ಬೆಂಗಳೂರು, ೧೪- ಈ ಬಾರಿಯ ದಸರಾ ರಜೆ ಕೆಲ ಜಿಲ್ಲೆಗಳಲ್ಲಿ ನವರಾತ್ರಿ ಆರಂಭವಾದ ದಿನದಿಂದಲೇ ರಜೆ ಶುರುವಾಗಿದ್ದರೆ ಮತ್ತೆ ಕೆಲ ಜಿಲ್ಲೆಗಳಲ್ಲಿ ಅಕ್ಟೋಬರ 3 ರಿಂದ ದಸರಾ ರಜೆ ಘೋಷಿಸಲಾಗಿತ್ತು. ಅಲ್ಲದೇ ಕೊರೋನಾ ಸಂದರ್ಭದಲ್ಲಿ ಆದ ಶೈಕ್ಷಣಿಕ ವರ್ಷ ನಷ್ಟ ಭರಿಸುವ ಸಲುವಾಗಿ ರಜೆಯನ್ನು ಕಡಿತಗೊಳಿಸಲಾಗಿತ್ತು.
ಬೇಸಿಗೆ ರಜೆಯಲ್ಲಿ 15 ದಿನ ಹಾಗೂ ದಸರಾ ರಜೆಯಲ್ಲಿ 17 ದಿನ ಸೇರಿ ಒಟ್ಟು 37 ದಿನಗಳ ರಜೆಯನ್ನು ಕಡಿತಗೊಳಿಸಲಾಗಿದೆ. ಇದು ಪೋಷಕರು ಹಾಗೂ ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿತ್ತು.
ಇದೀಗ ಕೆಲ ಬಿಜೆಪಿ ಶಾಸಕರೇ ದಸರಾ ರಜೆಯನ್ನು ಅಕ್ಟೋಬರ 31 ರ ವರೆಗೆ ವಿಸ್ತರಣೆ ಮಾಡುವಂತೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗಿದೆ.
ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಪುಟ್ಟಣ್ಣ, ಸುಶೀಲ್ ನಮೋಶಿ ರಜೆ ಕಡಿತಗೊಳಿಸಿರುವುದು ಅವೈಜ್ಞಾನಿಕವಾಗಿದ್ದು, ಇದರ ವಿಸ್ತರಣೆಗೆ ಮಧ್ಯಪ್ರವೇಶಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಈಗ ಸರ್ಕಾರದ ಮುಂದಿನ ನಡೆ ಏನು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.