ತಿಂಗಳು ಕಳೆದರೂ ಇನ್ನೂ ಸಿಗದ ಚಿರತೆಯ ಸಂಪೂರ್ಣ ಕತೆ 

A B Dharwadkar
ತಿಂಗಳು ಕಳೆದರೂ ಇನ್ನೂ ಸಿಗದ ಚಿರತೆಯ ಸಂಪೂರ್ಣ ಕತೆ 
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಬೆಳಗಾವಿ : ಬೆಳಗಾವಿಯಲ್ಲಿ ಚಿರತೆ ಕಾಣಿಸಿಕೊಂಡು ಸೆಪ್ಟೆಂಬರ್ 5 ಕ್ಕೆ ಒಂದು ತಿಂಗಳಾಗಿದೆ. 300ಕ್ಕೂ ಹೆಚ್ಚು ಸಿಬ್ಬಂದಿ ಹೊಂದಿರುವ ಚಿರತೆ ಕಾರ್ಯಾಚರಣೆ ಪಡೆಯು ದಿನದ 24 ತಾಸೂ ಚಿರತೆಯ ಪ್ರಧಾನ ವಾಸಸ್ಥಾನ ಗಾಲ್ಫ ಕೋರ್ಸ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಕಾರ್ಯಾಚರಣೆ ಕೈಗೊಂಡಿದೆ.

ಒಮ್ಮೆ ಮಾತ್ರ ಕಾರ್ಯಾಚರಣೆ ತಂಡಕ್ಕೆ ಸಿಕ್ಕಿಬಿದ್ದು ಯಶಸ್ವಿಯಾಗಿ ತಪ್ಪಿಸಿಕೊಂಡು ಗಾಲ್ಫ್ ಕೋರ್ಸಗೆ ಸೇರಿಕೊಂಡಿದ್ದ ಈ ಚಾಣಾಕ್ಷ ಚಿರತೆ ಈ ವರೆಗೂ ತಂಡಕ್ಕೆ ಕಂಡು ಬಂದಿಲ್ಲ.

ಆಗಸ್ಟ 5 ರಂದು ಕಂಡು ಬಂದಿದ್ದ ಚಿರತೆಯ ಸೆರೆ ಕಾರ್ಯಾಚರಣೆಗೆ ಈ ವರೆಗೂ ಒಂದು ಕೋಟಿ ರೂಪಾಯಿ ವರೆಗೆ ವೆಚ್ಚ ಮಾಡಲಾಗಿದೆ. ಎರಡು ಆನೆಗಳು, ಮಾವುತರು, ಆರು ಮತ್ತು ಬರೆಸುವ ಗುಂಡುಗಳುಳ್ಳ ಡಾರ್ಟ ಗನ್ ಶಾರ್ಪ್ ಶೂಟರ್ಸ ಆದಿ ಬಳಸಲಾಗಿತ್ತು.

ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಈ ಕಾರ್ಯಾಚರಣೆ ಕೈಗೊಂಡಿದೆ. ಚಿರತೆಯ ಪ್ರಮುಖ ಅಡಗು ತಾಣ ಗಾಲ್ಫ ಕೋರ್ಸ್ ಅಲ್ಲದೇ ಅದರ ಸುತ್ತಲಿನ ಹೊರಗಿನ ಪ್ರದೇಶಗಳಲ್ಲಿಯೂ ಕಾರ್ಯಾಚರಣೆ ನಡೆಸಲಾಗಿತ್ತು.

