ಹೊಸದಿಲ್ಲಿ: ಬಾಬರಿ ಮಸೀದಿ ಕುರಿತ 2019 ರಲ್ಲಿ ಹಿಂದು ಅರ್ಜಿದಾರರ ಪರ ಸುಪ್ರೀಮ ಕೋರ್ಟ ನೀಡಿದ ತೀರ್ಪು ಬಲಪಂಥೀಯವಾದಿ ಶಕ್ತಿಗಳಿಗೆ ದೇಶದ ಇತರೆಡೆಗಳಲ್ಲಿರುವ ಮಸೀದಿಗಳ ಮೇಲೆ ಹಕ್ಕು ಸ್ಥಾಪಿಸುವ ಬೇಡಿಕೆ ಮುಂದಿಡಲು ಕಾರಣವಾಗಿದೆ. ಇದು ಪ್ರಜಾಪ್ರಭುತ್ವ ದೇಶವಾಗಿರುವ ಭಾರತಕ್ಕೆ ದೊಡ್ಡ ಅಪಾಯ ಎಂದು ಸುಪ್ರೀಮ ಕೋರ್ಟ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲ ಗೌಡ ಹೇಳಿದ್ದಾರೆ.
ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಭಾರತದ ಸಂವಿಧಾನ ಖಾತರಿಪಡಿಸುತ್ತದೆ. ಆದರೆ ತೀವ್ರಗಾಮಿ ಶಕ್ತಿಗಳ ಕಾರಣದಿಂದ ಮತ್ತು ಸರಕಾರವು ಫ್ಯಾಸಿಸ್ಟ ಹಿಂದೂ ಆಗುತ್ತಿರುವುದರಿಂದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದಂಥ ಮೌಲ್ಯಗಳು ಅಪಾಯದಲ್ಲಿವೆ ಎಂದು ಅವರು ಹೇಳಿದ್ದಾರೆ.
ಅಖಿಲ ಭಾರತ ವಕೀಲರ ಯೂನಿಯನ್, ದಿಲ್ಲಿ ಪತ್ರಕರ್ತರ ಯುನಿಯನ್ ಮತ್ತು ಡೆಮಾಕ್ರೆಟಿಕ್ ಟೀಚರ್ಸ್ ಫ್ರಂಟ್ ಆಯೋಜಿಸಿದ್ದ “ಸಂವಿಧಾನ ಉಳಿಸಿ ಪ್ರಜಾಪ್ರಭುತ್ವ ಉಳಿಸಿ” ಎಂಬ ವಿಷಯದ ಮೇಲೆ ನಡೆದ ರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ನ್ಯಾಯಮೂರ್ತಿ ಗೌಡ ಅವರು ಮಾತನಾಡಿ, ತೀವ್ರಗಾಮಿ ಶಕ್ತಿಗಳು ಸಂವಿಧಾನದ ಎಲ್ಲಾ ಸ್ಥಂಭಗಳನ್ನು ಆಕ್ರಮಿಸಿಕೊಂಡಿವೆ. ಉದಾಹರಣೆಯಾಗಿ ಪೌರತ್ವ ತಿದ್ದುಪಡಿ ಕಾಯಿದೆಯು ಸಮಾನ ಪೌರತ್ವವನ್ನು ನಿರಾಕರಿಸುತ್ತದೆ ಮತ್ತು ಪ್ರಜಾಪ್ರಭುತ್ವದ ಆಧಾರಸ್ಥಂಭವಾಗಿರುವ ಜಾತ್ಯತೀತತೆಗೆ ವಿರುದ್ಧವಾಗಿದೆ ಎಂದು ಹೇಳಿದರು.
