ಬೆಳಗಾವಿ : ಕಳೆದ ಸೆಪ್ಟೆಂಬರ್ 16 ರಾತ್ರಿ ಕ್ಯಾಂಪ್ ನ ಮದ್ರಾಸ್ ಸ್ಟ್ರೀಟ್ ನಲ್ಲಿನ ತಮ್ಮ ಮನೆಯಲ್ಲಿ ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮದಲ್ಲಿದ್ದ ಸುಧೀರ ರಾಮದಾಸ ಕಾಂಬ್ಳೆ ಅವರ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಅವರ ಪತ್ನಿ ರೋಹಿಣಿ, ಮಗಳು ಶ್ರೇಯಾ ಮತ್ತು ರೋಹಿಣಿಯ ಸ್ನೇಹಿತ ಅಕ್ಷಯ ಅವರನ್ನು ವಶಕ್ಕೆ ಪಡೆದಿದ್ದಾರೆ.
ಕ್ಯಾಂಪ್ ಪ್ರದೇಶದ ಮೀನು ಮಾರುಕಟ್ಟೆಯ ಹಿಂದಿರುವ ಮದ್ರಾಸ್ ಸ್ಟ್ರೀಟ್ ನ ಕಟ್ಟಡದ 3ನೇ ಅಂತಸ್ತಿನಲ್ಲಿ ವಾಸವಾಗಿದ್ದ ಸುಧೀರ ಕಾಂಬ್ಳೆ ಅವರನ್ನು ಅವರು ಮಲಗುವ ಕೋಣೆಯಲ್ಲಿ ಎದೆ ಮತ್ತು ಕೈಗಳಿಗೆ ಹೊಡೆದು ಹತ್ಯೆ ಮಾಡಲಾಗಿತ್ತು.
ಕೈಗಳ ನರಗಳು ಕತ್ತರಿಸಿದ್ದರಿಂದ ತೀವ್ರ ರಕ್ತಸ್ರಾವವಾಗಿ ಅವರು ಮಲಗಿದ್ದ ಸ್ಥಿತಿಯಲ್ಲೇ ಮೃತರಾಗಿದ್ದರು. ಮಕ್ಕಳಾದ ಶ್ರೇಯಾ ಮತ್ತು ಶ್ರೇಯಸ್ ಅವರೊಂದಿಗೆ ಬೇರೊಂದು ಕೋಣೆಯಲ್ಲಿ ಮಲಗಿದ್ದ ಅವರ ಪತ್ನಿ ರೋಹಿಣಿಯು ಪತಿ ರಾತ್ರಿ ಮನೆಗೆ ತಡವಾಗಿ ಬರುತ್ತಿದ್ದುದರಿಂದ ನಾನು ಮನೆಯ ಮುಖ್ಯ ಬಾಗಿಲನ್ನು ತೆರೆದಿಟ್ಟು ಮಕ್ಕಳೊಂದಿಗೆ ಇನ್ನೊಂದು ಕೋಣೆಯಲ್ಲಿ ಮಲಗಿದ್ದೆ. ಮುಂಜಾನೆ ಪತಿಯನ್ನು ಎಬ್ಬಿಸಲು ಹೋಗಿದ್ದಾಗ ಅವರು ಮೃತರಾಗಿರುವದು ಕಂಡು ಬಂತು. ಎದೆ ಮತ್ತು ಕೈಗಳ ಮೇಲೆ ತೀವ್ರವಾದ ಗಾಯಗಳಾಗಿದ್ದವು. ಅಲ್ಲದೇ ಬಚ್ಚಲು ಮತ್ತು ಮನೆಯ ಮೆಟ್ಟಲುಗಳ ಮೇಲೆ ರಕ್ತದ ಕಲೆಗಳು ಕಂಡು ಬಂದಿದ್ದವು ಎಂದು ಪೊಲೀಸರಿಗೆ ತಿಳಿಸಿದ್ದಳು, ತಮಗೆ ಯಾರ ಮೇಲೆಯೂ ಸಂಶಯವಿಲ್ಲವೆಂದು ಅವರ ವ್ಯವಹಾರದ ಕುರಿತೂ ಹೆಚ್ಚಿನ ಮಾಹಿತಿ ಇಲ್ಲವೆಂದೂ ಆಕೆ ತಿಳಿಸಿದ್ದಳು.