ಅಗಸ್ಟ 5 ರಂದು ಚಿರತೆ ಮೊದಲು ಕಂಡು ಬಂದಿದ್ದು ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸವಾದ ವಿಶ್ವೇಶ್ವರಯ್ಯ ನಗರಕ್ಕೆ ಹತ್ತಿಕೊಂಡಿರುವ ಜಾಧವ ನಗರದಲ್ಲಿ. ಬೆಳಗಾವಿ ತಾಲ್ಲೂಕಿನ ಖಾನಗಾವಿ ಗ್ರಾಮದ ಕಟ್ಟಡ ಕಾರ್ಮಿಕನ ಸಿದ್ದರಾಯಿ ಮಿರಜಕರ ಎಂಬವರ ಮೇಲೆ ಹಿಂದಿನಿಂದ ದಾಳಿ ಮಾಡಿ ಓಡಿ ಹೋಗಿತ್ತು. ಅವರ ಬೆನ್ನಿಗೆ ಅಲ್ಪ ತರುಚಿದ ಗಾಯವಾಯಿತು. ಆದರೆ ತಮ್ಮ ಮಗನ ಮೇಲೆ ಚಿರತೆ ದಾಳಿ ಮಾಡಿರುವ ಸುದ್ದಿ ಕೇಳಿ ಅವರ ತಾಯಿ 65 ವರ್ಷದ ಶಾಂತಾ ಅದೇ ದಿನ ಹೃದಯಾಘಾತದಿಂದ ನಿಧನ ಹೊಂದಿದರು.

ಅದು ಚಿರತೆಯಾಗಿರಲು ಸಾಧ್ಯವಿಲ್ಲ ಅದು ದೊಡ್ಡ ಗಾತ್ರದ ಬೆಕ್ಕಾಗಿರಬಹುದೆಂದು ಹೇಳಿದ್ದ ಅರಣ್ಯ ಇಲಾಖೆ ಅಧಿಕಾರಿಳು, ಹತ್ತಿರದ ಮನೆಯೊಂದರ ಸಿಸಿ ಕ್ಯಾಮೆರಾದಲ್ಲಿ ಚಿರತೆ ದಾಟಿ ಹೋಗಿರುವದನ್ನು ಕಂಡು ಆ ಭಾಗದ ಜನರಿಗೆ ಮನೆಯಿಂದ ಹೊರಗೆ ಬರದಿರಲು ಮೈಕ್ ಮೂಲಕ ಸೂಚಿಸಿದ್ದರು.

ನಂತರ ಅರಣ್ಯ ಇಲಾಖೆ ಹತ್ತಿರದ ಗಾಲ್ಫ ಕೋರ್ಸನಲ್ಲಿ ಅದು ಹೋಗಿರುವ ಸಾಧ್ಯತೆ ಗ್ರಹಿಸಿ ವಿವಿಧಡೆ ಟ್ರ್ಯಾಪ್ ಕ್ಯಾಮರಾ, ಚಿರತೆ ಸೆರೆಗೆ ಬೋನು, ಮಾಂಸ, ಚಿರತೆ ಸೆಳೆಯಲು ನಾಯಿಗಳನ್ನಿರಿಸಿದರು. ಚಿರತೆ ಪತ್ತೆಗೆ ಡ್ರೋನ್ ಕ್ಯಾಮೆರಾ ಕೂಡ ಬಳಸಲಾಗಿತ್ತು.

ಗಾಲ್ಫ್ ಕೋರ್ಸ ಸಮೀಪದ 11 ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ನಂತರ ಬೆಳಗಾವಿ ಪಶ್ಚಿಮ ಭಾಗದ ಗ್ರಾಮೀಣ ಭಾಗದ 11 ಶಾಲೆಗಳಿಗೂ ರಜೆ ನೀಡಲಾಯಿತು.

ಸ್ವಾತಂತ್ರೋತ್ಸವದಂದು ಧ್ವಜಾರೋಹಣ ಮಾಡಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ಚಿರತೆ ಬೇಟೆಗೆ ಮುಧೋಳ ನಾಯಿ ತರಿಸುವುದಾಗಿ ಮತ್ತು ಅರಣ್ಯ ಇಲಾಖೆಯ ಪರಿಣಿತರನ್ನೂ ಈ ಕಾರ್ಯಕ್ಕೆ ನಿಯೋಜಿಸುವದಾಗಿಯೂ ತಿಳಿಸಿದ್ದರು.

