ಬೆಳಗಾವಿ : ಗೋಗಟೆ ಕಾಲೇಜ್ ನಲ್ಲಿ ಕನ್ನಡ ಧ್ವಜ ಹಿಡಿದ ವಿದ್ಯಾರ್ಥಿಯನ್ನು ಥಳಿಸಿದ ಮರಾಠಿ ಭಾಷಿಕ ವಿದ್ಯಾರ್ಥಿಗಳನ್ನು ತಕ್ಷಣ ಬಂಧಿಸಬೇಕು ಹಾಗು ವಿದ್ಯಾರ್ಥಿಯನ್ನು ಪೊಲೀಸ್ ಠಾಣೆಗೆ ಕರೆಸಿ ಹೊಡೆದ ಪೊಲೀಸ್ ಅಧಿಕಾರಿಗಳ ಕುರಿತು ಕ್ರಮ ಜರುಗಿಸಲು ಆಗ್ರಹಿಸಿ ಕನ್ನಡ ಸಂಘಟನೆಗಳು ಆರ್ ಪಿ ಡಿ ಕ್ರಾಸ್ ಬಳಿ ಟೈಯರ್ ಗೆ ಬೆಂಕಿ ಹಂಚಿ ಪ್ರತಿಭಟನೆ ನಡೆಸಿದವು.
ಬುಧವಾರ ಸಂಜೆ ನಡೆದ ಘಟನೆಯ ಹಿನ್ನೆಲೆಯಲ್ಲಿ ಕಾಲೇಜ್ ಗೆ ಗುರುವಾರ ರಜೆ ನೀಡಲಾಗಿದ್ದು ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪ್ರಕರಣದ ಕುರಿತು ಮಾತನಾಡಿದ ಥಳಿತಕ್ಕೊಳಗಾದ ಕನ್ನಡ ವಿದ್ಯಾರ್ಥಿ “ನಾನು ಸೇರಿದಂತೆ ಕೆಲವರು ಕನ್ನಡ ಹಾಡೊಂದಕ್ಕೆ ಕನ್ನಡ ಬಾವುಟ ಹಿಡಿದುಕೊಂಡು ಡಾನ್ಸ ಮಾಡುತ್ತಿದ್ದೆವು. ಆಗ 5-6 ವಿದ್ಯಾರ್ಥಿಗಳು ಬಂದು ನಮ್ಮನ್ನು ಬಡಿಯಲು ತೊಡಗಿದರು.. ಅದರಲ್ಲಿ ಒಬ್ಬ ನನ್ನ ಕ್ಲಾಸಮೇಟ್ ಸಹ ಇದ್ದ. ಆಗ ಕಾಲೇಜು ಪ್ರಾಚಾರ್ಯ ಮತ್ತು ಶಿಕ್ಷಕರು ಬಂದು ನನ್ನನ್ನು ರಕ್ಷಿಸಿದರು.
ನಂತರ ಬಂದ ಪೊಲೀಸರು ನನ್ನನ್ನು ಟಿಳಕವಾಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಆಗ ಒಂದು ಚೇಂಬರ್ ನಲ್ಲಿ ಇಬ್ಬರು ಅಧಿಕಾರಿಗಳು ಅವಾಚ್ಯ ಶಬ್ದಗಳಲ್ಲಿ ಬೈದು, ಬೂಟುಗಾಲಿನಿಂದ ನನ್ನ ಹಿಂಬದಿಗೆ ಒದ್ದರು. ಸುಮಾರು 20 ಬಾರಿ ನನ್ನ ಕೆನ್ನೆಗೆ ಹೊಡೆದರು ಎಂದು ವಿದ್ಯಾರ್ಥಿ ಗಂಭೀರ ಆರೋಪ ಮಾಡಿದ್ದಾನೆ.