ಮನೆಯ ಸುತ್ತಲಿನ ಸಿಸಿ ಕ್ಯಾಮೆರಾಗಳ ದೃಶ್ಯ ಪರಿಶೀಲಿಸಿ ತನಿಖೆ ಮಾಡಿದ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದ ತಂಡ ರೋಹಿಣಿ ಮತ್ತು ಮಗಳು ಶ್ರೇಯಾ ಅವರನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿದಾಗ ಸತ್ಯ ಬಹಿರಂಗಗೊಂಡಿದೆ.
ಅಕ್ಷಯ ಎಂಬವನೊಂದಿಗೆ ರೋಹಿಣಿ ಅನೈತಿಕ ಸಂಬಂಧ ಹೊಂದಿದ್ದಳು. ಕೊಲೆಯಾದ ದಿನ ಅಕ್ಷಯನನ್ನು ಮನೆಯಲ್ಲಿ ಅಡಗಿಸಿಟ್ಟು ಮನೆಯ ಮುಖ್ಯ ಬಾಗಿಲನ್ನು ರೋಹಿಣಿ ಹಾಕಿರಲಿಲ್ಲ. ರಾತ್ರಿ ಸುಮಾರು 11 ಗಂಟೆಗೆ ಮನೆಗೆ ಬಂದ ಸುಧೀರನ ಮೇಲೆ ಪತ್ನಿ, ಮಗಳು ಮತ್ತು ಪತ್ನಿಯ ಪ್ರಿಯಕರ ಅಕ್ಷಯ ಚಾಕುವಿನಿಂದ ಹಲ್ಲೆ ಮಾಡಿ, ಕೊಂದು ಹಾಕಿದೆವು ಎಂದು ಪೊಲೀಸರ ಮುಂದೆ ರೋಹಿಣಿ ತಪ್ಪೊಪ್ಪಿಕೊಂಡಿದ್ದಾಳೆ.
ಕೊಲ್ಲಿ ರಾಷ್ಟ್ರದಲ್ಲಿ ನೌಕರಿಯಲ್ಲಿದ್ದ ಸುಧೀರ ಕಾಂಬ್ಳೆ ತನ್ನ ಕುಟುಂಬದ ಖರ್ಚಿಗೆ ಸಾಕಷ್ಟು ಹಣ ವಿದೇಶದಿಂದ ಕಳಿಸುತ್ತಿದ್ದ ಎನ್ನಲಾಗಿದ್ದು, ಕೊರೋನಾ ಮಹಾಮಾರಿಯ ಕಾರಣ ಎರಡು ವರ್ಷಗಳ ಹಿಂದೆ ಭಾರತಕ್ಕೆ ಬಂದು ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಕೆಲಸದಲ್ಲಿ ತೊಡಗಿಕೊಂಡಿದ್ದ. ಭಾರತಕ್ಕೆ ಬಂದ ನಂತರ ಪತ್ನಿ ಮತ್ತು ಮಗಳಿಗೆ ಕೆಲವೊಂದು ಕಟ್ಟಳೆಗಳನ್ನು ವಿಧಿಸಿದ್ದರಿಂದ ಅವರು ಕೋಪಗೊಂಡಿದ್ದರೆಂದೂ ತಿಳಿದು ಬಂದಿದೆ.