ಅಗಸ್ಟ 9 ರಂದು ಗಾಲ್ಫ ಕೋರ್ಸ್ ನಲ್ಲಿ ಅಳವಡಿಸಲಾಗಿದ್ದ ಟ್ರ್ಯಾಪ್ ಕ್ಯಾಮೆರಾದಲ್ಲಿ ಕಂಡು ಬಂದಿದ್ದ ಚಿರತೆ ಆಗಸ್ಟ್ 18 ರಂದು ಕ್ಲಬ್ ರಸ್ತೆಯ ಮಹಾತ್ಮಾ ಗಾಂಧಿ ಪುತ್ಥಳಿಯ ಬಳಿ ಕಂಡು ಬಂದಿತ್ತು. ಆ ದಿನ ರಾತ್ರಿ ಅಜಯ್ ಮಾಸ್ತಿ ಎಂಬವರು ತಮ್ಮ ಕಾರಿನಲ್ಲಿ ಬೆಳಗಾವಿಯಿಂದ ಹಿಂಡಲಗಾ ತೆರಳುತ್ತಿದ್ದಾಗ ಗೊಲ್ಫ್ ಕೋರ್ಸ್ ನ ಗೋಡೆ ಜಿಗಿದು ಕ್ಲಬ್ ರಸ್ತೆಗೆ ಬಂದು ರಸ್ತೆ ದಾಟಿ ಪೈಪ್ ಲೈನ್ ವಸತಿ ಗೃಹ ಪ್ರವೇಶಿಸಲು ಅರ್ಧ ರಸ್ತೆಗೆ ಬಂದಿದ್ದ ಚಿರತೆ ಕಾರಿನ ಶಬ್ದ ಕೇಳಿ ಪುನಃ ಗೋಡೆ ಜಿಗಿದು ಗಾಲ್ಫ್ ಕೋರ್ಸ್ ಸೇರಿಕೊಂಡಿತ್ತು.

ಮಾಸ್ತಿಯವರು ಕಾರಿನಲ್ಲಿದ್ದೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ವಿಡಿಯೋ ವೈರಲ್ ಆಗಿತ್ತು. ಆ ಪ್ರದೇಶದಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆಯ ತಲಾ 150 ಸಿಬ್ಬಂದಿ ಕಾರ್ಯಾಚರಣೆಗಿಳಿದರು.

ನಾಲ್ಕು ದಿನಗಳ ನಂತರ ಅಂದರೆ ಆಗಸ್ಟ 22 ರಂದು ಚಿರತೆ ಮತ್ತೊಮ್ಮೆ ಕ್ಲಬ್ ರಸ್ತೆಯ ವನಿತಾ ವಿದ್ಯಾಲಯದ ಬಳಿ ಕಂಡು ಬಂದಿತ್ತು. ಅಂದು ಮುಂಜಾನೆ 6.30 ರ ಹೊತ್ತಿಗೆ ಬೆಳಗಾವಿಯ ಗಡಿಯಲ್ಲಿರುವ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಚಂದಗಡ ತಾಲ್ಲೂಕಿನ ಶಿನ್ನೊಳ್ಳಿಯ ಕಾರ್ಖಾನೆಯ ಬಸ್ಸಿನ ಚಾಲಕ ನೌಕರರನ್ನು ಕರೆದುಕೊಂಡು ಹೋಗಲು ಬೆಳಗಾವಿಗೆ ಬರುತ್ತಿದ್ದಾಗ ರಸ್ತೆಯ ಬದಿಯಿಂದ ನಡೆಯುತ್ತ ಬೆಳಗಾವಿ ನಗರದತ್ತ ಹೊರಟ್ಟಿದ್ದ ಚಿರತೆ ಕಂಡು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ ತಕ್ಷಣ ಸಾಮಾಜಿಕ ತಾಣಗಳಲ್ಲಿ ಪ್ರಸಾರ ಮಾಡಿದರು.

ತನ್ನ ಹಿಂದಿನಿಂದ ಬರುತ್ತಿದ್ದ ಅವರ ಬಸ್ಸಿನ ಶಬ್ದ ಕೇಳಿ ಓಡಲು ಪ್ರಾರಂಭಿಸಿದ ಚಿರತೆ ರಸ್ತೆ ದಾಟಿ ವನಿತಾ ವಿದ್ಯಾಲಯ ಶಾಲೆಯ ಬದಿಯ ಅರಣ್ಯ ಇಲಾಖೆಯ ಶ್ರೀಗಂಧ ವನ ಸೇರಿಕೊಂಡಿತ್ತು.

