ಸಮದರ್ಶಿ ವಿಶೇಷ
ಚಿಕ್ಕೋಡಿ, ೧೭- ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಆಶ್ರಮದ ಜೈನ ಮುನಿ ಕಾಮಕುಮಾರ ಅವರ ಹಂತಕರ ಪೊಲೀಸ್ ಕಸ್ಟಡಿ ಸೋಮವಾರ ಮುಕ್ತಾಯಗೊಳ್ಳಲಿದ್ದು ತನಿಖೆ ಮತ್ತು ವಿಚಾರಣೆ ಮುಗಿದದ್ದರಿಂದ ಪೊಲೀಸರು ಅವರನ್ನು ನ್ಯಾಯಾಂಗದ ವಶಕ್ಕೆ ನೀಡಲಿದ್ದಾರೆ.
ಈ ಕುರಿತು ಸಮದರ್ಶಿ ಗೆ ಮಾಹಿತಿ ನೀಡಿದ ಮುಖ್ಯ ತನಿಖಾಧಿಕಾರಿ, ಚಿಕ್ಕೋಡಿ ಉಪ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ ಯಲಿಗಾರ ಅವರು, ನ್ಯಾಯಾಲಯ ವಶಕ್ಕೆ ನೀಡಿದ ಅವಧಿಯಲ್ಲೇ ಇಬ್ಬರೂ ಹಂತಕರ ವಿಚಾರಣೆ ಪೂರ್ಣಗೊಳಿಸಲಾಗಿದೆ. ಹಾಗಾಗಿ ಪುನಃ ಪೊಲೀಸ್ ಕಸ್ಟಡಿಯ ಅಗತ್ಯವಿಲ್ಲ. ಅವರನ್ನು ಚಿಕ್ಕೋಡಿಯ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ಮುಂದೆ ಇಂದೇ ಹಾಜರು ಪಡಿಸಲಾಗುವುದು ಎಂದು ತಿಳಿಸಿದರು.
ಮುನಿಗಳ ಹತ್ಯೆಗೆ ಹಣಕಾಸಿನ ವ್ಯವಹಾರವೇ ಪ್ರಮುಖ ಕಾರಣ. ಪ್ರಮುಖ ಹಂತಕ ನಾರಾಯಣ ಮಾಳಿಯು ಮುನಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ. ಮುನಿಗಳು ಕಟ್ಟಿದ್ದ ಆಶ್ರಮ ಶಾಲೆಗೆ ಅವನೇ ಮರಳು ಪೂರೈಸಿದ್ದ. ಇದಕ್ಕೆ ಮುನಿಗಳೇ ಮುಂಗಡ ಹಣ ಪಾವತಿ ಮಾಡುತ್ತಿದ್ದರು. ಆಶ್ರಮ ಶಾಲೆಗೆ ಮರಳು ಸಾಗಿಸಿ ಅನುಭವ ಹೊಂದಿದ್ದ ಅವನು, ಮರಳು ಸಾಗಾಣಿಕೆ ವ್ಯವಹಾರಕ್ಕಿಳಿದ. ಇದಕ್ಕೆ ಬೇಕಾದ ಹಣವನ್ನು ಸಹ ಸಾಲದ ರೂಪದಲ್ಲಿ ಮುನಿಗಳಿಂದ ಪಡೆದಿದ್ದ. ಹೀಗೆ ಪಡೆದ ಸಾಲದ ಮೊತ್ತ 6 ಲಕ್ಷ ರೂಪಾಯಿಯಾದಾಗ ಮುನಿಗಳು ಸಾಲ ಹಿಂದಿರುಗಿಸಲು ಒತ್ತಾಯಿಸತೊಡಗಿದರು. ಇದರಿಂದ ಅವನು ಕಿರಿಕಿರಿಗೊಳ್ಳುತ್ತಿದ್ದ.