ಆದರೆ, ಮದ್ಯಪಾನದ ದಾಸರಾಗಿದ್ದ ಸುಧೀರ ಯಾವಾಗಲೂ ಹೆಂಡತಿ ಮಕ್ಕಳೊಂದಿಗೆ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದ, ಆತನ ಮಾನಸಿಕ ದೈಹಿಕ ಹಿಂಸೆಗೆ ಬೇಸತ್ತು ತನ್ನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಅಕ್ಷಯ ಎಂಬವನ ಸಹಾಯ ಪಡೆದು ಕೊಲೆ ಮಾಡಿದೆವು ಎಂದು ಅವರೆಲ್ಲ ತಪ್ಪು ಒಪ್ಪಿಕೊಂಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೆಂಡತಿಯಿಂದಲೇ ಹತ್ಯೆಯಾದ ಎರಡನೇ ಪ್ರಕರಣ
ಇನ್ನು ಕಳೆದ ಮಾರ್ಚ 15 ರಂದು ಟಿಲಕವಾಡಿಯ ಮಂಡೊಳ್ಳಿ ರಸ್ತೆಯ ತಮ್ಮ ಮನೆಯ ಮುಂದೇ ಹತ್ಯೆಯಾದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಕ್ರಿಯವಾಗಿದ್ದ ರವಿ ಮಲ್ಲಪ್ಪ ದೊಡ್ಡಬೊಮ್ಮಪ್ಪನವರ ಪ್ರಕರಣ ಹಸಿರಿರುವಾಗಲೇ ಕ್ಯಾಂಪ್ ನ ಮೀನು ಮಾರುಕಟ್ಟೆ ಹಿಂದಿರುವ ಮನೆಗೇ ನುಗ್ಗಿ ಸುಧೀರ ಕಾಂಬಳೆ ಎಂಬ 57 ವರ್ಷದ ವ್ಯಕ್ತಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಇವೆರಡೂ ಕೊಲೆ ಪ್ರಕರಣಗಳೂ ರಿಯಲ್ ಎಸ್ಟೇಟ ಉದ್ಯಮಿಗಳದ್ದಾಗಿವೆ ಎಂಬುದು ಗಮನಾರ್ಹ.
ಕಳೆದ ಮಾರ್ಚ 15 ರಂದು ಮುಂಜಾನೆ ಸುಮಾರು ಆರು ಗಂಟೆಗೆ ಟಿಳಕವಾಡಿಯ ಮಂಡೊಳ್ಳಿ ರಸ್ತೆಯ ಭವಾನಿ ನಗರದ ತಮ್ಮ ಮನೆಯಿಂದ ಬಂದ ರವಿ ಅವರನ್ನು ಅವರ ಕಾರಿನ ಬಳಿ ಅಡಗಿ ಕಾಯುತ್ತಿದ್ದ ಇಬ್ಬರು ಬಾಡಿಗೆ ಹಂತಕರು ಮುಖದ ಮೇಲೆ ಕಾರದ ಪುಡಿ ಎರಚಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿ, ಕೊಂದಿದ್ದರು.
ತನಿಖೆಯಲ್ಲಿ ಅವರ ಎರಡನೇ ಪತ್ನಿ ಕಿರಣ ಎಂಬುವಳು ಬಾಡಿಗೆ ಹಂತಕರನ್ನು ಗೊತ್ತು ಮಾಡಿ ಪತಿಯನ್ನು ಕೊಲ್ಲಿಸಿದ್ದು ಗೊತ್ತಾಗಿತ್ತು. ಮದುವೆಯ ನಂತರ ಕಿರಣಗೇ ಪತಿ ರವಿ ಈ ಮುಂಚೆ ವಿವಾಹವಾಗಿದ್ದು ಅದನ್ನು ತಮ್ಮಿಂದ ಬಚಿಟ್ಟಿದ್ದ ವಿಷಯ ಗೊತ್ತಾಗಿತ್ತು.
ಪತಿಯ ಪೂರ್ವಚರ ತಿಳಿಯಲು ಖಾಸಗಿ ತನಿಖಾ ಸಂಸ್ಥೆಯ ಮೊರೆ ಹೋಗಿದ್ದ ಕಿರಣಗೆ ಮತ್ತೊಂದು ಅಘಾತವುಂಟಾಗಿತ್ತು. ಪತಿ ರವಿ ತಮ್ಮ ಮತ್ತೊಂದು ಮದುವೆ ಮಾಡಿಕೊಂಡಿದ್ದು ಅವಳು ಗರ್ಭಿಣಿಯಾಗಿರುವ ಮಾಹಿತಿ ದೊರೆತಿತ್ತು.