ನೀನು ಇನ್ನೂ ವಿದ್ಯಾರ್ಥಿ, ನಿನ್ನ ಮೇಲೆ ಪ್ರಕರಣ ದಾಖಲಿಸಿದರೆ ನಿನ್ನ ಭವಿಷ್ಯ ಹಾಳಾಗುತ್ತದೆ, ಎಚ್ಚರವಾಗಿರು ಎಂದು ಹೆದರಿಸಿದರು. ತೀವ್ರ ಮಾನಸಿಕ ಮತ್ತು ದೈಹಿಕ ಆಘಾತಕ್ಕೊಳಗಾಗಿದ್ದ ನಾನು, ಪೊಲೀಸ್ ಠಾಣೆಯಿಂದ ಹೊರಗೆ ಬಂದಾಗ ಅಲ್ಲಿ ತನಗಾಗಿ ಕಾಯುತ್ತಿದ್ದ ಮಾಧ್ಯಮದವರನ್ನು ಕಂಡು ಅವರಿಗೆ ಮಾಹಿತಿ ನೀಡಬೇಕೆನ್ನುವಷ್ಟರಲ್ಲಿ ಪೊಲೀಸರು ಪತ್ರಕರ್ತರೊಂದಿಗೆ ಮಾತನಾಡಲು ಬಿಡದೇ ನನ್ನನ್ನು ಪುನಃ ಪೊಲೀಸ ಠಾಣೆ ಒಳಗೆ ತೆಗೆದುಕೊಂಡು ಹೋಗಿ ಮೊದಲ ಮಹಡಿಯ ಕೋಣೆಯೊಂದರಲ್ಲಿ ಕೂಡಿಟ್ಟರು. ಮಾಧ್ಯಮದವರು ತೆರಳಿದ ನಂತರ ನನ್ನನ್ನು ಹೊರಗೆ ಬಿಟ್ಟರು. ಆಗ ಸುಮಾರು ಮಧ್ಯರಾತ್ರಿ 2 ಗಂಟೆಯಾಗಿತ್ತು ಎಂದು ಸಂತ್ರಸ್ತ ವಿದ್ಯಾರ್ಥಿ ವಿವರಿಸಿದನು.
ತನ್ನ ತಂದೆ ತಾಯಿಯರನ್ನೂ ರಾತ್ರಿ ಪೊಲೀಸ್ ಠಾಣೆಗೆ ಕರೆಸಿ ಅವರಿಗೂ ಬೆದರಿಕೆ ಹಾಕಿ ಅವರಿಂದ ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ ಎಂದು ವಿದ್ಯಾರ್ಥಿ ತಿಳಿಸಿದ್ದಾನೆ.
ಆದರೆ “ಸಮದರ್ಶಿ” ಜೊತೆ ಮಾತನಾಡಿ, ಪ್ರಕರಣದ ಮಾಹಿತಿ ನೀಡಿದ ಡಿಸಿಪಿ ರವೀಂದ್ರ ಗಡಾದಿ ಅವರು, ವಿದ್ಯಾರ್ಥಿ ಹೇಳಿದಂತೆ ಅದ್ಯಾವುದೂ ಕಾಲೇಜು ಕ್ಯಾಂಪಸ್ ನಲ್ಲಿ ಜರುಗಿಲ್ಲ. ಈತನೊಬ್ಬನೇ ಕನ್ನಡ ಬಾವುಟ ತಂದು ಕನ್ನಡದ ಹಾಡಿಗೆ ಡಾನ್ಸ ಮಾಡುತ್ತಿದ್ದ. ಆಗ ಹತ್ತಿರದಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿಯ ಕಾಲಿಗೆ ಬಾವುಟ ಸಿಕ್ಕು ಗಲಾಟೆಗೆ ಕಾರಣವಾಗಿದೆ. ಕಾಲಿಗೆ ಧ್ವಜ ಸಿಕ್ಕ ವಿದ್ಯಾರ್ಥಿ ಕೂಡ ಕನ್ನಡ ಭಾಷಿಕನೇ ಆಗಿದ್ದಾನೆ ಎಂದು ತಿಳಿಸಿದರು.
ಕನ್ನಡ ಧ್ವಜದೊಂದಿಗೆ ಡಾನ್ಸ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಟಿಳಕವಾಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ನಾನೇ ವಿಚಾರಣೆ ಮಾಡಿ, ಎಚ್ಚರಿಕೆ ಮತ್ತು ಸಲಹೆ ನೀಡಿ ಕಳುಹಿಸಿದೆ. ಕೆನ್ನೆಗೆ ಬಾರಿಸಿದ್ದು, ಬೂಟುಗಾಲಿನಿಂದ ಒದ್ದದ್ದು ಸುಳ್ಳು. ಬೇಕಿದ್ದರೆ ಠಾಣೆಯಲ್ಲಿರುವ ಸಿಸಿಟಿವಿ ಕ್ಯಾಮೆರಾ ಫುಟೇಜ್ ವೀಕ್ಷಿಸಬಹುದು” ಎಂದು ಹೇಳಿದರು.