ಈ ನಡುವೆ ಅವನು ತನಗೆ ಪರಿಚಯವಿದ್ದವರ ಹೆಸರಿನಲ್ಲೂ ಮುನಿಗಳಿಂದ ಸಾಲ ಪಡೆದುಕೊಂಡಿದ್ದ. ಆದರೆ ಯಾರ ಹೆಸರಿನಲ್ಲಿ ಪಡೆದುಕೊಂಡಿದ್ದನೋ ಅವರಿಗೇನೇ ಇದರ ಮಾಹಿತಿ ಇರಲಿಲ್ಲ. ಹೀಗೆ ಬೇರೊಬ್ಬರ ಹೆಸರಲ್ಲಿ ಪಡೆದ ಸಾಲವೇ ಕೆಲವು ಲಕ್ಷ ರೂಪಾಯಿಗಳಷ್ಟಿತ್ತು. ಆ ಹಣದಿಂದ ಅವನು ನದಿಯಿಂದ ಮರಳು ತೆಗೆಯಲು ಒಂದು ಜೆಸಿಬಿಯನ್ನೂ ಸಹ ಖರೀದಿಸಿದ್ದ.
ಹಂತಕ ಮಾಳಿ ತಮಗೆ ಗೊತ್ತಿಲ್ಲದೇ ತಮ್ಮ ಹೆಸರಲ್ಲೂ ಸಾಲ ಪಡೆದ ವಿಷಯ ಗೊತ್ತಾಗಿ ದೊಡ್ಡ ಜಗಳ, ವಿವಾದಕ್ಕೂ ಕಾರಣವಾಗಿತ್ತು. “ಮುನಿಗಳು ನನಗೆ ತುಂಬಾ ಹತ್ತಿರದವರು, ನಿಮ್ಮೆಲ್ಲರ ಹೆಸರಲ್ಲಿ ನಾನು ಪಡೆದ ಸಾಲದ ಕುರಿತು ಈಗಷ್ಟೇ ಅವರಿಗೆ ತಿಳಿದಿದೆ. ನಾನೇ ಎಲ್ಲ ಸಾಲ ತೀರಿಸುತ್ತೇನೆ. ನಿಮಗೇನೂ ತೊಂದರೆಯಾಗುವುದಿಲ್ಲ ಎಂದು ಅವನು ಅವರೆಲ್ಲರನ್ನು ಸುಮ್ಮನಾಗಿಸಿದ್ದ.
ಅವನು ಪಡೆದ 6 ಲಕ್ಷ ರೂಪಾಯಿ ಸಾಲವಲ್ಲದೇ ಬೇರೆಯವರ ಹೆಸರಲ್ಲೂ ಸಾಲ ಪಡೆದ ಒಟ್ಟು ಮೊತ್ತ ಹಲವು ಲಕ್ಷವಾಗಿದ್ದರಿಂದ ಮುನಿಗಳು ಹಣ ಹಿಂದಿರುಗಿಸಲು ಒತ್ತಡ ತೀವ್ರಗೊಳಿಸಿದ್ದಾರೆ. ಇದರಿಂದ ಕುಪಿತಗೊಂಡ ಅವನು ತನಗೆ ಪರಿಚಯವಿದ್ದ ಹಸನ್ ಢಾಲಾಯತ್ ಎಂಬವನ ನೆರವಿನಿಂದ ಮುನಿಗಳನ್ನು ಕಳೆದ ಜುಲೈ 6ರಂದು ರಾತ್ರಿ ಸುಮಾರು 10 ಗಂಟೆಗೆ ಆಶ್ರಮದಿಂದ ರಾಯಬಾಗ ತಾಲ್ಲೂಕಿನ ತನ್ನ ಸ್ವಗ್ರಾಮ ಖಟಕಬಾವಿಗೆ ಬೈಕ್ ವೊಂದರ ಮೇಲೆ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಅವರ ಕೊಲೆ ಮಾಡಿ, ಮಧ್ಯರಾತ್ರಿ ಶವವನ್ನು 6 ತುಂಡು ಮಾಡಿ ತನ್ನದೇ ತೋಟದಲ್ಲಿದ್ದ ಉಪಯೋಗದಲ್ಲಿರದ ಕೊಳವೆ ಬಾವಿಯೊಂದರಲ್ಲೇ ಎಸೆದಿದ್ದ.
