ಗಾಜಿಯಾಬಾದ, ೧೬- ಕೊಲೆ ಮಾಡಿ ಶವವನ್ನು ತುಂಡರಿಸಿ ಎಸೆಯುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ಬಯಲಾಗುತ್ತಿವೆ. ಈ ಸಾಲಿಗೆ ಮತ್ತೊಂದು ಪ್ರಕರಣ ಸೇರಿದ್ದು ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಬಾಡಿಗೆದಾರರನ್ನು ಮನೆ ಮಾಲೀಕ ಹತ್ಯೆ ಮಾಡಿರುವ ಪ್ರಕರಣದಲ್ಲಿ ಗಾಜಿಯಾಬಾದ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಎರಡು ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣದಲ್ಲಿ, ತನ್ನ ಬಾಡಿಗೆದಾರ ಅಂಕಿತ ಖೋಕರ ನನ್ನು ಕೊಂದು ಅವನ ದೇಹವನ್ನು ತುಂಡುಗಳಾಗಿ ಕತ್ತರಿಸಿ ಕಾಲುವೆಗೆ ಎಸೆದಿದ್ದ. ಈ ಆರೋಪದ ಮೇಲೆ ಗಾಜಿಯಾಬಾದ ಜಿಲ್ಲೆಯ ಮೋದಿನಗರದಿಂದ ಉಮೇಶ ಶರ್ಮಾ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹತ್ಯೆಗೀಡಾದ ಅಂಕಿತ ಖೋಕರ ಕೆಲವು ವರ್ಷಗಳ ಹಿಂದೆ ಅವರ ಪೋಷಕರು ನಿಧನರಾದಾಗಿನಿಂದ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಮತ್ತು ಲಖನೌ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ವಿದ್ವಾಂಸರಾಗಿದ್ದರು.
ಅಂಕಿತ ಖೋಕರ ಇತ್ತೀಚೆಗೆ ಬಾಗಪತ್‌ನಲ್ಲಿರುವ ತನ್ನ ಪೂರ್ವಜರ ಜಮೀನನ್ನು ಮಾರಾಟ ಮಾಡಿ ಅದರಿಂದ ₹ 1 ಕೋಟಿ ಸಿಕ್ಕಿತ್ತು. ಇದರ ಮೇಲೆ ಕೊಲೆಗಾರ ಕಣ್ಣಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪರ್ವೇಶ ಎಂದು ಗುರುತಿಸಲಾದ ಹಂತಕನ ಸ್ನೇಹಿತನನ್ನು ಸಹ ಪ್ರಕರಣದಲ್ಲಿ ಬಂಧಿಸಲಾಗಿದೆ.
ಸ್ನೇಹಿತರ ಕರೆಗಳಿಗೆ ಅಂಕಿತ ಖೋಕರ ವಾರಗಟ್ಟಲೇ ಉತ್ತರಿಸದೇ ಇದ್ದಾಗ ಅನುಮಾನಗೊಂಡ ಆತನ ಸ್ನೇಹಿತರು ಆತನನ್ನು ಹುಡುಕಲು ಪ್ರಯತ್ನಿಸಿದ ನಂತರ ಪೊಲೀಸರಿಗೆ ದೂರು ನೀಡಿದ್ದರು.
ಕೆಲವು ದಿನದ ನಂತರ ಅಂಕಿತ ಫೋನ್ ನಿಂದ ಸಂದೇಶಗಳನ್ನು ಸ್ವೀಕರಿಸಲು ಪ್ರಾರಂಭಿಸಿದಾಗ, ಸಂಭಾಷಣೆಯ ಶೈಲಿಯು ಅವರದಲ್ಲ ಎಂದು ಗೊತ್ತಾದ ಮೇಲೆ ಅನುಮಾನ ದಟ್ಟವಾಯಿತು.
ಅಕ್ಟೋಬರ 6 ರಂದು ಅಂಕಿತ ಖೋಕರ ಅವರನ್ನು ಆರೋಪಿ ಉಮೇಶ ಶರ್ಮಾ ಕತ್ತು ಹಿಸುಕಿ ಕೊಂದಿರುವುದು ತನಿಖೆಯಲ್ಲಿ ಬಯಲಾಗಿದೆ.
ಗರಗಸದಿಂದ ದೇಹವನ್ನು ಕನಿಷ್ಠ ಮೂರು ಭಾಗಗಳಾಗಿ ಕತ್ತರಿಸಿ ಅವುಗಳನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಪ್ಯಾಕ್ ಮಾಡಿ, ಒಂದು ಭಾಗವನ್ನು ಮುಜಫರನಗರದ ಖತೌಲಿಯಲ್ಲಿ ಕಾಲುವೆಯಲ್ಲಿ, ಇನ್ನೊಂದು ಭಾಗವನ್ನು ಮಸ್ಸೂರಿ ಕಾಲುವೆಯಲ್ಲಿ ಮತ್ತು ಒಂದು ಭಾಗವನ್ನು ಎಕ್ಸಪ್ರೆಸ್ ವೇನಲ್ಲಿ ಎಸೆದಿದ್ದ ಎಂದು ಆರೋಪಿಸಲಾಗಿದೆ.ತನಿಖೆಯಲ್ಲಿ ಮೃತದೇಹದ ಭಾಗಗಳು ಪತ್ತೆಯಾಗಬೇಕಿವೆ.