ಬೆಳಗಾವಿ :ಬೆಳಗಾವಿ ತಾಲೂಕಿನ ಹಿರೇಬಾಗೆವಾಡಿ ಗ್ರಾಮದ 80 ವರುಷದ ಮಹಾದೇವಿ ಅಗಸಿಮನಿ ವಯೋಸಹಜ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಹೆಸರಿನಲ್ಲಿದ್ದ ಹೊಲವೊಂದನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳಲು ಅವರ ಇಬ್ಬರ ಮಕ್ಕಳು ಆಸ್ಪತ್ರೆಯಿಂದ ಅವರು ಮಲಗಿದ್ದ ಹಾಸಿಗೆ ಸಮೇತ ಅವರನ್ನು ಅಸ್ತಿಗಳ ಉಪ ನೋಂದಣಿ ಕಚೇರಿಗೆ ಕರೆದುಕೊಂಡು ದಾಖಲೆಗಳಿಗೆ ಹೆಬ್ಬಟ್ಟು ಗುರುತು ಮತ್ತು ಸಹಿ ಹಾಕಿಸಿಕೊಂಡ ಘಟನೆ ಶುಕ್ರವಾರ ಸಂಜೆ ಬೆಳಗಾವಿ ದಕ್ಷಿಣದ ಉಪ ನೋಂದಣಿ ಕಚೇರಿಯಲ್ಲಿ ನಡೆದಿದೆ.
ಹಿರೇಬಾಗೆವಾಡಿ ಗ್ರಾಮದ ಮಹಾದೇವಿ ತಮ್ಮ ಹೆಸರಿನಲ್ಲಿ ಗ್ರಾಮದ ಹೊರವಲಯದಲ್ಲಿ 2 ಎಕರೆ 35 ಗುಂಟೆ ಜಮೀನಿದ್ದು, ಆ ಜಮೀನನ್ನು ಅವರ ಮಕ್ಕಳಾದ ವಿದ್ಯಾ ಹೊಸಮನಿ (54) ಹಾಗೂ ರವೀಂದ್ರ ಗುರಪ್ಪ ಹೊಸಮನಿ (51) ಎಂಬುವರಿಗೆ ಹಕ್ಕುಬಿಟ್ಟು ಅವರು ಕೊಡಲು ಅರ್ಜಿ ಸಲ್ಲಿಸಿದ್ದರು.
ಆಸ್ತಿ ಹಂಚಿಕೆ ಸಂಬಂಧ ಹಕ್ಕುಪತ್ರಕ್ಕೆ ಹೆಬ್ಬೆಟ್ಟು ಮತ್ತು ಸಹಿ ಹಾಕಲು ಮಹಾದೇವಿ ಬೆಳಗಾವಿಯ ಉಪನೋಂದಣಿ ಕಚೇರಿಗೆ ಆಗಮಿಸಬೇಕಿತ್ತು. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದು ಬರಲು ಸಾಧ್ಯವಿಲ್ಲದ ಕಾರಣ ಅವರ ಮಕ್ಕಳು ಉಪನೋಂದಣಿ ಅಧಿಕಾರಿಗೆ ಮಾಹಿತಿ ನೀಡಿ ಅವರೇ ಆಸ್ಪತ್ರೆಗೆ ಬಂದು ಸಹಿ ಪಡೆಯಲು ವಿನಂತಿಸಿಕೊಂಡಿದ್ದರು. ಆದರೆ ಅದಕ್ಕೆ ಸಲ್ಲಿಸಬೇಕಾಗಿದ್ದ 1,000 ರೂಪಾಯಿ ಶುಲ್ಕ ಸಲ್ಲಿಸಲು ನಿರಾಕರಿಸಿದ್ದರು. ಹಾಗಾಗಿ ಕಚೇರಿಯ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ಅವರ ಹೆಬ್ಬಟ್ಟಿನ ಗುರುತು, ಸಹಿ ಪಡೆಯಲು ಅವಕಾಶವಿರಲಿಲ್ಲ.
