ಬೆಳಗಾವಿ, ೧೧- ಇಲ್ಲಿಯ ಸಾರಥಿ ನಗರ ಮಸೀದಿ ಕುರಿತು ವಿನಾಕಾರಣ ಹೇಳಿಕೆ ನೀಡುತ್ತ
ಕೆಲ ದುಷ್ಟ ಶಕ್ತಿಗಳು ಬೆಳಗಾವಿಯ ಶಾಂತಿ ಸುವ್ಯವಸ್ಥೆ ಹಾಳು ಮಾಡಲು ಯತ್ನಿಸುತ್ತಿವೆ ಎಂದು ಮುಸ್ಲಿಮ ಧಾರ್ಮಿಕ ಮುಖಂಡರು ಹೇಳಿದ್ದಾರೆ.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಮುಸ್ಲಿಮ ಸಮಾಜದ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಸಾರಥಿನಗರ ಮಸೀದಿ ಕುರಿತು ವಿನಾಕಾರಣ ವಿವಾದ ಎಬ್ಬಿಸಿ ಸಮಾಜದ ಶಾಂತಿಗೆ ಭಂಗ ತರುವ ಪ್ರಯತ್ನ ಮಾಡಲಾಗುತ್ತಿದೆ. ಮಸೀದಿಗೆ ಸಂಬಂಧಿಸಿದ ದಾಖಲಾತಿಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡುತ್ತೇವೆ ಮತ್ತು ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಬೆಳಗಾವಿಯ ಉಲೇಮಾಗಳು ಹೇಳಿದರು.
ಬೆಳಗಾವಿ ಶಾಂತಿಪ್ರಿಯ ಪ್ರದೇಶ ನಗರವಾಗಿದ್ದು, ಕೆಲವು ದುಷ್ಟ ಸಂಘಟನೆಗಳು ವಿನಾಕಾರಣ ಗೊಂದಲ ಉಂಟು ಮಾಡುತ್ತಿವೆ. ನಿನ್ನೆ ಸಾರಥಿ ನಗರದಲ್ಲಿ ಕೆಲ ಜನ ಜಮಾಯಿಸಿ ಮಸೀದಿ ಕುರಿತು ಸಭೆ ಮಾಡಿ ಹೇಳಿಕೆಗಳನ್ನು ಕೊಡುವುದನ್ನು ನಾವು ಖಂಡಿಸುತ್ತೇವೆ. ಕಾನೂನು ಪ್ರಕಾರ ಮಸೀದಿ ಕುರಿತು ಪ್ರಶ್ನೆ ಮಾಡುವ ಅಧಿಕಾರ ಇವರಿಗಿಲ್ಲ. ದಾಖಲೆ ಪರಿಶೀಲಿಸುವುದು ಸರಕಾರದ ಕೆಲಸ. ಹೇಳಿಕೆ ಕೊಡುವುದನ್ನು ಬಿಟ್ಟು ಆಡಳಿತ ನಡೆಸುವವರ ಕಡೆ ಹೋಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.
ಮಸೀದಿ ಕುರಿತು ನಮ್ಮ ಬಳಿ ದಾಖಲಾತಿಗಳೆಲ್ಲ ಸರಿ ಇದ್ದು, ನಾವು ಕೂಡಾ ಜಿಲ್ಲಾಧಿಕಾರಿ ಹಾಗು ಪೊಲೀಸ್ ಇಲಾಖೆಗೆ ಸಹಕಾರ ನೀಡಿದ್ದೇವೆ ಎಂದು ಫಜಲ್ ಪಠಾಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರ ಸೇವಕ ಅಜೀಮ ಪಟವೇಕರ, ಮುಫ್ತಿ ಮಂಜುರಾಲಂ, ಮೌಲಾನಾ ಸಲೀಮ, ಮುಸ್ತಾಕ ಅಶ್ರಫ, ನಗರ ಸೇವಕ ರೇಶ್ಮಾ ಬೈರಕದಾರ ಆದಿ ಉಪಸ್ಥಿತರಿದ್ದರು.