ವಿಡಿಯೋ ವೈರಲ್ ಆದ ತಕ್ಷಣ ಅರಣ್ಯ ಮತ್ತು ಪೊಲೀಸ್ ಇಲಾಖೆಯ ಸುಮಾರು 300 ಜನ ಚಿರತೆ ಆ ಪ್ರದೇಶದಿಂದ ಹೊರಹೋಗದಂತೆ ಬಲೆ ಹಾಕಿ ಅದು ಅಡಗಿಕೊಂಡಿದ್ದ ಸ್ಥಳದಿಂದ ಹೊರಗೆ ಬರಲು ಏರ್ ಗನ್ ದಿಂದ ಗಾಳಿಯಲ್ಲಿ ಗುಂಡು ಹಾರಿಸಿ ವಿವಿಧ ಬಗೆಯ ಶಬ್ದ ಮಾಡುತ್ತಿದರು. ಕೆಲವೇ ಕ್ಷಣಗಳಲ್ಲಿ ಶ್ರೀಗಂಧ ವನದಿಂದ ಹೊರಬಂದ ಚಿರತೆ ಕ್ಷಣಾರ್ಧದಲ್ಲಿ ರಸ್ತೆ ದಾಟಿ ಪುನಃ ಗಾಲ್ಫ ಮೈದಾನ ಸೇರಿಕೊಂಡಿತು.

ಭಾರತೀಯ ಸೇನೆಗೆ ಸೇರಿರುವ ಸುಮಾರು 250 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಗಾಲ್ಫ್ ಕೋರ್ಸನ ಕ್ಲಬ್ ರಸ್ತೆ ಅಂಚಿಗೆ ಸಾಮಾನ್ಯಕ್ಕಿಂತ ಸ್ವಲ್ಪ ದಪ್ಪು ಗಾತ್ರದ ತಂತಿಯ ಬಲೆಗೆ ಅಳವಡಿಸಲಾಗಿದೆ.

ಓಟದ ವೇಗಕ್ಕೆ ಹೆಸರುವಾಸಿಯಾದ ಚಿರತೆ ಐವತ್ತು ಅಡಿ ರಸ್ತೆ ಕೆಲವೇ ಕ್ಷಣಗಳಲ್ಲಿ ದಾಟಿ ತಂತಿ ಬೇಲಿಗೆ ಹಾಯ್ದ ರಭಸಕ್ಕೆ ಅದು ಕಿತ್ತು ಹೋಗಿ ಚಿರತೆ ಪಲಾಯನ ಮಾಡಿತು.

ಪೊಲೀಸರು ಹೆಲ್ಮೆಟ್ ಧರಿಸಿ ಲಾಠಿ ಹಿಡಿದು ಬಂದಿದ್ದರೆ ಅರಣ್ಯ ಇಲಾಖೆಯ ಕೆಲವರು ಏರ್ ಗನ್, ಚಿರತೆಗೆ ಮತ್ತು ಭರಿಸುವ ಗುಂಡುಗಳ ಉಳ್ಳ ಬಂದೂಕುಗಳನ್ನು ತೆಗೆದುಕೊಂಡು ಸಿದ್ದವಾಗಿದ್ದರು. ವಿಪರ್ಯಾಸವೆಂದರೆ ಸುಮಾರು ಹತ್ತು ಅಡಿಗಳ ದೂರಿನಿಂದ ಓಡಿದ ಚಿರತೆಗೆ ಹಾರಿಸಿದ ಒಂದೆರಡು ಗುಂಡುಗಳು ಗುರಿ ತಪ್ಪಿದವು. ಕೆಲವು ಟ್ರಿಗರ್ ಒತ್ತಿದರೂ ಗುಂಡು ಹಾರಲಿಲ್ಲ.