ತಮಗೆ ಮೋಸ ಮಾಡಿರುವ ರವಿಯನ್ನು ಬಿಡಬಾರದೆಂದು ನಿರ್ಧರಿಸಿದ ಕಿರಣ ಪತಿಯ ವ್ಯವಹಾರದ ಪಾಲುದಾರರಾದ ಹಿಂದವಾಡಿಯ ಶಶಿಕಾಂತ ಶಂಕರಗೌಡ ಮತ್ತು ಖಾಸಬಾಗ ಓಂ ನಗರದ ಧರನೇಂದ್ರ ಗಂಟಿ ಅವರನ್ನು ಕರೆಸಿಕೊಂಡು ಪತಿ ರವಿಯನ್ನು ಮುಗಿಸುವ ಸಂಚಿನ ಕುರಿತು ಚರ್ಚಿಸಿ ಅವರ ಒಪ್ಪಿಗೆ ಪಡೆದು ಮುಂದುವರಿಯಲು ಸೂಚಿಸುತ್ತಾರೆ. ವ್ಯವಹಾರದಲ್ಲಿ ರವಿಯೊಂದಿಗೆ ಘರ್ಷಣೆ ಹೊಂದಿದ್ದ ಅವರಿಬ್ಬರೂ ಒಪ್ಪಿ ಇಬ್ಬರು ಬಾಡಿಗೆ ಹಂತಕರನ್ನು ಗೊತ್ತು ಮಾಡಿ 10 ಲಕ್ಷ ರೂಪಾಯಿಗೆ ವ್ಯವಹಾರ ಕುದುರಿಸುತ್ತಾರೆ.
ರಾಜು ಹತ್ಯೆಯ ಗುತ್ತಿಗೆಯನ್ನು ಸಂಜಯ ರಜಪೂತ ಮತ್ತು ವಿಜಯ ಜಾಗೃತ ಎಂಬವರಿಗೆ ನೀಡಲಾಗುತ್ತದೆ, ಹತ್ಯೆಗೆ 10 ಲಕ್ಷ ರೂಪಾಯಿ ಪಡೆದ ಅವರು ಬೇರೆ ಬಾಡಿಗೆ ಹಂತಕರಿಗೆ ಕಡಿಮೆ ಮೊತ್ತಕ್ಕೆ ಹತ್ಯೆಯ ಗುತ್ತಿಗೆ ಕೊಟ್ಟು ತಮ್ಮ ಕಾರ್ಯ ಮುಗಿಸಿಕೊಳ್ಳುತ್ತಾರೆ.
ಹತ್ಯೆಗೂ ಮತ್ತು ರಿಯಲ್ ಎಸ್ಟೇಟ್ ಉದ್ಯಮಕ್ಕೂ ಸಂಬಂಧವಿಲ್ಲದಿದ್ದರೂ ಇತ್ತೀಚೆಗೆ ಈ ಕ್ಷೇತ್ರದಲ್ಲಿ ಸುಲಭವಾಗಿ ಕೋಟ್ಯಂತರ ಹಣ ಸಂಪಾದಿಸಬಹುದೆಂದು ಈ ಮೊದಲು ರೌಡಿಗಳಾಗಿದ್ದ ಕೆಲವರು ಕ್ಷೇತ್ರ ಪ್ರವೇಶಿಸಿ ಅಸಹಾಯಕರ, ವಿವಾದದಲ್ಲಿರುವ ಭೂಮಿಗಳನ್ನು ಅತಿಕ್ರಮಿಸಿಕೊಂಡ ಪ್ರಕರಣಗಳೂ ಕೇಳಿ ಬಂದಿದ್ದವು.