದಕ್ಕೆ ದೇಹ ಜಡಗಟ್ಟಿದಂತಾಗಿದೆ. ಮಗು ಗುಣವಾಗುವದು ಖಂಡಿತ. ಆದರೆ ಒಂದು ವರುಷವಾದರೂ ಬೇಕಾಗಬಹುದು.
ಮಗುವಿಗೆ ಈಗ ಜ್ವರವಿಲ್ಲ. ಮತ್ತೇ ಜ್ವರ, ನ್ಯುಮೋನಿಯಾ ಬರದಂತೆ ನೋಡಿಕೊಳ್ಳುವದು ಮುಖ್ಯ. ಹಾಗಾಗಿ ಔಷಧಿ ಕೊಡಲಾಗುತ್ತಿದೆ. ಮುಖ್ಯವಾಗಿ ನರಕ್ಕೆ ಸಂಬಂಧಿಸಿದಂತೆ ಫಿಸಿಯೋಥೆರೆಪಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಮಗು ಸ್ಪಂದಿಸುತ್ತಿದೆ. ಟ್ಯೂಬ್ ಮೂಲಕ ದ್ರವ ಆಹಾರ ನೀಡಲಾಗುತ್ತಿದ್ದು ದೇಹದ ಶಕ್ತಿ ಹೆಚ್ಚಾಗುತ್ತಿದೆ. ಮೊದಲು ಅಲುಗಾಡದ ದೇಹವನ್ನು ಈಗ ಆತನೇ ಬೇಕಾದ ಕಡೆ ಹೊರಳಿಸುತ್ತಾನೆ. ಧ್ವನಿಗೆ ಸ್ಪಂದಿಸಿ ಕಣ್ಣುಗಳನ್ನು ಹೊರಳಿಸುತ್ತಾನೆ. ಎಲ್ಲಕ್ಕಿಂತ ಹೆಚ್ಚಾಗಿ ತಾಯಿಯ ಧ್ವನಿಗೆ, ಸ್ಪರ್ಶಕ್ಕೆ ಕೂಡಲೇ ಸ್ಪಂದಿಸುತ್ತಾನೆ. ಆತನ ಹೃದಯ ಮತ್ತು ಶ್ವಾಸಕೋಶಗಳು ಸರಿಯಾಗಿವೆ ಎಂದು ಡಾ. ಪಾಟೀಲ ತಿಳಿಸಿದರು.
ಚಿಕ್ಕ ಮಕ್ಕಳಿಗೆ ಜ್ವರ ಬಂದರೆ ಅಲಕ್ಷ್ಯ ಮಾಡದೇ ಕೂಡಲೇ ವೈದ್ಯರಲ್ಲಿ ತೋರಿಸಿ ಎಂದೂ ಅವರು ಮನವಿ ಮಾಡಿಕೊಂಡರು.
ಕೋಮಾ ಸ್ಥಿತಿಯಲ್ಲಿದ್ದ ಮಗುವನ್ನು ಧಾರವಾಡ ಆಸ್ಪತ್ರೆ ‘ಬ್ರೈನ್ ಡೆಡ್ ‘ ಎಂದು ಘೋಷಣೆ ಮಾಡಲಿದ್ದರು. ಆದರೆ ಅದು ಈಗ ಚೇತರಿಸಿಕೊಳ್ಳುತ್ತಿದೆ ಎಂದು ಮಗುವಿಗೆ ಚಿಕಿತ್ಸೆ ನೀಡುತ್ತಿರುವ ಇನ್ನೊಬ್ಬ ವೈದ್ಯ ಡಾ. ಗೋವಿಂದ ಅವರು ತಿಳಿಸಿದರು.