ಹೊಸದಿಲ್ಲಿ: ಕರ್ನಾಟಕ ಸೇರಿದಂತೆ ದೇಶದ ಕೆಲ ರಾಜ್ಯಗಳಲ್ಲಿ ಕ್ರೈಸ್ತ ಸಮುದಾಯದ ಸಂಸ್ಥೆಗಳ ಮೇಲೆ ದಾಳಿಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯಗಳಿಂದ ವರದಿ ಪಡೆದುಕೊಳ್ಳುವಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಸುಪ್ರೀಮ ಕೋರ್ಟ ಸೂಚನೆ ನೀಡಿದೆ.
ಈ ಕುರಿತು ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ , ಒಡಿಶಾ, ಛತ್ತೀಸಗಡ ಮತ್ತು ಜಾರ್ಖಂಡ ಸೇರಿದಂತೆ ವಿವಿಧ ರಾಜ್ಯಗಳು ವರದಿ ನೀಡಬೇಕಿದೆ.
ವ್ಯಕ್ತಿಗಳ ಮೇಲೆ ನಡೆಯುವ ದಾಳಿಗಳನ್ನು ಸಮುದಾಯದ ಮೇಲಿನ ದಾಳಿ ಎಂದು ಅರ್ಥೈಸುವ ಅಗತ್ಯವಿಲ್ಲ. ಆದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಅಂತಹ ಯಾವುದೇ ಘಟನೆಗಳ ಬಗ್ಗೆ ಉಲ್ಲೇಖಿಸಿದ್ದರೆ ಅವುಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.
ಅರ್ಜಿಯಲ್ಲಿ ಆರೋಪಿಸಿರುವ ಬಹುಪಾಲು ಪ್ರಕರಣಗಳು ಸುಳ್ಳು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಅಂತಹ ಅರ್ಜಿಗಳ ವಿಚಾರದಲ್ಲಿ ಕೋರ್ಟ್ ಆದೇಶ ಪ್ರಕಟಿಸಬಾರದು. ಹೀಗಾದರೆ ಅದು ಸಮಸ್ಯೆಗಳ ಸರಮಾಲೆಯನ್ನೇ ಸೃಷ್ಟಿಸುತ್ತದೆ ಎಂದು ಅವರು ವಾದಿಸಿದ್ದಾರೆ.
ರಾಜ್ಯಗಳಿಂದ ವರದಿ ಪಡೆದುಕೊಳ್ಳಲು ಗೃಹ ಸಚಿವಾಲಯಕ್ಕೆ ನ್ಯಾಯಪೀಠ ಎರಡು ತಿಂಗಳ ಕಾಲಾವಕಾಶ ನೀಡಿದ್ದು, ಇಂಥ ಘಟನೆಗಳ ವರದಿ ಪಡೆಯಲು ಮತ್ತು ನಿಗಾ ವಹಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವಂತೆ ಕೋರ್ಟ್ ಈ ಹಿಂದೆ ನೀಡಿದ್ದ ಆದೇಶಗಳನ್ನು ರಾಜ್ಯಗಳು ಪಾಲಿಸುತ್ತಿವೆಯೇ ಎನ್ನುವುದನ್ನು ತಿಳಿದುಕೊಳ್ಳುವುದಷ್ಟೇ ತನ್ನ ಕಳಕಳಿಯಾಗಿದೆ ಎಂದು ಕೋರ್ಟ ಹೇಳಿದೆ.
ನ್ಯಾಷನಲ್ ಸಾಲಿಡರಿಟಿ ಫೋರಂನ ರೆವೆರೆಂಡ ಡಾ. ಪೀಟರ್ ಮಚಾಡೋ, ಎವ್ಯಾಂಗೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾದ ರೆವರೆಂಡ್ ವಿಜಯೇಶ ಲಾಲ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿ ಆಧಾರದಲ್ಲಿ ಕೋರ್ಟ ಈ ಸೂಚನೆ ನೀಡಿದೆ.
ದೇಶದಲ್ಲಿ ಕ್ರೈಸ್ತ ಸಮುದಾಯದವರ ಮೇಲೆ ಹಿಂಸಾಚಾರಗಳು ನಡೆಯುತ್ತಿವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.