ಸವದತ್ತಿ, ೧೯- ತಾಲ್ಲೂಕಿನ ಉಗರಗೋಳ ಗ್ರಾಮದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ನೇರವಾಗಿ ಪಕ್ಕದಲ್ಲೇ ಇರುವ ಆನಂದ ಬ್ರ್ಯಾಂಡಿ ಶಾಪ್ ಗೆ ತೆರಳಿ ಲೈಸೆನ್ಸ್, ಲಭ್ಯವಿರುವ ಮದ್ಯದ ಸಂಗ್ರಹ ಹಾಗೂ ಗುಣಮಟ್ಟದ ಬಗ್ಗೆ ಪರಿಶೀಲನೆ ಕೈಗೊಂಡರು.
ಜಿಲ್ಲಾಧಿಕಾರಿಗಳು ಬಸವೇಶ್ವರ ವೃತ್ತದಲ್ಲಿರುವ ಆನಂದ ಬ್ರ್ಯಾಂಡಿ ಅಂಗಡಿ ಮತ್ತು ಲಕ್ಷ್ಮೀ ಬಾರ್ ಮತ್ತು ರೆಸ್ಟೋರೆಂಟ್ ಗೆ ಸ್ವತಃ ತೆರಳಿ ಪರಿಶೀಲನೆ ಕೈಗೊಂಡರು.
ಖುದ್ದಾಗಿ ಕೆಲವು ಮದ್ಯದ ಬಾಟಲ್ ಗಳನ್ನು ತೆಗೆದುಕೊಂಡು ಅವುಗಳ ಗುಣಮಟ್ಟ ಪರಿಶೀಲಿಸುವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಜತೆ ಆಗಮಿಸಿದ ನೂರಾರು ಮಹಿಳೆಯರು ಮತ್ತು ಗ್ರಾಮಸ್ಥರು ಗ್ರಾಮದಲ್ಲಿರುವ ಮದ್ಯ ಮಾರಾಟ ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಸದ್ಯಕ್ಕೆ ಮದ್ಯದ ಅಂಗಡಿಗಳನ್ನು ಸ್ಥಗಿತಗೊಳಿಸಲಾಗಿದ್ದು, ನಿಯಮಗಳ ಉಲ್ಲಂಘನೆಯ ಕುರಿತು ಕೂಲಂಕುಶವಾಗಿ ಪರಿಶೀಲನೆ ಬಳಿಕ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಈ ವೇಳೆ ಜಿಲ್ಲಾ ಪಂಚಾಯಿತಿ ಸಿಇಓ ದರ್ಶನ್, ಉಪ ವಿಭಾಗಾಧಿಕಾರಿ ಶಶಿಧರ ಬಗಲಿ ಉಪಸ್ಥಿತರಿದ್ದರು