ಬೆಳಗಾವಿ : ಮಾನವನ ಧನದಾಹದ ಕಾರಣ ಸತತ ಅರಣ್ಯ ನಾಶದಿಂದ ಮನುಷ್ಯ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಹೆಚ್ಚುತ್ತಿದೆ. ಕಾಡು ನಾಶದಿಂದ ಅರಣ್ಯದಿಂದ ಪ್ರಾಣಿಗಳು ನಾಡಿನತ್ತ ಧಾವಿಸುತ್ತಿದ್ದು ಖಾನಾಪುರ ತಾಲ್ಲೂಕಿನ ಗಡಿ ಗ್ರಾಮವಾದ ಗೋದೋಳಿಯಲ್ಲಿ ಆನೆಯ ಮರಿ ಸೇರಿದಂತೆ ಮೂರು ಕಾಡಾನೆಗಳ ಹಿಂಡು ಕಂಡು ಬಂದಿದೆ.
ಆಹಾರ ಹುಡುಕುತ್ತ ಅರಣ್ಯ ಪ್ರದೇಶದಲ್ಲಿರುವ ಹಳ್ಳಿಗೆ ನುಗ್ಗಿರುವ ಆನೆಗಳು ಹೊಲ, ಗದ್ದೆಗಳಲ್ಲಿ ಬೆಳೆದ ಬೆಳೆಯನ್ನು ಹಾಳು ಮಾಡಿವೆ. ರೈತರು ಹಿಂಡನ್ನು ಓಡಿಸಲು ತಮಗೆ ಗೊತ್ತಿರುವ ತಂತ್ರಗಳನ್ನು ಬಳಸಿದರೂ ಹೋಗದ ಆನೆಗಳು ಹೊಲ ಗದ್ದೆಗಳಲ್ಲೇ ಅಲೆದಾಡಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಹಿಂಡನ್ನು ಓಡಿಸಲು ನಾಯಿಗಳನ್ನು ಬಿಟ್ಟರೂ ಪ್ರಯೋಜನವಾಗಿಲ್ಲ. ಹಿಂದೆ ಬಿದ್ದಿದ್ದ ಒಂದು ನಾಯಿಯನ್ನೇ ಆನೆಯೊಂದು ಅಟ್ಟಾಡಿಸಿಕೊಂಡು ಹೋಗಿದ್ದು, ಗ್ರಾಮಸ್ಥರು ಭಯಬೀತರಾಗಿದ್ದಾರೆ. ಪೊಲೀಸರಿಗೆ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.