ಅದಕ್ಕೆ, ಅವರ ಮಕ್ಕಳು ಆಸ್ಪತ್ರೆಯ ಅನುಮತಿ ಪಡೆದು ಆಂಬುಲೆನ್ಸ್ ನಲ್ಲಿ ಮಹಾದೇವಿಯವರನ್ನು ಉಪ ನೋಂದಣಿ ಕಚೇರಿಗೆ ತಂದು ಹೆಬ್ಬಟ್ಟಿನ ಗುರುತು, ಅಗತ್ಯ ಸಹಿ ಪಡೆದು ಪುನಃ ಆಸ್ಪತ್ರೆಗೆ ಸೇರಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸಹಾಯಕ ಉಪನೋಂದಣಾಧಿಕಾರಿ ಸಚಿನ ಮಂಡೆದ ಅವರು, ತಾವು ನಿನ್ನೆ ಕಚೇರಿಯಲ್ಲಿ ಇದ್ದಿರಲಿಲ್ಲ. ಇನ್ನೊಬ್ಬ ಸಬ್ ರಿಜಿಸ್ಟ್ರಾರ್ ಇದ್ದರು. ಅವರಿಂದು ರಜೆ ಮೇಲೆ ತೆರಳಿದ್ದಾರೆ. ಕೇಸ್ ವರ್ಕರ್ ಹತ್ತಿರ ಕೇಳಿದಾಗ ತಮಗೆ ಈ ಬಗ್ಗೆ ಗೊತ್ತಾಗಿದ್ದು, ಹಕ್ಕುಬಿಟ್ಟ ಪತ್ರ ಮಾಡಿಸಲು ಅಜ್ಜಿಯನ್ನು ಸ್ಟ್ರೆಚರ್ ಮೇಲೆ ಕರೆದುಕೊಂಡು ಬಂದಿದ್ದರು ಎಂದು ತಿಳಿಸಿದ್ದಾರೆ.
ಪ್ರೈವೆಟ್ ಅಟೆಂಡೆನ್ಸ್‌ಗೆ ಅರ್ಜಿ ಬಗ್ಗೆ ತಮಗೆ ಗೊತ್ತಿಲ್ಲ. ಅರ್ಜಿ ಕೊಟ್ಟರೆ ನಾವು ಪ್ರೈವೇಟ್ ಅಟೆಂಡೆನ್ಸ್ ಮಾಡುತ್ತೇವೆ. ಪ್ರೈವೇಟ್ ಅಟೆಂಡೆನ್ಸ್‌ಗೆ ಅರ್ಜಿ ಸಲ್ಲಿಸುವ ವೇಳೆ 1000 ರೂಪಾಯಿ ಶುಲ್ಕ ಪಾವತಿಸಬೇಕಿರುತ್ತದೆ. ಆಗ ನಾವು ಓರ್ವ ಸಿಬ್ಬಂದಿ ನೇಮಿಸಿ ಕಳುಹಿಸಿ ಕೊಡುತ್ತೇವೆ. ಹಣ ನೀಡದ ಹಿನ್ನೆಲೆ ಕಚೇರಿಗೆ ಕರೆದುಕೊಂಡು ಬರುವಂತಾಯಿತು ಎಂಬ ಆರೋಪ ವಿಚಾರಕ್ಕೆ, ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಹಾಯಕ ಉಪನೋಂದಣಾಧಿಕಾರಿ ಸಚಿನ್ ಮಂಡೇದ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಆಸ್ಪತ್ರೆಯು, ಮಹಾದೇವಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದ ಅವರ ಮಕ್ಕಳು ವೈದ್ಯಕೀಯ ಸಲಹೆಗೆ ವಿರುದ್ಧ ಅವರನ್ನು ಆಸ್ಪತ್ರೆಯ ಆಂಬುಲೆನ್ಸ್ ನಲ್ಲಿ ತೆಗೆದುಕೊಂಡು ಹೋಗಿ ಪುನಃ ತಂದು ಬಿಟ್ಟರು. ಅವರೊಂದಿಗೆ ಆಸ್ಪತ್ರೆಯ ಯಾವುದೇ ಸಿಬ್ಬಂದಿ ಹೋಗಿರಲಿಲ್ಲ. ರೋಗಿ ಮರಳಿ ಬಂದಾಗ ಮೊದಲಿದ್ದ ಸ್ಥಿತಿಯಲ್ಲೇ ಇದ್ದರು ಎಂದು ತಿಳಿಸಿದೆ.