ಮಹಿಳೆ ವಿವಸ್ತ್ರ ಪ್ರಕರಣ: ಘಟನೆ ತಡೆಯಲು ಯತ್ನಿಸಿದವರನ್ನು ಗೌರವಿಸಿದ ಪೊಲೀಸ್ ಇಲಾಖೆ

A B Dharwadkar
ಮಹಿಳೆ ವಿವಸ್ತ್ರ ಪ್ರಕರಣ: ಘಟನೆ ತಡೆಯಲು ಯತ್ನಿಸಿದವರನ್ನು ಗೌರವಿಸಿದ ಪೊಲೀಸ್ ಇಲಾಖೆ

ಬೆಳಗಾವಿ, 30:  ದೇಶಾದ್ಯಂತ ಸುದ್ದಿಯಾಗಿದ್ದ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದ ಮಹಿಳೆಯ ಬೆತ್ತಲೆ ಪ್ರಕರಣ ನಡೆಯುತ್ತಿದ್ದ ವೇಳೆ ಹಲ್ಲೆ ಮಾಡುವುದನ್ನು ತಡೆಯಲು ಯತ್ನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದ ಮೂವರು ಮತ್ತು ಮಾಹಿತಿ ದೊರೆತ ತಕ್ಷಣ ಕ್ರಮ ಜರುಗಿಸಿದ ಪೊಲೀಸ್ ಸಿಬ್ಬಂದಿಯನ್ನು ಗೃಹ ಇಲಾಖೆಯ ಪರವಾಗಿ ಪೊಲೀಸರು ಸನ್ಮಾನಿಸಿ, ಪ್ರಶಂಸನೀಯ ಪತ್ರ ನೀಡಿ ಅಭಿನಂದಿಸಿದ್ದಾರೆ.

ಶನಿವಾರ ಮುಂಜಾನೆ ನಗರದ ಪೊಲೀಸ್ ಮೈದಾನದಲ್ಲಿ ಪೊಲೀಸರ ಪರೇಡ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗ ವಂಟಮುರಿ ಮಹಿಳೆ ವಿವಸ್ತ್ರ ಘಟನೆಯ ತಡೆಯಲು ಯತ್ನಿಸಿದ್ದ ವಂಟಮೂರಿ ಗ್ರಾಮದ ನಿವಾಸಿಗಳಾದ  ಜಹಾಂಗೀರ ತಹಶೀಲ್ದಾರ, ವಾಸೀಮ ಮಕಾನದಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ ಹೊಳ್ಳಿಕಾರ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನದ ವೇಳೆ ನ್ಯಾಯಾಲಯವು ನೀಡಿದ್ದ ಪ್ರಶಂಸನೀಯ ಪತ್ರವನ್ನು ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಅವರು ಜಹಾಂಗೀರ ಎಂಬುವವರಿಗೆ ನೀಡಿ ಗೌರವಿಸಿದರು. ಮೂವರಿಗೆ ತಲಾ ಐದು ಸಾವಿರ ರೂಪಾಯಿ ನಗದು ಬಹುಮಾನವನ್ನು ಕೂಡ ವಿತರಿಸಲಾಯಿತು.

ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿ, ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದ ಕಾಕತಿ ಠಾಣೆಯ ಪಿಎಸ್ಐ ಮಂಜುನಾಥ ಹುಲಕುಂದ ಸೇರಿ ಆರು ಜನ ಸಿಬ್ಬಂದಿಗೆ ಇದೇ ವೇಳೆ ಸನ್ಮಾನಿಸಲಾಯಿತು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ, “ವಂಟಮೂರಿ ಗ್ರಾಮದಲ್ಲಿ ನಡೆದಿದ್ದ ಘಟನೆ ತಡೆದವರಿಗೆ ಸನ್ಮಾನ ಮಾಡಿದ್ದೇವೆ. ವಂಟಮೂರಿ ಗ್ರಾಮದ ಮೂವರು ಸಾರ್ವಜನಿಕರಿಗೆ ಸನ್ಮಾನ ಮಾಡಿದ್ದೇವೆ. ಕೋರ್ಟ ನೀಡಿದ್ದ ಪ್ರಶಂಸನೀಯ ಪತ್ರ ಕೂಡ ನೀಡಿ ಗೌರವಿಸಿದ್ದೇವೆ. ಕಾಕತಿ ಠಾಣೆ ಪಿಎಸ್ಐ ಸೇರಿ ಆರು ಜನರಿಗೆ ಸನ್ಮಾನ ಮಾಡಿದ್ದೇವೆ. ಪಿಎಸ್ಐಗೆ ಐದು ಸಾವಿರ ನಗದು, ಉಳಿದು ಐದು ಜನ ಸಿಬ್ಬಂದಿಗೆ ನಾಲ್ಕು ಸಾವಿರ ಬಹುಮಾನ ನೀಡಿದ್ದೇವೆ” ಎಂದು  ಹೇಳಿದರು.

“ಮಾಹಿತಿ ನೀಡಿದ್ದ ಮೂರು ಜನ ಸಾರ್ವಜನಿಕರಿಗೆ ಏನೂ ಆಗದಂತೆ ರಕ್ಷಣೆ ನೀಡುತ್ತೇವೆ‌. ಅಪರಾಧ ಘಟನೆಗಳು ನಡೆಯುವಾಗ ಭಯ ಪಡದೇ ಪೊಲೀಸರಿಗೆ ಮಾಹಿತಿ ನೀಡಿ” ಎಂದು ಕಮಿಷನರ್ ಇದೇ ವೇಳೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರಕರಣವೇನು ?
———————
ಕಳೆದ ಡಿಸೆಂಬರ 11ರಂದು ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಪ್ರೇಮಿಗಳು ಓಡಿ ಹೋಗಿದ್ದರಿಂದ ಆಕ್ರೋಶಗೊಂಡ ಯುವತಿಯ ಕುಟುಂಬಸ್ಥರು, ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಅಮಾನವೀಯ ವರ್ತನೆ ತೋರಿದ್ದರು. ಬೆತ್ತಲೆಗೊಳಿಸಿ, ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಲಾಗಿತ್ತು. ಬಳಿಕ ಘಟನೆಗೆ ಸಂಬಂಧಪಟ್ಟಂತೆ 7 ಜನರನ್ನು ಪೊಲೀಸರು ಬಂಧಿಸಿದ್ದರು.

ಈ ವರೆಗೆ ಒಟ್ಟು ನಾಲ್ವರು ಮಹಿಳೆ, ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ಒಟ್ಟು 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯು ದೇಶಾದ್ಯಂತ ಸುದ್ದಿಯಾಗಿತ್ತು. ಈ ಪ್ರಕರಣವನ್ನು ಸದ್ಯ ರಾಜ್ಯ ಸರ್ಕಾರವು ಸಿಐಡಿಗೆ ವಹಿಸಿದ್ದು, ತನಿಖೆ ನಡೆಸಲಾಗುತ್ತಿದೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದಾಗಲೇ ಈ ಘಟನೆ ನಡೆದಿದ್ದರಿಂದ ರಾಜ್ಯವೇ ತಲೆತಗ್ಗಿಸುವಂತಾಗಿತ್ತು. ಘಟನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.