ಚಿರತೆ ಸೆರೆ ವಿಫಲವಾಗಿದ್ದಕ್ಕೆ ಮತ್ತು ಅದನ್ನು ಹಿಡಿಯಲು ಮಾಡಿಕೊಂಡಿದ್ದ ಸಿದ್ಧತೆ ಸುದ್ಧಿ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾದರೆ, ಸಾಮಾಜಿಕ ತಾಣಗಳಲ್ಲಿ ಅಪಹಾಸ್ಯಕ್ಕೀಡಾಯಿತು.

ಹತ್ತಿರದಿಂದ ದಾಟಿ ಹೋದ ಚಿರತೆಗೆ ಹೊಡೆದ ಮತ್ತು ಬರೆಸುವ ಗುಂಡುಗಳು ಗುರಿ ತಪ್ಪಿದ್ದು, ಕೆಲವು ಬಂದೂಕುಗಳಿಂದ ಗುಂಡು ಹಾರದೇ ಇದ್ದದ್ದು, ಚಿರತೆ ಹಿಡಿಯಲು ಬಂದಿದ್ದ ಪೋಲೀಸರು ಕೈಯಲ್ಲಿ ದೊಣ್ಣೆ, ಲಾಠಿ ಹಿಡಿದದ್ದು, ಎಲ್ಲಕ್ಕಿಂತ ಹೆಚ್ಚಾಗಿ ಸೇವಾ ನಿವೃತ್ತಿಯಂಚಿಗೆ ಬಂದಿದ್ದ ಸಿಬ್ಬಂದಿ ಫುಟ್ ಬಾಲ್, ಹಾಕಿ ಗೋಲ್ ಪೋಸ್ಟ್ ಗೆ ಹಾಕುವಂತಹ ಜಾಳಿಗೆಯ ಎರಡೂ ಬದಿಯ ಅಂಚನ್ನು ಹಿಡಿದು ಡಬಲ್ ರಸ್ತೆಯಾದ ಕ್ಲಬ್ ರಸ್ತೆಯ ಒಂದು ಭಾಗದ ರಸ್ತೆ ಬ್ಲಾಕ್ ಮಾಡಿದ್ದ ಚಿತ್ರ, ವಿಡಿಯೋ ಸಮೇತ ಟ್ರೋಲ್ ಆಗಿ ಕಾರ್ಯಾಚರಣೆಯನ್ನು ವ್ಯಂಗ್ಯವಾಗಿಸಿತ್ತು.

ಚಿರತೆ ಗಾಲ್ಫ್ ಕೋರ್ಸಗೆ ಮರಳಿದ ತಕ್ಷಣ ಕ್ಲಬ್ ರೋಡ್ ನಿಂದ ಅಲ್ಲಿಗೆ ಶಿಫ್ಟ್ ಆದ ‘ಆಪರೇಷನ್ ಚಿರತೆ’ ತಂಡ ಅದನ್ನು ಸುತ್ತುವರೆದಿತ್ತು.

ಇನ್ನು ಚಿರತೆ ಹಿಡಿಯಲು ಶಿವಮೊಗ್ಗದ ಸಕ್ರೆಬೈಲಿನಿಂದ ಎರಡು ಗಂಡಾನೆ ಮತ್ತು ಮಾವುತರು, ಆರು ಚಿರತೆಯ ಮೇಲೆ ಲೇಸರ್ ಗುರಿಯಿಡುವ ಆರು ಡಾರ್ಟ್ ಗನ್ ಕಾರ್ಯಾಚರಣೆಗೆ ಬಳಸಲು ತರಿಸಲಾಯಿತು.

ಮೂರು ದಿನಗಳ ನಂತರ ಅಂದರೆ ಆಗಸ್ಟ್ 25 ರಂದು ಗಾಲ್ಫ್ ಕೋರ್ಸ್ ನಲ್ಲಿ ಅಳವಡಿಸಲಾಗಿರುವ ಟ್ರ್ಯಾಪ್ ಕ್ಯಾಮೆರಾವೊಂದರಲ್ಲಿ ಚಿರತೆ ಸೆರೆಯಾಗಿತ್ತು. ಇದರಿಂದ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳಿಸಿದ ಅರಣ್ಯ ಇಲಾಖೆ ಗಾಲ್ಫ್ ಕೋರ್ಸನಲ್ಲಿ ದಟ್ಟವಾಗಿ ಬೆಳೆದಿದ್ದ ಕುರುಚಲು ಗಿಡ ಬಳ್ಳಿಗಳನ್ನು ಸವರಿ ಹಾಕಲು ಐದು ಜೆಸಿಬಿ ಯಂತ್ರಗಳನ್ನು, ಐದು ಮುಧೋಳ ಬೇಟೆ ನಾಯಿಗಳನ್ನು, ಶಾರ್ಪ್ ಶೂಟರ್ಸಗಳನ್ನು ಬಳಸಿಕೊಂಡಿತು.

