ಬಸವಕಲ್ಯಾಣ: ನಗರದಲ್ಲಿ ಗುರುವಾರ ನಡೆದ ಶ್ರೀರಾಮ ನವಮಿಯ ಮೆರವಣಿಗೆಯಲ್ಲಿ ಶ್ರೀರಾಮ ಮೂರ್ತಿಯ ತೊಡೆಯ ಮೇಲೆ ನಿಂತು ಶಾಸಕ ಶರಣು ಸಲಗರ ಪುಷ್ಪಮಾಲೆ ಹಾಕಿದ್ದರು. ಈ ಬಗ್ಗೆ ಕ್ಷಮೆ ಕೇಳುತ್ತೇನೆ ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಫೇಸಬುಕ್ ಲೈವ್ ನಲ್ಲಿ ಈ ಬಗ್ಗೆ ಸ್ಪಷ್ಟಿಕರಣ ನೀಡಿದ ಅವರು, ಒಂದು ವೇಳೆ ನಿಮಗೆ ಇದು ತಪ್ಪು ಎನಿಸಿದರೆ ಕ್ಷಮೆ ಕೇಳುತ್ತೇನೆ. ನಾನೂ ಅಪ್ಪಟ ರಾಮ ಭಕ್ತ, ಹಿಂದೂ ಕಾರ್ಯಕರ್ತನಾಗಿದ್ದೇನೆ ಎಂದು ಅವರು ಹೇಳಿದರು.
ಶ್ರೀರಾಮನ ಮೇಲಿನ ಅತಿಯಾದ ಭಕ್ತಿ, ಪ್ರೀತಿಯ ಕಾರಣ ತೊಡೆ ಏರಿ ಪುಷ ಮಾಲೆ ಅರ್ಪಿಸಿದ್ದು ನಿಜ. ಕಾರ್ಯಕ್ರಮ ಸಮಿತಿ ಸದಸ್ಯರ ಅನುಮತಿ ಪಡೆದೇ ಮೇಲೇರಿ ಮಾಲೆ ಹಾಕಿ ಆರತಿ ಬೆಳಗಿದ್ದೇನೆ. ನಂತರ ಕೆಳಗೆ ಇಳಿಯುವಾಗ ತೊಡೆಗೆ ಹಣೆಹಚ್ಚಿ ನಮಸ್ಕರಿಸಿದ್ದೇನೆ. ನಮ್ಮ ಹಿತಶತ್ರುಗಳು, ಆಗದವರು ಅದನ್ನು ತೋರಿಸಿಲ್ಲ. ಆದರೂ ನಾನು ಆಗಿರುವ ಪ್ರಮಾದಕ್ಕೆ ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ ಎಂದು ಅವರು ಹೇಳಿದ್ದಾರೆ.