ಬೆಳಗಾವಿ : ಬೆಳಗಾವಿಯಲ್ಲಿ ಮುಖ್ಯ ಕಚೇರಿ ಹೊಂದಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮುಂದಿನ ಕುಲಪತಿ ಹುದ್ದೆಗೆ ಅರ್ಹರನ್ನು ಆಯ್ಕೆ ಮಾಡಲು ರಾಜ್ಯಪಾಲ ಥಾವರಚಂದ ಗೆಹಲೋತ್ ಅವರು ನೇಮಕ ಮಾಡಿರುವ ನಾಲ್ಕು ಜನರ ಆಯ್ಕೆ ಸಮಿತಿಯು ಮೂವರ ಹೆಸರನ್ನು ಸೂಚಿಸಿದ್ದು ಆದರೆ ಈ ಮೂವರೂ ಆಯ್ಕೆಯಾಗಲು ಅಡ್ಡಿಯಾಗುವಂತಹ ಕಳಂಕ ಹೊಂದಿದ್ದಾರೆ ಎಂಬ ಆರೋಪಗಳಿವೆ.
“ಯಾವುದೇ ವಿವಾದ, ಆರೋಪ ಆಡಳಿತಾತ್ಮಕ ಕಳಂಕವಿಲ್ಲದ ವ್ಯಕ್ತಿಯನ್ನು ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗೆ ಪರಿಗಣಿಸಬೇಕಾಗಿರುವದರಿಂದ ಈ ಮೂವರ ಆಯ್ಕೆ ಸಾಧ್ಯವಿಲ್ಲ” ಎಂದು ಉನ್ನತ ಹುದ್ದೆಯಲ್ಲಿರುವವರು ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯಪಾಲರ ಆಯ್ಕೆ ಸಮಿತಿಯು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ವಿದ್ಯಾಶಂಕರ, ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯ ನಿರ್ದೇಶಕ ಗೋಪಾಲ ಮುಗರೈ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಆಗಿರುವ ಆನಂದ ದೇಶಪಾಂಡೆ ಅವರನ್ನು ಆಯ್ಕೆ ಮಾಡಿದೆ. ಮೂವರಲ್ಲಿ ಒಬ್ಬರನ್ನು ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು ಆಯ್ಕೆ ಮಾಡುವರು.
ಎನ್ಐಟಿಯ ಗೋಪಾಲ ಮುಗುರೈ ಅವರನ್ನು 2018 ರಲ್ಲಿ ಗೋವಾದಲ್ಲಿನ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (ಎ ಐ ಸಿ ಟಿ ಈ ) ನ ಪರಣಿತರ ತಂಡದಿಂದ ಉಚ್ಛಾಟಿಸಲಾಗಿದೆ. ಇವರು ಮಾತ್ರವಲ್ಲದೇ ಇತರ ಆರು ಸದಸ್ಯರನ್ನೂ ಡಿಬಾರ್ ಮಾಡಿ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಲು ನಿರ್ಬಂಧ ವಿಧಿಸಿದೆ.
ರಾಜ್ಯಪಾಲರು ನಿಯೋಜನೆಗೊಳಿಸಿರುವ ಆಯ್ಕೆ ಸಮಿತಿ ಕುಲಪತಿ ಹುದ್ದೆಗೆ ಮೂವರ ಹೆಸರು ಸೂಚಿಸಿ ಪಟ್ಟಿ ವಿವರ ನೀಡಿದ ನಂತರವಷ್ಟೇ ಮುಗುರೈ ಎಐಸಿಟಿಈ ಯಿಂದ ಉಚ್ಚಾಟನೆಗೊಂಡಿರುವದು ಗೊತ್ತಾಗಿದೆ ಎಂದು ಆಯ್ಕೆ ಸಮಿತಿಯ ಸದಸ್ಯರೊಬ್ಬರನ್ನು ಹೆಸರಿಸಿ ಮೂಲಗಳು ಸಮದರ್ಶಿಗೆ ತಿಳಿಸಿವೆ.
ಬೆಳಗಾವಿಯಲ್ಲಿ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಆಗಿರುವ ಆನಂದ ದೇಶಪಾಂಡೆ ವಿಶ್ವವಿದ್ಯಾಲಯಗಳ ಕಾಯ್ದೆ ಮೀರಿ, ಕುಲಪತಿ ಕರಿಸಿದ್ದಪ್ಪ ಅವರ ಆದೇಶದ ಮೇರೆಗೆ ವಿವಿಧ ಯೋಜನೆಗಳಿಗೆ ಕೋಟ್ಯಂತರ ರೂಪಾಯಿಗಳನ್ನು ಇದೇ ವರುಷದ ಅಗಸ್ಟ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಿದ್ದು ಅವರ ವಿರುದ್ಧ ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಪ್ರಕರಣ ದಾಖಲಾಗಿದೆ.
ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳು ತಾವು ನಿವೃತ್ತಿಯಾಗುವ ಎರಡು ತಿಂಗಳಲ್ಲಿ ಯಾವುದೇ ಹೊಸ ಯೋಜನೆ, ಹೆಚ್ಚು ಹಣಕಾಸಿನ ಯೋಜನೆ ಕೈಗೆತ್ತಿಕೊಳ್ಳಕೂಡದು ಎಂಬ ನಿಯಮವಿದೆ. ವಿಶ್ವವಿದ್ಯಾಲಯದ ಕುಲಪತಿ ಕರಿಸಿದ್ದಪ್ಪ ಇದೇ ತಿಂಗಳ 30ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಯಾಗಿರುವ ವಿದ್ಯಾಶಂಕರ ವಿರುದ್ಧ ಮೈಸೂರು ವಿಶ್ವವಿದ್ಯಾಲಯದ ಸಿನೆಟ್ ಸದಸ್ಯರಾಗಿದ್ದ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ಕಾರ್ಯದರ್ಶಿಯೂ ಆಗಿದ್ದ ಮಹದೇವ ಅವರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಭ್ರಷ್ಟಾಚಾರದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ.
ಅಲ್ಲದೇ ವಿದ್ಯಾಶಂಕರ ಅವರು ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಪ್ರಕರಣ ತಾವು ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಲು ಅಡ್ಡಿಯಾಗುತ್ತದೋ ಎಂಬ ಆತಂಕದಿಂದ ಆ ಮಹಿಳೆಯ ಪತಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸಂಧಾನಕ್ಕೆ ಪ್ರಯತ್ನಿಸಿದ ಆಡಿಯೋವನ್ನೂ ಸಹ ಮಹದೇವ ಅವರು ಬಿಡುಗಡೆ ಮಾಡಿದ್ದಾರೆ. 44 ನಿಮಿಷಗಳ ಈ ಆಡಿಯೋ ಸಂಭಾಷಣೆ ವೈರಲ್ ಗೊಂಡಿದೆ.
ಈ ಮೂವರಲ್ಲಿ ಯಾರೇ ಕುಲಪತಿ ಹುದ್ದೆಗೆ ಆಯ್ಕೆಯಾದರೂ ಹುದ್ದೆಯಲ್ಲಿ ಮುಂದುವರೆಯುವದು ಕಷ್ಟ ಎನ್ನಲಾಗುತ್ತಿದೆ.