ಅದೇ ದಿನ ಸಂಜೆ ಚಿರತೆ ಹಿಂಡಲಗಾ ಗಣೇಶ ಮಂದಿರದ ಬದಿಯ ಕೇಂದ್ರ ಜಿಎಸ್ ಟಿಯ ಲೆಕ್ಕ ಪರಿಶೋಧನೆ ವಿಭಾಗದ ಗೃಹ ಸಮುಚ್ಚಯದ ಬಳಿ ಕಂಡು ಬಂದು ಜನರ ವಾಹನಗಳ ಸಂಚಾರದಿಂದ ಪುನಃ ಗಾಲ್ಫ್ ಕೋರ್ಸ್ ಸೇರಿಕೊಂಡಿತು. ವಸತಿ ಪ್ರದೇಶದಲ್ಲೇ ಚಿರತೆ ಕಂಡು ಬಂದದ್ದರಿಂದ ಮಿಲಿಟರಿ ಅಧೀನದಲ್ಲಿರುವ ಗಣೇಶ ಮಂದಿರ ಭಕ್ತರಿಗೆ ಬಂದ್ ಮಾಡಲಾಗಿತ್ತು.

ಸಿಗದೇ ತಪ್ಪಿಸಿಕೊಂಡು ತಿರುಗಾಡುತ್ತಿರುವ ಚಿರತೆ ಗಂಡಾಗಿರಬಹುದೆಂದು ಗ್ರಹಿಸಿದ ಅರಣ್ಯ ಇಲಾಖೆ ಅದನ್ನು ಹಿಡಿಯಲು ಹನಿ ಟ್ರ್ಯಾಪ್ ತಂತ್ರ ಬಳಸಲು ಯೋಚಿಸಿ, ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯ ವನ್ಯಜೀವಿ ಸಂಗ್ರಹಾಲಯದಲ್ಲಿರುವ ಹೆಣ್ಣು ಚಿರತೆ ಮೂತ್ರ ವಿಸರ್ಜನೆ ಮಾಡಿರುವ ಸ್ಥಳದ ಮಣ್ಣನ್ನು ತೆಗೆದುಕೊಂಡು ಗಾಲ್ಫ ಕೋರ್ಸ್ ನಲ್ಲಿ, ಅಳವಡಿಸಿರುವ ಬೋಣಿನೊಳಗೆ ಇಡಲಾಯಿತು.

ವಿರುದ್ಧ ಜಾತಿಯ ಕುರಿತು ಆಕರ್ಷಣೆಯಿರುವುದರಿಂದ ಈ ತರದ ವನ್ಯಜೀವಿಗಳನ್ನು ಸೆರೆ ಹಿಡಿಯಲು ಈ ‘ಹನಿ ಟ್ರ್ಯಾಪ್ ತಂತ್ರ ಬಳಸಲಾಗುತ್ತಿದೆ. ಆದರೆ, ಬೆಳಗಾವಿ ಚಿರತೆಯ ಈ ವಿಷಯ ತಂತ್ರ ಕೂಡ ಫಲ ನೀಡಿಲ್ಲ.

ಈಗ ಅಂತಿಮವಾಗಿ ಚಿರತೆ ಈ ಪ್ರದೇಶ ಬಿಟ್ಟು ತೆರಳಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಅಂತಿಮ ತೀರ್ಮಾನಕ್ಕೆ ಬಂದಿದ್ದು, ಸೋಮವಾರದಿಂದ ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.