ಬೆಳಗಾವಿ : ಹಿರಿಯ ಅಧಿಕಾರಿಗಳ ಕಿರುಕುಳ ಸಹಿಸಲಾರದೇ ಬೆಳಗಾವಿ ತಹಸೀಲ್ದಾರ ಕಚೇರಿಯ ಸಿಬ್ಬಂದಿಯೊಬ್ಬರು ರಿಸಾಲದಾರ ರಸ್ತೆಯಲ್ಲಿರುವ ಕಚೇರಿಯಲ್ಲಿ ಸೋಮವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅದಕ್ಕೆ ಕಾರಣ ಬೆಳಗಾವಿ ತಹಸೀಲ್ದಾರ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಅವರ ಆಪ್ತ ಸಹಾಯಕ ಎಂದು ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ದ್ವಿತೀಯ ದರ್ಜೆ ಗುಮಾಸ್ತ (ಎಸ್ಡಿಸಿ) 35 ವರುಷದ ರುದ್ರೇಶ ಯಾದವಣ್ಣವರ ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ತಮ್ಮ ತಾಯಿಗೆ ಫೋನ್ ಮಾಡಿ ಊಟಕ್ಕೆ ಬರುವುದಿಲ್ಲ ಎಂದು ತಿಳಿಸಿ ನಂತರ ಕಚೇರಿಯಲ್ಲಿನ ತಹಸೀಲ್ದಾರ ಅವರ ನ್ಯಾಯಾಲಯದ ಕೋಣೆಗೆ ತೆರಳಿ ಅಲ್ಲಿಂದಲೇ ತಾವು ಆತ್ಮಹತ್ಯೆ ಮಾಡಿಕೊಳ್ಳುವ ಕುರಿತು ವಿಡಿಯೋ ರೆಕಾರ್ಡ ಮಾಡಿ ತಹಸೀಲ್ದಾರ ಕಚೇರಿಯ ವಾಟ್ಸಪ್ ಗ್ರೂಪ್ ಗೆ ಫಾರ್ವರ್ಡ ಮಾಡಿ ನಂತರ ಅಲ್ಲಿಯೇ ಫ್ಯಾನ್ ಹಿಡಿಕೆಗೆ ನೇಣು ಬಿಗಿದುಕೊಂಡು ಸಾವಿಗೆ ಶರಣರಾಗಿದ್ದಾರೆ.
ಮಂಗಳವಾರ ಮುಂಜಾನೆ ಕಚೇರಿಗೆ ಸಿಬ್ಬಂದಿ ಆಗಮಿಸಿದ ನಂತರ ಈ ಆಘಾತಕಾರಿ ಘಟನೆ ಕಂಡು ಬಂದಿದ್ದು ಇದೇ ಕಟ್ಟಡದಲ್ಲಿ ಸಾರ್ವಜನಿಕ ಸೇವೆ ಒದಗಿಸುವ “ಬೆಳಗಾವಿ ಒನ್” ಕಚೇರಿಯೂ ಕಾರ್ಯನಿರ್ವಹಿಸುತ್ತದೆ. ಘಟನೆಯಿಂದ ಕಚೇರಿಯ ಮಹಿಳಾ ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ.
ತಹಸೀಲ್ದಾರ ಬಸವರಾಜ ನಾಗರಾಳ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಅವರ ಆಪ್ತ ಸಹಾಯಕ ಸೋಮು ಎಂಬವರ ಕಾರಣಕ್ಕೆ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ರುದ್ರೇಶ ಆತ್ಮಹತ್ಯೆಗೂ ಮುನ್ನ ತಹಸೀಲ್ದಾರ ಕಚೇರಿಯ ವಾಟ್ಸಪ್ ಗುಂಪಿನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಹಂಚಿಕೊಂಡಿದ್ದಾರೆ. ಈ ವಿಷಯದ ಕುರಿತು ಗುಂಪಿನಲ್ಲಿ ಚರ್ಚೆ ನಡೆದಾಗ ಆ ವಿಡಿಯೋ ಮೆಸೇಜ್ ತೆಗೆದು ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಸಾವಿಗೆ ಶರಣಾಗುವದಕ್ಕೂ ಮೊದಲು ತಮ್ಮ ಹೇಳಿಕೆಯನ್ನು ವಿಡಿಯೋ ರೆಕಾರ್ಡ ಮಾಡಿ ನಂತರ ತಹಸೀಲ್ದಾರ ಸೇರಿದಂತೆ ತಮ್ಮ ಕಚೇರಿಯ ನೌಕರರ ವಾಟ್ಸಪ್ ಗುಂಪಿನಲ್ಲಿ ಶೇರ್ ಮಾಡಿದ್ದಾರೆ. “ನಾನು ಆತ್ಮಹತ್ಯೆ ಮಾಡಿಕೊಳ್ಳಲು, ತಹಸೀಲ್ದಾರ ಬಸವರಾಜ ನಾಗರಾಳ, ಮಿನಿಸ್ಟರ್ ಲಕ್ಷ್ಮಿ ಹೆಬ್ಬಾಳ್ಕರ ಅವರ ಆಪ್ತ ಸಹಾಯಕ ಸೋಮು, ಹಿರಿಯ ಅಧಿಕಾರಿಗಳ ಒತ್ತಡ ಮತ್ತು ಕಿರುಕುಳವೇ ಕಾರಣ” ಎಂದು ಕನ್ನಡದಲ್ಲಿ ಹೇಳಿಕೆ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮವಾರವಷ್ಟೇ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ರುದ್ರೇಶ ಯಾದವಣ್ಣವರ ಅವರನ್ನು ಸವದತ್ತಿಯ ಯಲ್ಲಮ್ಮ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರನ್ನಾಗಿ ವರ್ಗಾವಣೆ ಮಾಡಿದ್ದರು. ವರ್ಗಾವಣೆ ರದ್ದು ಮಾಡಲು ರುದ್ರೇಶ ಅವರು ಜಿಲ್ಲಾಧಿಕಾರಿ ಮತ್ತು ಸಚಿವೆ ಲಕ್ಷ್ಮಿಯವರನ್ನು ವಿನಂತಿಸಿಕೊಂಡಿದ್ದರು ಎನ್ನಲಾಗಿದೆ. ವರ್ಗಾವಣೆ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಬೆಳಗಾವಿ ಡಿಸಿಪಿ ರೋಷನ್ ಜಗದೀಶ ಅವರ ಸಮ್ಮುಖದಲ್ಲಿ ರುದ್ರೇಶ ಅವರ ಸಂಬಧಿಂಕರು ತಹಸೀಲ್ದಾರ ಕಚೇರಿಗೆ ಆಗಮಿಸಿದ ನಂತರ ನೇತಾಡುತ್ತಿದ್ದ ಅವರ ಶವವನ್ನು ಕೆಳಗಿಳಿಸಿ ಮರಣ್ಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಅವರ ಪತ್ನಿ ಕೂಡ ಸರಕಾರಿ ನೌಕರರರಾಗಿದ್ದಾರೆ. ಖಡೇಬಜಾರ್ ಪೊಲೀಸ ಠಾಣೆಯಲ್ಲಿ ರುದ್ರೇಶ ಅವರ ತಾಯಿ ಪ್ರಕರಣ ದಾಖಲಿಸಿದ್ದಾರೆ.