ಬೆಳಗಾವಿ: ಪ್ರಸಿದ್ದ ಹಿಂಡಲಗಾ ಗಣಪತಿ ದೇವಸ್ಥಾನ ಬಳಿಯ ಹಿಂಡಲಗಾ ಗಣಪತಿ ಕೆರೆಯಲ್ಲಿ ಬಾಲಕ ಹಾಗೂ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ಯಾರು ಎನ್ನುವುದರ ಗುರುತು ಪತ್ತೆ ಹಚ್ಚಲಾಗಿದೆ.
ಬೆಳಗಾವಿ ತಾಲೂಕಿನ ಕಲಖಾಂಬ ಗ್ರಾಮದ ಕವಿತಾ ಬಸವಂತ ಜುನೇ ಬೆಳಗಾಂವಕರ ಮತ್ತು ಅವರ ಮಗ ಸಮರ್ಥ ಬಸವಂತ ಜುನೇ ಬೆಳಗಾಂವಕರ ಎಂದು ಗುರುತಿಸಲಾಗಿದೆ. ಮಹಿಳೆಯ ಮೂಲತಃ ಜಾಂಬೋಟಿ ರಸ್ತೆಯ ಕಿಣಯೇ ಗ್ರಾಮದವರು. ಶನಿವಾರ ಮುಂಜಾನೆ ಪತ್ತೆಯಾದ ಮೃತ ದೇಹಗಳನ್ನು ಮಧ್ಯಾಹ್ನ ಪೊಲೀಸರು ಹಾಗೂ ಸಾರ್ವಜನಿಕರು ಗುರುತು ಹಿಡಿದಿದ್ದಾರೆ. ಪೊಲೀಸರು ತನಿಖೆ ನಡೆಸಿ ಘಟನೆಯ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಮಹಿಳೆಗೆ ಅಂದಾಜು 40 ಮತ್ತು ಅವರ ಮಗ 14 ವರ್ಷದವನು. ಕ್ಯಾಂಪ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ತಾಯಿ, ಮಗ ಮೂರು ದಿನಗಳ ಹಿಂದೆ ಕಲಕಾಂಬ ಗ್ರಾಮದಿಂದ ನಾಪತ್ತೆಯಾಗಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತಾಯಿ, ಮಗ ಕೆರೆಯ ಬಳಿ ಚಪ್ಪಲಿ ತೆಗೆದು ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗಾವಿಯ ಫೇಸಬುಕ್ ಫ್ರೆಂಡ್ ಸರ್ಕಲ್ ಗುಂಪಿನ ಬಸವರಾಜ ಹಿರೇಮಠ ಮತ್ತು ಸಂತೋಷ ಧರೇಕರ ಅವರು ಶವಗಳನ್ನು ನೀರಿನಿಂದ ಮೇಲೆ ತೆಗೆಯಲು ಸಹಕರಿಸಿದರು.
ಮೂರು ದಿನಗಳ ಹಿಂದೆಯೇ ಇವರು ಕೆರೆಗೆ ಜಿಗಿದಿರಬಹುದು. ಈ ಕುರಿತು ಮರಣ್ಣೋತ್ತರ ಪರೀಕ್ಷೆಯ ನಂತರವಷ್ಟೇ ಮಾಹಿತಿ ದೊರೆಯಲಿದೆ. ಪತಿ ಬಸವಂತ ಮತ್ತು ಅವನ ತಾಯಿಯ ಕಿರುಕುಳ ತಾಳಲಾರದೇ ಕವಿತಾ ಮತ್ತು ಮಗ ಸಮರ್ಥ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪತ್ರ ಸಿಕ್ಕಿದೆ ಎಂದು ತಿಳಿದುಬಂದಿದೆ.