ಸ್ವಾಮಿಗಳು ಆಶ್ರಮದಿಂದ ಕಾಣೆಯಾದ ಕುರಿತು ಆಚಾರ್ಯ ಕಾಮಕುಮಾರ ನಂದಿ ಆಶ್ರಮ ಚಾರಿಟೇಬಲ್ ಟ್ರಸ್ಟ ಅಧ್ಯಕ್ಷ ಭೀಮಪ್ಪ ಉಗಾರೆ ಜುಲೈ 8 ರಂದು ದೂರು ನೀಡಿದ್ದರು. ಇದಕ್ಕೂ ಮುಂಚೆಯೇ ಪೊಲೀಸರು ಮಿಂಚಿನ ತನಿಖೆ ನಡೆಸಿ ಇಬ್ಬರೂ ಹಂತಕರನ್ನು ವಶಕ್ಕೆ ಪಡೆದಿದ್ದರು. ಹಂತಕರೂ ಸಹ ಮುನಿಗಳ ಹತ್ಯೆ ಮಾಡಿರುವದಾಗಿ ಒಪ್ಪಿಕೊಂಡಿದ್ದರು. ಆದರೆ ಶವವನ್ನು ಒಂದು ತೆರೆದ ಬಾವಿಯಲ್ಲಿ ಹಾಕಿರುವದಾಗಿ ಮೊದಲು ಪೊಲೀಸರಿಗೆ ತಿಳಿಸಿದ್ದರು. ಅದರಂತೆ ಪೊಲೀಸರು ಪಂಪಸೆಟ್ ಮೂಲಕ ಬಾವಿಯ ನೀರನ್ನೆಲ್ಲ ಖಾಲಿ ಮಾಡಿದ್ದರು. ನಂತರ ಹಂತಕರು ಶವವನ್ನು ಕೃಷ್ಣಾ ನದಿಯಲ್ಲಿ ಎಸೆದಿರುವುದಾಗಿ ತಿಳಿಸಿದ್ದರು. ನದಿಯಲ್ಲಿ ಪರಿಶೀಲಿಸಿದಾಗ ನದಿ ಬತ್ತಿ ನೀರು ಅಲ್ಲಲ್ಲಿ ನಿಂತಿತ್ತೆ ಹೊರತು ಹರಿಯುತ್ತಿರಲಿಲ್ಲ.
ಅವರ ಸುಳ್ಳು ಹೇಳಿಕೆಗಳಿಂದ ತಾಳ್ಮೆ ಕಳೆದುಕೊಂಡ ಪೊಲೀಸರು, ತಮ್ಮದೇ ವಿಚಾರಣಾ ತಂತ್ರ ಬಳಸಿದಾಗ ಶವ ಎಸೆದ ನಿಜವಾದ ಸ್ಥಳ ತೋರಿಸಿದ್ದರು. ಪೊಲೀಸರು ಎರಡು ಜೆಸಿಬಿ ಬಳಸಿ ಅಗೆದು ಸುಮಾರು 25 ಅಡಿ ಮತ್ತು 40 ಅಡಿ ಆಳದಲ್ಲಿ ಶವದ ತುಂಡುಗಳನ್ನು ವಶಕ್ಕೆ ಪಡೆದುಕೊಂಡರು. ಶವದ ತುಂಡುಗಳನ್ನು ಸೀರೆ ಮತ್ತು ಟವೆಲ್ ನಲ್ಲಿ ಸುತ್ತಿ ಎಸೆಯಲಾಗಿತ್ತು.
ಮುನಿಗಳನ್ನು ಕರೆದುಕೊಂಡು ಹೋಗುವಾಗ ಅವರು ನಿತ್ಯ ಬರೆಯುತ್ತಿದ್ದ ಡೈರಿಯನ್ನೂ ಸಹ ಹಂತಕರು ತೆಗೆದುಕೊಂಡು ಹೋಗಿದ್ದರು. ನಾರಾಯಣ ಮಾಳಿ ಪಡೆದ ಸಾಲದ ಕುರಿತು ಅದರಲ್ಲಿ ಮುನಿಗಳು ಬರೆದಿದ್ದರು. ಅದನ್ನೂ ಹಂತಕರು ಸುಟ್ಟು ಹಾಕಿದ್ದರು. ಅದರ ಬೂದಿಯನ್ನು ಪೊಲೀಸರು ಪ್ರಕರಣದ ಸಾಕ್ಷಿಗಾಗಿ ಸಂಗ್ರಹಿಸಿದ್ದಾರೆ.