ಮುಧೋಳ : ದೆಹಲಿಯ ಶ್ರದ್ಧಾ ವಾಲ್ಕರ್ ಹತ್ಯೆ ಮಾಡಿ ಆಕೆಯ ದೇಹವನ್ನು ಹಲವಾರು ತುಂಡು ಮಾಡಿ ವಿವಿಧ ಸ್ಥಳಗಳಲ್ಲಿ ಎಸೆದ ಪ್ರಕರಣ ದೇಶವನ್ನು ಬೆಚ್ಚಿ ಬೀಳಿಸಿತ್ತು. ಬಾಗಲಕೋಟ ಜಿಲ್ಲೆಯಲ್ಲಿ ಅಂತಹದೇ ಪ್ರಕರಣ ನಡೆದಿದ್ದು ಮಗನೊಬ್ಬ ತನ್ನ ತಂದೆಯನ್ನು ಹತ್ಯೆ ಮಾಡಿ ನಂತರ ದೇಹವನ್ನು ಸುಮಾರು 30 ತುಂಡು ಮಾಡಿ ತಮ್ಮದೇ ತೋಟದ ಕೊಳವೆ ಬಾವಿಯಲ್ಲಿ ಹಾಕಿರುವ ಭಯಾನಕ ಘಟನೆ ಸಂಭವಿಸಿದೆ.
21 ವರುಷದ ವಿಠ್ಠಲ ಕುಳಲಿ ಎಂಬವ ತನ್ನ 54 ವರುಷದ ತಂದೆ ಪರಶುರಾಮ ಕುಳಲಿ ಎಂಬುವರನ್ನು ಮುಧೋಳ ಪಟ್ಟಣದ ಹೊರವಲಯದಲ್ಲಿರುವ ಮಂಟಿಯಾರ್ ಬೈಪಾಸ್ ಬಳಿರುವ ತಮ್ಮ ತೋಟದಲ್ಲಿ ಕಬ್ಬಿಣದ ರಾಡ್ ದಿಂದ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾನೆ, ಬಳಿಕ ಕೊಡಲಿಯಿಂದ ದೇಹವನ್ನು ಸುಮಾರು 30 ತುಂಡು ಮಾಡಿ ತೋಟದಲ್ಲಿದ್ದ ಕೊಳವೆ ಬಾವಿಯಲ್ಲಿ ಹಾಕಿದ್ದಾನೆ.
ಡಿಸೆಂಬರ್ 6 ರಂದು ಈ ಭಯಾನಕ ಕೃತ್ಯ ನಡೆದಿದ್ದು, ಮಂಗಳವಾರ ಬೆಳಕಿಗೆ ಬಂದಿದೆ. ಪರುಶುರಾಮ ಪತ್ನಿ, ತನ್ನ ಪತಿ ಕಾಣೆಯಾಗಿದ್ದ ಕುರಿತು ಮುಧೋಳ ಪೊಲೀಸರಿಗೆ ದೂರು ನೀಡಿದ್ದರು. ಮಗ ವಿಠ್ಠಲ ಮೇಲೇ ಸಂಶಯಗೊಂಡ ಪೊಲೀಸರು ತೀವ್ರ ವಿಚಾರಣೆಗೋಳಪಡಿಸಿದಾಗ ಆತ ತಾನು ಕೊಲೆ ಮಾಡಿದ್ದಾನೆಲ್ಲಾ ಒಪ್ಪಿಕೊಂಡಿದ್ದಾನೆ.
ಜೆಸಿಬಿಯಿಂದ ಕೊಳವೆ ಬಾವಿ ಅಗೆದು ಮೃತದೇಹದ ಕೆಲ ಭಾಗಗಳನ್ನು ಪೊಲೀಸರು ಹೊರ ತೆಗೆದಿದ್ದಾರೆ. ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ತಂದೆ ಪರುಶರಾಮ ಕುಡಿದ ಮತ್ತಿನಲ್ಲಿ ತನಗೆ ಬಯ್ಯುವುದು, ಹೊಡೆಯುವದು ಮಾಡುತ್ತಿದ್ದ.
ಆತನ ಉಪಟಳಕ್ಕೆ ರೋಸಿ ತಾನು ಕಬ್ಬಿಣದ ರಾಡ್ನಿಂದ ತಲೆಗೆ ಬಲವಾಗಿ ಹೊಡೆದು ನಂತರ ಮೃತದೇಹವನ್ನು ಕೊಡಲಿಯಿಂದ ತುಂಡು ತುಂಡು ಮಾಡಿ ಕೊಳವೆ ಬಾವಿಯಲ್ಲಿ ಹಾಕಿದ್ದಾಗಿ ವಿಠ್ಠಲ ಪೊಲೀಸರಿಗೆ ತಿಳಿಸಿದ್ದಾನೆ.
