ಬೀಜಿಂಗ: ಚೀನಾದಲ್ಲಿ ಕೊರೋನಾದ ಹೊಸ ರೂಪಾಂತರಿ ತಳಿ ಮತ್ತೆ ವ್ಯಾಪಕವಾಗಿ ಹಬ್ಬುತ್ತಿದ್ದು ಮುಂದಿನ ಮೂರು ತಿಂಗಳಲ್ಲಿ ಸೋಂಕಿನ ಪ್ರಮಾಣ ಶೇ.60ಕ್ಕೆ ಏರಿಕೆಯಾಗಲಿದೆ ಎಂದು ಅಲ್ಲಿನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಆ ದೇಶದ ವಿವಿಧ ಭಾಗಗಳಲ್ಲಿ ಇರುವ ಆಸ್ಪತ್ರೆಗಳು ಮತ್ತೆ ಸೋಂಕು ಪೀಡಿತರಿಂದ ತುಂಬುತ್ತಿವೆ. ಮುಂದಿನ 90 ದಿನಗಳಲ್ಲಿ ಚೀನದ ಶೇ.60ರಷ್ಟು ಮತ್ತು ಜಗತ್ತಿನ ಶೇ.10ರಷ್ಟು ಮಂದಿಗೆ ಮತ್ತೆ ಕೊರೋನಾ ಬಾಧೆ ಕಾಣಿಸಿಕೊಳ್ಳಲಿದೆ ಎಂದು ಚೀನಾ ತಜ್ಞರು ಹೇಳಿದ್ದಾರೆ.
ರಾಜಧಾನಿ ಬೀಜಿಂಗ್ನ ಶವಸಂಸ್ಕಾರ ಕೇಂದ್ರವೊಂದರಲ್ಲಿ ನಿರೀಕ್ಷೆಗೆ ಮೀರಿ ಮೃತದೇಹಗಳು ಆಗಮಿಸುತ್ತಿವೆ. ಅವುಗಳ ಶವಗಳ ಅಂತ್ಯ ಸಂಸ್ಕಾರಕ್ಕೆ ಸಾಲುಗಟ್ಟಿ ನಿಲ್ಲುವ ಸ್ಥಿತಿ ಉಂಟಾಗಿದೆ ಎಂದು ವರದಿಯಾಗಿದೆ.
ಎಪ್ರಿಲ್ ವೇಳೆಗೆ ಕೊರೋನಾ ಸಾವಿನ ಪ್ರಕರಣ 5 ಲಕ್ಷ ಆಗಲಿದೆ. 2023ರ ಅಂತ್ಯದಲ್ಲಿ 16 ಲಕ್ಷ ಮಂದಿಗೂ ಅಧಿಕ ಈ ರೋಗಕ್ಕೆ ಬಲಿಯಾಗಬಹುದು ಎಂದು ಅಂದಾಜಿಸಲಾಗಿದೆ.
ಚೀನಾದಲ್ಲಿ ಸಾರ್ವಜನಿಕರು ಮತ್ತೆ ಕಠಿಣ ಪ್ರತಿಬಂಧಕ ಕ್ರಮಗಳು ಜಾರಿಯಾಗಬಹುದು ಎಂಬ ಅಂಜಿಕೆಯಿಂದ ದೀರ್ಘ ಕಾಲ ಸಂಗ್ರಹಿಸಲು ಸಾಧ್ಯ ಇರುವ ಆಹಾರ ವಸ್ತುಗಳನ್ನು ಸಂಗ್ರಹಿಸಲು ಆರಂಭಿಸಿದ್ದಾರೆ. ಒಂದು ವಾರದಿಂದ ಈಚೆಗೆ ಆಹಾರ ವಸ್ತುಗಳ ಮಾರಾಟ ಪ್ರಮಾಣ 20ರಿಂದ 30 ಟನ್ಗಳಷ್ಟು ಹೆಚ್ಚಾಗಿದೆ.
ಚೀನಾ ಮಾರುಕಟ್ಟೆಗಳಲ್ಲಿ ವಿಟಮಿನ್ ಸಿ ಪ್ರಮಾಣದ ಆಹಾರ ವಸ್ತುಗಳ ಖರೀದಿ ಪ್ರಮಾಣ ಹೆಚ್ಚಾಗಿದೆ. ಪ್ರತಿ 500 ಗ್ರಾಂ ನಿಂಬೆಹಣ್ಣಿಗೆ 12 ರೂ. ದರ ನಿಗದಿಯಾಗಿದೆ. ಮೊದಲು ಇದು 2 ರೂ.ಗೆ ಸಿಗುತ್ತಿತ್ತು. ಕಿತ್ತಳೆ, ಮರಸೇಬು, ಪೀಚ್ ಹಣ್ಣುಗಳ ಮಾರಾಟವೂ ಹೆಚ್ಚಾಗಿದೆ. ಚೀನಾದಲ್ಲಿನ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಜಗತ್ತಿನ ರಾಷ್ಟ್ರಗಳು ತೀವ್ರ ಕಳವಳ ವ್ಯಕ್ತಪಡಿಸಿದೆ.