ಅಂಕೋಲಾ: ಕಾಡುಹಂದಿ ಮಾಂಸವೆಂದು ಜನರನ್ನು ನಂಬಿಸಿ ನಾಯಿ ಮಾಂಸ ಮಾರಾಟ ಮಾಡುತ್ತಿದ್ದ ಪ್ರಕರಣ ಕಾರವಾರ ಜಿಲ್ಲೆಯ ಅಂಕೋಲಾ ತಾಲೂಕಿನ ಮೊಗಟಾ ಮತ್ತು ಹಿಲ್ಲೂರು ಭಾಗದಲ್ಲಿ ಬೆಳಕಿಗೆ ಬಂದಿದೆ. ನಿಜಾಂಶ ತಿಳಿದ ನಂತರ ಸಾರ್ವಜನಿಕರು ನಾಯಿ ಮಾಂಸ ತಿನ್ನಿಸಿದ ಯುವಕರನ್ನು ಹಿಡಿದು ಮನಬಂದಂತೆ ಥಳಿಸಿದ್ದಾರೆ.
ಯಾರು ಕಾಡು ಹಂದಿ ಮಾಂಸ ಬೇಕು ಎನ್ನುತಾರೋ ಅಂತವರನ್ನು ಈ ಆರೋಪಿಗಳು ಮೊದಲು ಟಾರ್ಗೆಟ್ ಮಾಡಿದ್ದಾರೆ. ಮೊಗಟಾ ಹಾಗೂ ಹಿಲ್ಲೂರು ಭಾಗದಲ್ಲಿ ಅಲೆಮಾರಿ ಜನಾಂಗದ ಯುವಕರಿಬ್ಬರು ಕಾಡುಹಂದಿ ಮಾಂಸ ಎಂದು ಜನರನ್ನು ನಂಬಿಸಿ ನಾಯಿ ಮಾಂಸ ಮಾರಾಟದಲ್ಲಿ ತೊಡಗಿದ್ದರು. ಹೀಗೆ ನಂಬಿಸಿ ಹತ್ತಾರು ಮನೆಗಳಿಗೆ ನಾಯಿ ಮಾಂಸವನ್ನು ತಿನ್ನಿಸಿ ಹಣ ಮಾಡಿದ್ದಾರೆ. ಆದರೆ ಈ ಬಗ್ಗೆ ಜನರಿಗೆ ಇದು ಕಾಡು ಹಂದಿ ಮಾಂಸ ಅಲ್ಲ ಎಂಬ ಅನುಮಾನ ಬಂದಿದೆ. ನಂತರ ಆರೋಪಿಗಳಿಗೆ ಮತ್ತೆ ಮಾಂಸ ತರುವಂತೆ ಕೇಳಿದ್ದಾರೆ. ಇದಕ್ಕೆ ಒಪ್ಪಿದ ಆರೋಪಿಗಳು ಸಮಯ ನೋಡಿಕೊಂಡು ನಾಯಿ ಹಿಡಿಯುಲು ಹೋಗಿದ್ದಾರೆ. ಮೊದಲೇ ಅನುಮಾನಗೊಂಡಿದ್ದ ಗ್ರಾಮಸ್ಥರು ನಾಯಿ ಹಿಡಿಯುವ ವೇಳೆ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಿಚಾರಿಸಿದ್ದಾರೆ.
ಆರಂಭದಲ್ಲಿ ತಪ್ಪೊಪ್ಪಿಕೊಳ್ಳದ ಇಬ್ಬರಿಗೂ ಊರ ಜನರೆಲ್ಲ ಕೂಡಿಕೊಂಡು ಥಳಿಸಿದ್ದಾರೆ. ನಿಜ ಹೇಳುವಂತೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಇಬ್ಬರು ಆರೋಪಿಗಳು ಕಾಡು ಹಂದಿ ಮಾಂಸದ ಬದಲಾಗಿ ನಾಯಿ ಮತ್ತು ಊರ ಹಂದಿ ಮಾಂಸ ನೀಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾರೆ. ಗ್ರಾಮಸ್ಥರು ನಂತರ ಪೊಲೀಸರಿಗೆ ಅವರನ್ನು ಒಪ್ಪಿಸಿದ್ದಾರೆ.
ಈ ಬಂಧಿತ ಯುವಕರು ಬೇರೆಡೆ ನಾಯಿಗಳನ್ನು ಹಿಡಿದು ಕೊಂದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದರು. ಮಾಂಸದ ವಿಚಾರವಾಗಿ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದ ವೇಳೆ ಅವರು ಇತರ ಹಲವೆಡೆ ನಾಯಿಗಳನ್ನು ಹಿಡಿಯುತ್ತಿದ್ದ ವಿಚಾರ ಸಹ ಬೆಳಕಿಗೆ ಬಂದಿದೆ.