ಸಮದರ್ಶಿಯೊಂದಿಗೆ ಮಾತನಾಡಿದ ಬಾಗಲಕೋಟ ಪೊಲೀಸ್ ಮುಖ್ಯಸ್ಥ ಜಯಪ್ರಕಾಶ ಅವರು, ಆರೋಪಿ ವಿಠ್ಠಲ ಕುಟುಂಬದ ಐದನೇ ಮಗನಾಗಿದ್ದು ತಾನು ಮಾಡಿರುವ ಕೃತ್ಯ ಒಪ್ಪಿಕೊಂಡಿದ್ದಾನೆ. ತಂದೆ ಕುಡುಕನಾಗಿದ್ದು ಪ್ರತಿದಿನ ಕುಡಿದು ಬಂದು ಕುಟುಂಬದ ಎಲ್ಲರೊಂದಿಗೆ ಜಗಳ ಮಾಡುತ್ತಿದ್ದ, ಹೆಂಡತಿಗೂ ಹೊಡೆಯುತ್ತಿದ್ದ. ಕುಟುಂಬದ ಎಲ್ಲ ಸದಸ್ಯರು ಅವನಿಂದ ಬೇಸರಗೊಂಡಿದ್ದರು. ಕುಟುಂಬದ ನೆಮ್ಮದಿಗೋಸ್ಕರ ತಾನು ಈ ಕೃತ್ಯವೆಸಗಿರಿಸಿರುವದಾಗಿ ವಿಠ್ಠಲ ತಿಳಿಸಿದ್ದಾನೆ. ತಂದೆಯನ್ನು ಹತ್ಯೆ ಮಾಡಿದ ನಂತರ ದೇಹವನ್ನು ವಿಫಲವಾದ ನೀರಿಲ್ಲದ ಕೊಳವೆ ಬಾವಿಯಲ್ಲಿ ಹಾಕಲು ಯತ್ನಿಸಿದ್ದಾನೆ, ಆದರೆ ಸಾಧ್ಯವಾಗದ್ದರಿಂದ ಕೊಡಲಿಯಿಂದ ದೇಹವನ್ನು ತುಂಡು ತುಂಡು ಮಾಡಿ ಕೊಳವೆ ಬಾವಿಯೊಳಗೆ ಹಾಕಿದ್ದಾನೆ.
ಮೃತ ಪರುಶುರಾಮ ಪತ್ನಿ, ಎರಡು ದಿನಗಳಾದರೂ ಪತಿ ಮನೆಗೆ ಬಾರದಿರುವದರಿಂದ ಮುಧೋಳ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರಿನಲ್ಲಿ ಯಾರನ್ನೂ ನಮೂದಿಸದಿರುವದರಿಂದ ಪರುಶುರಾಮ ಮಕ್ಕಳನ್ನು ವಿಚಾರಿಸಿದಾಗ ಅವರ ಕೊನೆಯ ಐದನೇ ಮಗ ವಿಠ್ಠಲ ತಾನೇ ಈ ಕೃತ್ಯ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸರು ಜೆಸಿಬಿ ಬುಲ್ ಡೋಝರ್ ದಿಂದ ಕೊಳವೆ ಬಾವಿಯಿಂದ ಮಣ್ಣನ್ನು ಮೇಲಕ್ಕೆತ್ತಿ ಮೃತ ದೇಹದ ತುಂಡುಗಳನ್ನು ವಶ ಪಡಿಸಿಕೊಂಡಿದ್ದು ಪಂಚನಾಮೆಗಾಗಿ ಬಾಗಲಕೋಟ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮೃತ ಪರುಶುರಾಮ ಅವರ ಕುಟುಂಬದವರೂ ಸಹ ವಶ ಪಡಿಸಿಕೊಂಡಿರುವ ದೇಹದ ತುಂಡುಗಳು ಅವರದೇ ಎಂದು ಗುರುತ್ತಿಸಿದ್ದಾರೆ ಎಂದು ಎಸ್ ಪಿ ಜಯಪ್ರಕಾಶ ಸಮದರ್ಶಿಗೆ ವಿವರಿಸಿದರು.