ಕಾರ್ಯಾಂಗದ ಒತ್ತಡಕ್ಕೆ ಬಗ್ಗಿರುವ ಇನ್ನೊಂದು ಸಾಂವಿಧಾನಿಕ ಸಂಸ್ಥೆ ಚುನಾವಣಾ ಆಯೋಗವಾಗಿದೆ. 2017ರ ಗುಜರಾತ್ ಚುನಾವಣೆ ಘೋಷಣೆ ವೇಳೆ ಹಾಗೂ ಆಪ್ ಶಾಸಕರ ಏಕಪಕ್ಷೀಯ ಅನರ್ಹತೆಯ ವಿಚಾರದಲ್ಲಿ ಹೀಗಾಗಿದೆ. ಸುಪ್ರೀಮ ಕೋರ್ಟ ಈ ಕುರಿತು ತರಾಟೆಗೆ ತೆಗೆದುಕೊಂಡಿತ್ತು ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ 2016 ರಲ್ಲಿ ಜಾರಿಗೆ ತಂದ ಅಮಾನ್ಯೀಕರಣ ಕುರಿತಂತೆ ಸುಪ್ರೀಮ ಕೋರ್ಟಿನ ಇತ್ತೀಚಿನ ತೀರ್ಪನ್ನು ಉಲ್ಲೇಖಿಸಿದ ಅವರು, “ಸಂವಿಧಾನಿಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಧೈರ್ಯವನ್ನು” ಏಕೈಕ ನ್ಯಾಯಾಧೀಶೆ ಮಾತ್ರ ತಮ್ಮ ಭಿನ್ನ ತೀರ್ಪಿನಿಂದ ಎತ್ತಿ ಹಿಡಿದರು ಹಾಗೂ ಅಮಾನ್ಯೀಕರಣ ನೀತಿ ಜಾರಿಗೊಳಿಸುವಲ್ಲಿ ಅಗತ್ಯ ಪ್ರಕ್ರಿಯೆ ಪಾಲಿಸಲಾಗಿಲ್ಲ ಎಂದಿದ್ದರು. ಇಬ್ಬರು ಆರ್‌ಬಿಐ ಗವರ್ನರ್‌ಗಳಾದ ರಘುರಾಮ ರಾಜನ್ ಮತ್ತು ಉರ್ಜಿತ ಪಟೇಲ ಅವರನ್ನು ರಾಜೀನಾಮೆ ನೀಡಲು ಬಲವಂತಪಡಿಸಲಾಗಿತ್ತು ಎಂದು ಅವರು ಹೇಳಿದರು.
ಎನ್‌ಜಿಒಗಳ ವಿದೇಶಿ ದೇಣಿಗೆ ಮೇಲೆ ಸರ್ಕಾರ ನಿಯಂತ್ರಣಗಳನ್ನು ಹೆಚ್ಚಿಸಿದೆ. ಸುಮಾರು 20,000 ಎನ್‌ಜಿಒಗಳು ಪರವಾನಗಿ ಕಳೆದುಕೊಂಡಿವೆ. ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಇಲ್ಲಿನ ಚಟುವಟಿಕೆಯನ್ನು ನಿಲ್ಲಿಸುವಂತಾಯಿತು. ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯನ್ನು ಹೆಚ್ಚಾಗಿ ಸರ್ಕಾರದ ಜೊತೆ ಅಸಮ್ಮತಿ ಹೊಂದಿದವರ ಸದ್ದಡಗಿಸಲು ಬಳಸಲಾಗುತ್ತಿದೆ ಎಂದು ಹೇಳಿರುವ ಮೂವರು ವಿಶ್ವ ಸಂಸ್ಥೆಯ ವಿಶೇಷ ಅಧಿಕಾರಿಗಳ ಅದರ ವಾಪಸ್ ಪಡೆಯುವಿಕೆಗೂ ಆಗ್ರಹಿಸಿದ್ದಾರೆ ಎಂದು ನ್ಯಾಯಮೂರ್ತಿ ಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ದಿಲ್ಲಿ ಹೈಕೋರ್ಟ ಮಾಜಿ ನ್ಯಾಯಾಧೀಶೆ ರೇಖಾ ಶರ್ಮ, ಹಿರಿಯ ವಕೀಲರಾದ ಇಂದಿರಾ ಜೈಸಿಂಗ್, ಬಿಕಾಶ ರಂಜನ್ ಭಟ್ಟಾಚಾರ್ಯ, ರಾಜು ರಾಮಚಂದ್ರನ್, ಪಿ ವಿ ಸುರೇಂದ್ರನಾಥ ಆದು ಉಪಸ್ಥಿತರಿದ್ದರು.