ಲಖನೌ, ೮- 7 ವರ್ಷದ ಹಿಂದೆ ಹುಡುಗಿ ಸತ್ತಿದ್ದಾಳೆ ಎಂದು ಆಕೆಯ ಸಾವಿಗೆ ಕಾರಣನಾಗಿದ್ದಾನೆಂದು 7 ವರ್ಷದ ಹಿಂದೆ ವ್ಯಕ್ತಿಯೊಬ್ಬನನ್ನು ಜೈಲಿಗೆ ನೂಕಲಾಯಿತು. ಆದರೆ ಏಳು ವರ್ಷಗಳ ಹಿಂದೆ ಸಾವನ್ನಪ್ಪಿದ್ದಾಳೆ ಎಂದು ನಂಬಲಾಗಿದ್ದ ಮಹಿಳೆ ಜೀವಂತವಿದ್ದಾಳೆ. ಅವಳ ಕೊಲೆ ಆರೋಪದ ಮೇಲೆ ವ್ಯಕ್ತಿ ಮಾತ್ರ ಜೈಲಲ್ಲಿದ್ದಾನೆ. ಉತ್ತರಪ್ರದೇಶದಲ್ಲಿ ಈ ಘಟನೆ ನಡೆದಿದೆ.
ವಿಷ್ಣು ಎಂಬಾತನಿಗೆ ನ್ಯಾಯಾಲಯವು ಏಳು ವರ್ಷಗಳ ಹಿಂದೆ ಕೊಲೆ ಆರೋಪದಡಿ ಜೈಲು ಶಿಕ್ಷೆಯನ್ನು ವಿಧಿಸಿತು. ಯುವತಿಯ ತಂದೆ ಆಗ್ರಾದಲ್ಲಿ ಅಪರಿಚಿತ ಶವವನ್ನು ತಮ್ಮ ಮಗಳು ಎಂದು ಗುರುತಿಸಿದ್ದರು. ಅಪ್ರಾಪ್ತೆಯನ್ನು ಅಪಹರಿಸಿ ಕೊಂದ ಎಂಬ ಪ್ರಕರಣದಲ್ಲಿ ವಿಷ್ಣು ಜೈಲು ಪಾಲಾಗಿದ್ದ. ಈ ಮಧ್ಯೆ, ವಿಷ್ಣು ಅವರ ತಾಯಿ ತಮ್ಮ ಮಗನಿಗೆ ನ್ಯಾಯ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
ಹದಿಹರೆಯದವನಾಗಿದ್ದಾಗ ಮಹಿಳೆಯನ್ನು ಅಪಹರಿಸಿ ಕೊಂದ ಆರೋಪ ಹೊತ್ತಿದ್ದ ಮಗನಿಗೆ ನ್ಯಾಯ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಮಹಿಳೆ ಸತ್ತಿಲ್ಲ. ಆಕೆ ಬದುಕಿದ್ದಾಳೆ. ಬೇರೊಬ್ಬನೊಂದಿಗೆ ಮದುವೆಯಾಗಿದ್ದಾಳೆ , ನನ್ನ ಮಗ ನಿರಪರಾಧಿ ಎಂದಿದ್ದರು.
ವಿಷ್ಣು ತಾಯಿಯ ಅರ್ಜಿಯಂತೆ ಘಟನೆಯ ಕುರಿತು ತನಿಖೆಗೆ ಆದೇಶಿಸಿದಾಗ ಪೊಲೀಸರು ಮಹಿಳೆಯನ್ನು ಅಲಿಗಡ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆಕೆಯ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಮಾಡಿಸಿದರು. ಮಹಿಳೆಯ ತಂದೆ ಆಕೆಯನ್ನು ತನ್ನ ಮಗಳು ಎಂದು ಗುರುತಿಸಿದ್ದಾರೆ.
ಆ ತರುಣಿ ಅಪ್ರಾಪ್ತೆಯಾಗಿದ್ದಾಗ 7 ವರ್ಷದ ಹಿಂದೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾಗಿ ಬೇರೆಡೆ ನೆಲೆಸಿದ್ದಳು. ಇದೀಗ ಪೊಲೀಸರ ಸಮಗ್ರ ತನಿಖೆಯಿಂದ ನಿಜ ವಿಚಾರ ಹೊರಗೆ ಬಂದಿದೆ.