(ಸಮದರ್ಶಿ ವಿಶೇಷ ವರದಿ)
ಬೆಳಗಾವಿ : ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಗಳ ಕನ್ನಡಿಗರು ತಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಸರಕಾರಕ್ಕೆ ಮನವಿ ಮಾಡಿದ ಸಂದರ್ಭದಲ್ಲೇ ದೂರದ ಮರಾಠಾವಾಡಾ ಪ್ರಾಂತದ ಲಾತೂರ ಜಿಲ್ಲೆಯ ಕೆಲ ಅಪ್ಪಟ ಮರಾಠಿ ಭಾಷಿಕ ಗ್ರಾಮಗಳೂ ಕರ್ನಾಟಕಕ್ಕೆ ಸೇರಲು ಆಸಕ್ತಿ ಹೊಂದಿವೆ.
ಲಾತೂರ ಜಿಲ್ಲೆಯ ದೇವೋಣಿ ತಾಲೂಕಿಗೆ ಸೇರಿರುವ ಸುಮಾರು ಹತ್ತು ಗ್ರಾಮಗಳ ಗ್ರಾಮಸ್ಥರು ಲಾತೂರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿ ತಮ್ಮ ಗ್ರಾಮಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ಗ್ರಾಮದಲ್ಲಿ ರಸ್ತೆ, ನೀರು, ಬೀದಿದೀಪ, ಸಾರ್ವಜನಿಕ ಕಕ್ಕಸ, ಬಸ್ ಸೌಲಭ್ಯಗಳಿಲ್ಲ, ಆದರೆ ನೆರೆಯ ಕರ್ನಾಟಕದ ಗ್ರಾಮಗಳಲ್ಲಿ ಈ ಎಲ್ಲ ಸೌಲಭ್ಯಗಳಿವೆ, ನಮಗೂ ನ್ಯಾಯಬದ್ಧವಾಗಿ ದೊರೆಯಬೇಕಾದ ಸೌಲಭ್ಯ ನೀಡಿ, ಇಲ್ಲವೇ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಮನವಿ ಅರ್ಪಿಸಿವೆ.
ಅಲ್ಲದೇ ಹತ್ತೂ ಗ್ರಾಮಗಳಲ್ಲಿ ದೊಡ್ಡದಾದ ಬೊಂಬಳ್ಳಿ ಗ್ರಾಮವನ್ನು ಗ್ರಾಮ ಪಂಚಾಯತ್ ಮಟ್ಟಕ್ಕೇರಿಸಬೇಕು, ಇಲ್ಲದಿದ್ದರೆ ಇದೇ ದಿನಾಂಕ 18ರಂದು ನಿಗದಿಯಾಗಿರುವ ಗ್ರಾಮ ಪಂಚಾಯತ್ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳನ್ನೂ ಬಹಿಷ್ಕರಿಸುವದಾಗಿ ತಿಳಿಸಿದ್ದರು.
ಮಹಾರಾಷ್ಟ್ರದ ಗಡಿ ಗ್ರಾಮಗಳಿಗೆ ಮೊದಲು ಬನ್ನಿ
ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಭೇಟಿ ಕೊಡುವ ಬದಲು ಮಹಾರಾಷ್ಟ್ರದ ಗಡಿಯಲ್ಲಿರುವ ಗ್ರಾಮಕ್ಕೆ ಭೇಟಿ ಕೊಟ್ಟು ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಗ್ರಾಮಾಭಿವೃದ್ಧಿ ಸಾಧ್ಯವಾಗದಿದ್ದರೆ ಗ್ರಾಮವನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ಲಾತೂರ್ ಜಿಲ್ಲೆಯ ದೇವಣಿ ತಾಲ್ಲೂಕಿನ ಬೋಂಬಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕರ್ನಾಟಕದ ಗಡಿಯಿಂದ ‘ಬೋಂಬಳಿ’ ಕೇವಲ 500 ಮೀಟರ್ ಅಂತರದಲ್ಲಿದೆ. ಭಾಲ್ಕಿ ವಿಧಾನಸಭಾ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ನಮ್ಮ ಗ್ರಾಮಕ್ಕೆ ಒಂದು ಶಾಲೆಯನ್ನೂ ಮಂಜೂರು ಮಾಡಲು ಸಿದ್ಧವಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮಹಾರಾಷ್ಟ್ರ ಸರ್ಕಾರಕ್ಕೆ ನಮ್ಮ ಗ್ರಾಮಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗದಿದ್ದರೆ ಗ್ರಾಮ ಪಂಚಾಯಿತಿ ಚುನಾವಣೆಗೆ ಬಹಿಷ್ಕಾರ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದೇವೆ. ಆದರೂ, ಚುನಾವಣೆ ಘೋಷಣೆ ಮಾಡಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಬೋಂಬಳಿಯನ್ನು ಪ್ರತ್ಯೇಕ ಗ್ರಾಮ ಪಂಚಾಯಿತಿ ಮಾಡಬೇಕು ಎಂದು ಗ್ರಾಮಸ್ಥರು ನವೆಂಬರ 23ರಂದು ಲಾತೂರ್ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಅಲ್ಲಿನ ತಹಶೀಲ್ದಾರರು ಗ್ರಾಮಕ್ಕೆ ಭೇಟಿ ನೀಡಿ ಅವರ ಸಮಸ್ಯೆ ಆಲಿಸಿದ್ದರು. ಪ್ರತ್ಯೇಕ ಪಂಚಾಯಿತಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದರಿಂದ ನೊಂದ ಗ್ರಾಮಸ್ಥರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಮುಂದಿನ ಎಲ್ಲ ಚುನಾವಣೆಗಳಿಗೂ ಬಹಿಷ್ಕಾರ ಹಾಕುತ್ತೇವೆ. ಸಾಧ್ಯವಾದರೆ ತಾಲ್ಲೂಕು ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದರೂ ಗ್ರಾಮಾಭಿವೃದ್ಧಿಯಾಗಿಲ್ಲ. ಹೀಗಾಗಿ ಅಭಿವೃದ್ಧಿಯ ದೃಷ್ಟಿಯಿಂದ ಕರ್ನಾಟಕ ರಾಜ್ಯಕ್ಕೆ ಹೋಗಲು ಸಿದ್ಧರಿದ್ದೇವೆ ಎಂದು ಗ್ರಾಮದ 74 ಜನರು ಜಿಲ್ಲಾಧಿಕಾರಿಗೆ ಬರೆದ ಪತ್ರಕ್ಕೆ ಸಹಿ ಹಾಕಿದ್ದಾರೆ.
ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕು. ಬಸ್ ಪ್ರಯಾಣ ದರ ಕಡಿಮೆ ಮಾಡಬೇಕು. ಕರ್ನಾಟಕದಲ್ಲಿ ಕೊಡುವಂತೆ ರೈತರಿಗೆ ಆರ್ಥಿಕ ನೆರವು ನೀಡಬೇಕು. ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಗ್ರಾಮದ ಜ್ಞಾನೋಬಾ ಕಾರಬಾರಿ, ದೇವಿದಾಸ ಧೋಂಡಿಬಾ, ಸೋಮಶೇಖರ ದಯಾನಂದ, ದೇವಿದಾಸ ಗೋವಿಂದರಾವ್, ಅಭಯ ಸೂರ್ಯವಂಶಿ ಆಗ್ರಹಿಸಿದ್ದಾರೆ.