ಬೆಂಗಳೂರು : ಈ ಬಾರಿ ರೆಸಾರ್ಟ ರಾಜಕೀಯ ಆಗುವುದಿಲ್ಲ ಮತ್ತು ಅದೆಲ್ಲ ನಡೆಯುವುದೂ ಇಲ್ಲ. ಮತ ಎಣಿಕೆಗೂ ಮುನ್ನ ಎಲ್ಲ ಪಕ್ಷದವರು ತಮ್ಮ ತಮ್ಮಶಾಸಕರನ್ನು ಹಿಡಿದಿಟ್ಟುಕೊಳ್ತಾರೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ ಹೇಳಿದರು.
ಚುಣಾವಣೆಗೆ ಬಿಜೆಪಿ ಎಷ್ಟೇ ಹಣ ಖರ್ಚು ಮಾಡಿರಬಹುದು, ಪ್ರಚಾರಕ್ಕೆ ಎಷ್ಟೇ ನಾಯಕರನ್ನು ಕರೆಸಿರಬಹುದು. ಆದರೆ ಕಾಂಗ್ರೆಸ್ ಗೆ ಬಹುಮತ ಬರಲಿದೆ ಎಂದರು.
ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ಅಧಿಕಾರ ಹಂಚಿಕೆ, ಸಮಿಶ್ರ ಸರಕಾರ ರಚನೆಯೂ ಇಲ್ಲ. ಕಾಂಗ್ರೆಸ್ ನಿಚ್ಚಳ ಬಹುಮತಗಳನ್ನು ಪಡೆದು ಸರ್ಕಾರ ರಚನೆ ಮಾಡಲಿದೆ ಇದು ತಮ್ಮ ದೃಢ ನಂಬಿಕೆ ಎಂದು ಅವರು ಹೇಳಿದರು.
ಅವರ ಎಷ್ಟೇ ನಂಬರ್ ಬಂದರೂ ನಾವೇ ಸರ್ಕಾರ ರಚನೆ ಮಾಡುತ್ತೇವೆ. ಈ ಬಾರಿ ಕಪ್ ನಮ್ಮದೇ ಎಂಬ ಸಚಿವ ಆರ್ ಅಶೋಕ ಅವರ ಹೇಳಿಕೆಗೆ ಅವರು ಪ್ರತಿಕ್ರಯಿಸಿ, “ಆರ್ ಸಿಬಿ ಸ್ಲೋಗನ್ ತರಹಾ ಅಶೋಕ ಅವರೇ ಕಪ್ ಇಟ್ಟುಕೊಳ್ಳಲಿ. ನಾವು ಸರ್ಕಾರ ಇಟ್ಟುಕೊಳ್ಳುತ್ತೇವೆ. ಜನಪರ ಆಡಳಿತ ನೀಡುತ್ತೇವೆ” ಎಂದು ಡಿಕೆಶಿ ಉತ್ತರಿಸಿದರು.
ಚುನಾವಣ್ಣೋತ್ತರ ಸಮೀಕ್ಷೆ ಕುರಿತು ಮಾತನಾಡಿದ ಶಿವಕುಮಾರ, ಎಕ್ಸಿಟ್ ಪೋಲ್ ಬಗ್ಗೆ ನನಗೆ ನಂಬಿಕೆಯಿಲ್ಲ. ಕಾಂಗ್ರೆಸ್ ಪರವಾಗಿ ವರದಿ ಬಂದಿರುವುದಕ್ಕೆ ಸಂತೋಷ. ನನ್ನ ನಂಬಿಕೆ 141 ಸ್ಥಾನಗಳು. ಈ ಬಾರಿ ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದರು.
ದಿನೇಶ ಗುಂಡೂರಾವ್ ಅವರ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಧಿ ಮುಕ್ತಾಯವಾದಾಗ ಸೋನಿಯಾ ಗಾಂಧಿಯವರು ನನಗೆ ಜವಾಬ್ದಾರಿ ಕೊಟ್ಟರು. ನಾನು ಜವಾಬ್ದಾರಿ ಪಡೆದ ಬಳಿಕ ಒಂದು ದಿನವೂ ವಿಶ್ರಾಂತಿ ಪಡೆದಿಲ್ಲ, ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಒಂದು ದಿನವೂ ಮಲಗಿಲ್ಲ, ಮಲಗಲೂ ಬಿಟ್ಟಿಲ್ಲ. ಹಿರಿಯರು, ಕಿರಿಯರು ಎಲ್ಲರೂ ಸಹಕಾರ ನೀಡಿದ್ದಾರೆ. ನನಗೆ ವಿಶ್ವಾಸವಿದೆ. ಕಾಂಗ್ರೆಸ್ ಈ ಬಾರಿ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ನಾವು ಉತ್ತಮವಾದ ಆಡಳಿತ ಕೊಡುತ್ತೇವೆ ಎಂದರು.