ಬೆಂಗಳೂರು: ಇಶಾ ಫೌಂಡೇಶನ್ ಸಂಸ್ಥಾಪಕ ಜಗದೀಶ (ಜಗ್ಗಿ) ವಾಸುದೇವ ಅವರ ಮಣ್ಣು ಉಳಿಸಿ ಆಂದೋಲನಕ್ಕೆ ಕರ್ನಾಟಕದ ಬಿಜೆಪಿ ಸರ್ಕಾರ 100 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಇಂಗ್ಲಿಷ ಪತ್ರಿಕೆಯೊಂದು ವರದಿ ಮಾಡಿದೆ.
ಅಗತ್ಯ ಬಿದ್ದರೆ ಇನ್ನೂ ಹೆಚ್ಚು ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ರಾಜ್ಯದ ಬೊಕ್ಕಸದಿಂದ ವಾಸುದೇವರ ಆಂದೋಲನಕ್ಕೆ ಕೋಟ್ಯಾಂತರ ಹಣವನ್ನು ಬಿಡುಗಡೆ ಮಾಡಿರುವ ಮುಖ್ಯಮಂತ್ರಿಗಳ ನಿರ್ಧಾರ ಚರ್ಚೆಗೆ ಕಾರಣವಾಗಿದೆ.
ಕನ್ನಡದ ಕೆಲಸಕ್ಕಾಗಿ ಹಣ ಬಿಡುಗಡೆ ಮಾಡಲು ಹಿಂದೆ ಮುಂದೆ ನೋಡುತ್ತಿರುವ ಸರ್ಕಾರ ಜಗ್ಗಿ ವಾಸುದೇವ ಆಂದೋಲನಕ್ಕೆ ಕೋಟ್ಯಾಂತರ ಬಿಡುಗಡೆ ಮಾಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಅವಲಗುರ್ಕಿ ಬಳಿ ಈಶಾ ಯೋಗ ಕೇಂದ್ರ ನಿರ್ಮಿಸಿರುವ ನಾಗ ಮಂಟಪದ ಉದ್ಘಾಟನಾ ಸಮಾರಂಭದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಗ್ಗಿ ವಾಸುದೇವ ಅವರು ಆರಂಭಿಸಿದ ಮಣ್ಣು ಉಳಿಸಿ ಜಾಗತಿಕ ಆಂದೋಲನಕ್ಕೆ ಸರಕಾರ 100 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಹೆಚ್ಚಿನ ಅನುದಾನ ನೀಡಲು ಸರಕಾರ ಸಿದ್ಧವಿದೆ ಎಂದು ಭರವಸೆ ನೀಡಿದ್ದರು.
ಮುಖ್ಯಮಂತ್ರಿ @BSBommai ಅವರು ಈಶ ಫೌಂಡೇಶನ್ ವತಿಯಿಂದ ಈಶ ಯೋಗ ಕೇಂದ್ರದಲ್ಲಿ ನಿರ್ಮಿಸಿರುವ "ನಾಗ ಮಂಟಪ" ವನ್ನು ಉದ್ಘಾಟಿಸಿದರು.
ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ವಾಸುದೇವ್, ಆರೋಗ್ಯ ಸಚಿವ ಡಾ: ಕೆ.ಸುಧಾಕರ್ ಉಪಸ್ಥಿತರಿದ್ದರು.@SadhguruJV @mla_sudhakar @ishafoundation pic.twitter.com/vhIiEO9H5d
— CM of Karnataka (@CMofKarnataka) October 8, 2022
ಮಣ್ಣನ್ನು ಉಳಿಸುವುದು ಮನುಕುಲವನ್ನು ಉಳಿಸಿದಂತೆ ಎಂದು ಸದ್ಗುರು ಅವರಿಗೆ ತಿಳಿದಿದೆ, ಅದರಿಂದಾಗಿಯೇ ಈ ಅಭಿಯಾನ ಆರಂಭಿಸಿದ್ದಾರೆ. ರೈತ ಸಮುದಾಯಕ್ಕೆ ಅವರು ನಡೆಸುವ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆಂದು ಇಂಗ್ಲಿಷ್ ಪತ್ರಿಕೆ ವರದಿ ಮಾಡಿದೆ.
ಸರಕಾರ ಜಗ್ಗಿ ವಾಸುದೇವ ಅವರ ಆಂದೋಲನಕ್ಕೆ ಕೋಟ್ಯಂತರ ರೂ. ಹಣ ಬಿಡುಗಡೆ ಮಾಡಿರುವುದನ್ನು ಹಲವು ಸಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದು, ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಹಣ ನೀಡದೇ ಜಗ್ಗಿ ಆಂದೋಲನಕ್ಕೆ ಅನುದಾನ ನೀಡಿರುವುದನ್ನೂ ಪ್ರಶ್ನಿಸಿದ್ದಾರೆ.
ಇನ್ನು ಲಕ್ಷಾಂತರ ಅನುಯಾಯಿಗಳಿರುವ ಜಗ್ಗಿ ವಾಸುದೇವ್ ಅವರ ವಿರುದ್ಧ ಹಲವಾರು ಆರೋಪಗಳಿವೆ. ಚಿಕ್ಕಬಳ್ಳಾಪುರದ ಭೂಮಿಯನ್ನು ವಾಸುದೇವ ಅವರ ಈಶ ಫೌಂಡೇಶನ್ ಗೆ ನೀಡುವುದರ ಕುರಿತೂ ಈ ಹಿಂದೆ ಅಪಸ್ವರಗಳು ಎದ್ದಿದ್ದವು. ಇತ್ತೀಚೆಗೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಮುಸ್ಸಂಜೆಯ ನಂತರ ಜೀಪ್ ಸಫಾರಿ ಮಾಡಿ ವನ್ಯಜೀವಿ ಸಂರಕ್ಷಣಾ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಜಗ್ಗಿ ವಾಸುದೇವ್ ವಿರುದ್ಧ ಪೊಲೀಸರಿಗೆ ದೂರು ಸಹ ನೀಡಲಾಗಿತ್ತು.
ಇಂಥ ಕಾರ್ಯಗಳಿಗೆ ಹಣವನ್ನು ಸರ್ಕಾರವೇ ನೇರವಾಗಿ ಖರ್ಚು ಮಾಡಬೇಕು, ಇದು ಸರ್ಕಾರದ ಕೆಲಸ ಎಂದು ಕೆಲವರು ಜಾಲತಾಣಗಳ ಮೂಲಕ ಅಭಿಪ್ರಾಯ ಪಟ್ಟಿದ್ದಾರೆ.