ತುಮಕೂರು: ಅಭಿಮಾನಿಗಳು ಸಿಡಿಸಿದ ಪಟಾಕಿ ಕಿಡಿ ಸಿಡಿದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಕಣ್ಣಿಗೆ ಗಾಯವಾಗಿದೆ.
ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ಹುಚ್ಚ ಮಾಸ್ತಿಗೌಡ ವೃತ್ತದಲ್ಲಿ ಈ ಘಟನೆ ನಡೆದಿದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಾಜಣ್ಣ ಅವರು ಅಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಲು ಹಾಸನಕ್ಕೆ ತೆರಳುತ್ತಿದ್ದರು. ಕುಣಿಗಲ್ ಮಾರ್ಗವಾಗಿ ರಾಜಣ್ಣ ತೆರಳುತ್ತಿರುವ ಈ ಬಗ್ಗೆ ಮಾಹಿತಿ ತಿಳಿದ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಕುಣಿಗಲ್ ಹುಚ್ಚ ಮಾಸ್ತಿಗೌಡ ವೃತ್ತದಲ್ಲಿ ಸ್ವಾಗತಿಸಿ ಹಾರ ಹಾಕಿ ಅಭಿನಂದಿಸಿದರು. ಈ ವೇಳೆ ಸಚಿವರ ಸಮೀಪದಲ್ಲಿಯೇ ಹಾರಿಸಿದ ಪಟಾಕಿ ಸಿಡಿದು ಅವರ ಒಂದು ಕಣ್ಣಿಗೆ ಗಾಯವಾಗಿದೆ. ಪಟಾಕಿ ಹಚ್ಚಿದಾಗ ರಾಜಣ್ಣ ತಮ್ಮ ಕನ್ನಡಕ ತೆಗೆಯುತ್ತಿದ್ದರು.
ತಕ್ಷಣವೇ ಅವರು ಖಾಸಗಿ ಆಸ್ಪತ್ರೆಗೆ ತೆರಳಿ ನೇತ್ರ ತಜ್ಞರಿಂದ ಅದಕ್ಕೆ ಚಿಕಿತ್ಸೆ ಪಡೆದು ನಂತರ ಹಾಸನಕ್ಕೆ ಪ್ರಯಾಣ ಬೆಳೆಸಿದರು.