ನಾಗಪುರ: ತನ್ನ ಸಂಬಂಧಿಕರಿಗೆ ಬುದ್ಧಿ ಕಲಿಸಲು ಮಗಳ ಜೀವವನ್ನೇ ಅಪ್ಪನೊಬ್ಬ ತೆಗೆದಿರುವ ಭಯಾನಕ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ತನ್ನ ಅಪ್ರಾಪ್ತ ಮಗಳಿಂದ ಡೆತ್ನೋಟ್ ಬರೆಸಿದ ಅಪ್ಪನೊಬ್ಬ, ನಾಟಕದ ರೂಪದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹೇಳಿ ಕೊನೆಗೆ ಮಗಳ ಜೀವವನ್ನೇ ಬಲಿ ಪಡೆದಿದ್ದಾನೆ!
ನಾಗಪುರ ನಗರದ ಕಲಾಮ್ನಾ ಪ್ರದೇಶದಲ್ಲಿ ನವೆಂಬರ್ 6 ರಂದು ಈ ಘಟನೆ ನಡೆದಿದೆ. ಅಪ್ಪನ ಈ ಕೃತ್ಯಕ್ಕೆ 16 ವರ್ಷದ ಬಾಲಕಿ ನೇಣು ಹಾಕಿಕೊಂಡು ಸಾವಿನ ಹಾದಿ ಹಿಡಿದಿದ್ದಾಳೆ.
ತನ್ನ ವಿರುದ್ಧ ದೂರು ದಾಖಲಿಸಿದ ವ್ಯಕ್ತಿಗೆ ಪಾಠ ಕಲಿಸಲು ಬಯಸಿದ್ದ ಈ ಅಪ್ಪ, ಆತನ ಹೆಸರನ್ನು ಮಗಳಿಂದ ಬರೆಸಿದ್ದ. ನಂತರ ಆತ್ಮಹತ್ಯೆ ಮಾಡಿಕೊಳ್ಳುವಂತೆ ನಾಟಕವಾಡಲು ಹೇಳಿದ್ದ. ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಸ್ಟೂಲ್ ಏರಿದ್ದಾಗ ಅದರ ಫೋಟೋ ತೆಗೆದುಕೊಂಡಿದ್ದ. ನಂತರ ತಾನೇ ಆ ಸ್ಟೂಲ್ ಅನ್ನು ಕಾಲಿನಿಂದ ಒದ್ದಿದ್ದ. ಇದು ನಾಟಕವಾಗಿದ್ದರೂ ನಿಜವಾಗಿಯೂ ಸ್ಟೂಲ್ ಕೆಳಕ್ಕೆ ಬಿದ್ದು ಮಗಳು ಮೃತಪಟ್ಟಿದ್ದಳು.
ತಾನು ಯಾವುದೋ ಕೆಲಸದ ನಿಮಿತ್ತ ಹೊರ ಹೋಗಿದ್ದೆ. ವಾಪಸಾಗುವಷ್ಟರಲ್ಲಿ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಎಂದು ಪೊಲೀಸರ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನ ಮಾಡಿದ್ದ. ಪೊಲೀಸರು ಆರಂಭದಲ್ಲಿ ಐದು ಸಂಬಂಧಿಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವನ್ನು ದಾಖಲಿಸಿದ್ದರು. ಆದರೆ ನಂತರ ತನಿಖಾಧಿಕಾರಿಗಳಿಗೆ ನಿಜಾಂಶ ತಿಳಿದುಬಂದಿದ್ದು ಕೊಲೆ ಆರೋಪದಡಿ ಬಂಧಿಸಲಾಗಿದೆ.